Saturday, July 7, 2012

ಪಶ್ಚಿಮ ಘಟ್ಟಗಳು 'ವಿದೇಶಿ ಸ್ವತ್ತು' ಆಯಿತೇ?



ಕರ್ನಾಟಕದ ಪಶ್ಚಿಮ ಘಟ್ಟಗಳ ಕೆಲ ಪ್ರದೇಶಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿರುವುದು ರಾಜ್ಯದಲ್ಲೀಗ ಚರ್ಚೆಗೆ ಬಹು ದೊಡ್ಡ ವಿಷಯವಾಗಿದೆ. ರಾಜ್ಯದಲ್ಲಿ ಅಲ್ಲೋಲಕಲ್ಲೋಲದ ವಾತಾವರಣವಾಗಿರುವ ಹಾಗೆ ಮಾಧ್ಯಮಗಳಲ್ಲಿ ಈ ವಿಚಾರವು ಪ್ರಚಾರ ಪಡೆಯುತ್ತಿದೆ. ಕರ್ನಾಟಕದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನ (ನ್ಯಾಶನಲ್ ಪಾರ್ಕ್), ಸೋಮೇಶ್ವರ, ಬ್ರಹ್ಮಗಿರಿ, ಪುಷ್ಪಗಿರಿ ಮತ್ತು ತಲಕಾವೇರಿ ಅಭಯಾರಣ್ಯಗಳು (ವೈಲ್ಡ್‌ಲೈಫ್ ಸ್ಯಾಂಕ್ಚುರಿ), ಪದಿನಾಲ್ಕನಾಡ್, ಕೆರ್ಟಿ, ಬಾಳಹಳ್ಳಿ, ಸೋಮೇಶ್ವರ ಮತ್ತು ಆಗುಂಬೆ ಕಾಯ್ದಿಟ್ಟ ಅರಣ್ಯಗಳನ್ನು (ರಿಸರ್ವ್ ಫಾರೆಸ್ಟ್)   ಇತ್ತೀಚೆಗೆ ವಿಶ್ವ ಸಂಸ್ಥೆಯ ಶಿಕ್ಷಣ, ವಿಜ್ಞಾನ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ (ಯುನೆಸ್ಕೋ) ವಿಶ್ವ ಪಾರಂಪರಿಕ ನೈಸರ್ಗಿಕ ತಾಣವೆಂದು ಗುರುತಿಸಲಾಗಿದೆ.

ವಿಪರ್ಯಾಸವೆಂದರೆ, ಇದರ ಪರವಿರುವವರು  (ಇವರ ಸಂಖ್ಯೆ ಬಹು ವಿರಳ) ಮತ್ತು ವಿರೋಧಿಸುತ್ತಿರುವವರಿಗಿಬ್ಬರಿಗೂ ಈ ವಿಚಾರವಾಗಿ ತಪ್ಪು ಗ್ರಹಿಕೆಗಳಿವೆ.

ಸಂರಕ್ಷಣಾ ಕಾನೂನುಗಳು
ಪಶ್ಚಿಮ ಘಟ್ಟಗಳನ್ನು ಪಾರಂಪರಿಕ ಪಟ್ಟಿಗೆ ಸೇರಿಸಿದರೆ ಇಲ್ಲಿನ ಕಾಡುಗಳ ರಕ್ಷಣೆಯಾಗುತ್ತದೆಯೆಂದು ಹಲವರು ವಿಜೃಂಭಿಸಿದ್ದಾರೆ. ಕೆಲವು ಅಭಿವೃದ್ಧಿ ಕಾರ್ಯಗಳಿಂದ ಪಶ್ಚಿಮ ಘಟ್ಟಗಳ ಕಾಡುಗಳ ನಾಶವನ್ನು ಈ ಪಟ್ಟಿ ತಡೆಯುತ್ತದೆಂದು ನಂಬಿದ್ದಾರೆ. ವಿಪರ್ಯಾಸವೆಂದರೆ, ಪಶ್ಚಿಮ ಘಟ್ಟಗಳನ್ನು ಈ ಪಟ್ಟಿಗೆ ಸೇರಿಸಿದೊಡನೆ ಯಾವುದೇ ಹೆಚ್ಚಿನ ರಕ್ಷಣೆಯಾಗುವುದಿಲ್ಲ. ಇದರಿಂದ ಯಾವುದೇ ಹೊಸ ಕಾನೂನು ಕಟ್ಟಳೆಗಳು ಬರುವುದಕ್ಕೆ ಸಾಧ್ಯವೇ ಇಲ್ಲ, ಇದೊಂದು ಮಾನ್ಯತೆಯಷ್ಟೇ.

ನಮ್ಮ ದೇಶದಲ್ಲಿ (ಅಥವಾ ಇನ್ನ್ಯಾವುದೇ ದೇಶದಲ್ಲಾದರೂ) ಕಾನೂನು ಮಾಡುವ ಹಕ್ಕು ನಮ್ಮ ಚುನಾಯಿತ ಪ್ರತಿನಿಧಿಗಳಿಗೆ (ಎಂ.ಲ್.ಎ, ಎಂ.ಲ್.ಸಿ, ಎಂ.ಪಿ) ಮಾತ್ರ ಇರುವ ಅವಕಾಶ. ಅದು ವಿಧಾನಸಭೆ, ವಿಧಾನ ಮಂಡಲ, ಲೋಕಸಭೆ ಮತ್ತು ರಾಜ್ಯ ಸಭೆಗಳಲ್ಲಿ ಚರ್ಚೆಗಳಾಗಿ, ವಿಧೇಯಕಗಳನ್ನು ಅಂಗೀಕರಿಸಿದಾಗ ಮಾತ್ರ ಹೊಸ ಕಾನೂನು ಮಾಡಲು ಸಾಧ್ಯವೇ ಹೊರತು ಯಾವುದೇ ವಿದೇಶೀ ಸರ್ಕಾರವಾಗಲಿ, ವಿದೇಶೀ ಸಂಘಟನೆಗಳಾಗಲಿ ಅಥವಾ ಯುನೆಸ್ಕೋದಂತಹ ಅಂತರಾಷ್ಟ್ರೀಯ ಸಂಸ್ಥೆಯಾಗಲಿ ಮಾಡಲು ಅವಕಾಶವೇ ಇಲ್ಲ. ನಮ್ಮದೊಂದು ಸ್ವತಂತ್ರ ಪ್ರಜಾಪ್ರಭುತ್ವ ದೇಶ, ಯಾವುದೇ ದೇಶದ ವಸಾಹತು ಪ್ರದೇಶವಲ್ಲ. ಇಲ್ಲಿನ ಕಾನೂನು, ನಿಯಮಗಳನ್ನು ರೂಪಿಸುವುದು ನಮ್ಮ ಜವಾಬ್ದಾರಿ ಮತ್ತು ಹಕ್ಕು.

ನಮ್ಮ ಅರಣ್ಯ, ಪ್ರಕೃತಿ, ವನ್ಯಜೀವಿಗಳ ಸಂರಕ್ಷಣೆಯಾಗುತ್ತಿರುವುದು ನಮ್ಮ ದೇಶದಲ್ಲಿರುವ ವನ್ಯಜೀವಿ ಸಂರಕ್ಷಣಾ ಕಾಯಿದೆ, ಅರಣ್ಯ ಸಂರಕ್ಷಣಾ ಕಾಯಿದೆ, ಪರಿಸರ ಸಂರಕ್ಷಣಾ ಕಾಯಿದೆ, ಜೀವಿವೈವಿಧ್ಯ ಕಾಯಿದೆ ಮತ್ತು ರಾಜ್ಯದ, ಕರ್ನಾಟಕ ಅರಣ್ಯ ಕಾಯಿದೆಗಳಿಂದ.. ಇವು ಪ್ರಪಂಚದಲ್ಲೇ ನಿಸರ್ಗ ಸಂರಕ್ಷಣೆಗಿರುವ ಬಹು ಕಠಿಣವಾದ ಕಾಯಿದೆಗಳಲ್ಲಿ ಕೆಲವು. ಇವುಗಳನ್ನು ಸರಿಯಾಗಿ ಪಾಲಿಸಿದರೆ ನಮ್ಮ ಜೈವಿಕ ಸಂಪತ್ತಿನ ಉತ್ತಮ ರಕ್ಷಣೆಯಾಗುತ್ತದೆಯೇ ಹೊರತು ಯಾವುದೇ ಪಟ್ಟಿ ಹಚ್ಚಿದರೂ ಆಗುವುದಿಲ್ಲ.

ಈಗ ಪಟ್ಟಿಯಲ್ಲಿರುವ ಕಾಯ್ದಿಟ್ಟ ಅರಣ್ಯ ಪ್ರದೇಶಗಳನ್ನು ಅಭಯಾರಣ್ಯಗಳನ್ನಾಗಿಯಾದರೂ ಘೋಷಿಸಿದರೆ ಅವಕ್ಕೆ ಹೆಚ್ಚು ರಕ್ಷಣೆಯೊದಗುತ್ತದೆ. ಅವುಗಳನ್ನು ಅರಣ್ಯೇತರ ಚಟುವಟಿಕೆಗಳಿಗೆ (ಗಣಿಗಾರಿಕೆ, ಹೆದ್ದಾರಿ ಹಾಗೂ ಇನ್ನಿತರ ಬೃಹತ್ ಯೋಜನೆಗಳಿಗೆ) ವಿನಿಯೋಗಿಸುವುದಕ್ಕೆ ಹೆಚ್ಚಿನ ನಿರ್ಬಂಧ ಬರುತ್ತದೆ.

ಆದರೆ ಇವುಗಳನ್ನು ವಿಶ್ವ ಪಾರಂಪರಿಕ ಸ್ಥಳವೆಂದು ಘೋಷಿಸಿದೊಡನೆ ಯಾವುದೇ ಕಾನೂನು ತರಲು ಸಾಧ್ಯವಿಲ್ಲ. ನಾಲ್ಕಾರು ಫಲಕಗಳನ್ನು ಹಾಕಬಹುದೇ ವಿನ: ಇದಕ್ಕಿಂತ ಹೆಚ್ಚೇನೂ ಮಾಡಲಾಗುವುದಿಲ್ಲ. ಬಹುಶ: ಕೇರಳ ರಾಜ್ಯ ತಮ್ಮ ಕಿರುಹೊತ್ತಿಗೆಗಳಲ್ಲಿ, ಪ್ರಚಾರ ಸಮಾಗ್ರಿಗಳಲ್ಲಿ ವಿಶ್ವ ಪಾರಂಪರಿಕ ಸ್ಥಳಗಳ ಚಿಹ್ನೆಯನ್ನು ರಾಜ್ಯದ ಪ್ರವಾಸೋದ್ಯಮದ ಸಂಭಾವ್ಯಗಳನ್ನು ಮಾರುಕಟ್ಟೆಯಲ್ಲಿ ಪ್ರಚಾರ ಪಡಿಸಬಹುದಷ್ಟೇ. ಆದರೆ ಇನ್ನೊಂದು ದೃಷ್ಟಿಕೋನದಿಂದ ನೋಡಿದರೆ ತಾಜ್‌ಮಹಲು ವಿಶ್ವ ಪಾರಂಪರಿಕ ಪಟ್ಟಿಯಲ್ಲಿರದಿದ್ದರೂ ಅಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೇನೂ ಕಡಿಮೆಯಾಗುವುದಿಲ್ಲ. ಹಾಗೆಯೇ ಪಶ್ಚಿಮ ಘಟ್ಟಗಳಿಗೆ ಅನಿಯಂತ್ರಿತ ಪ್ರವಾಸೋದ್ಯಮದಿಂದ ಕೂಡ ಹಾನಿಕಾರಕ. ಅಲ್ಲೇನೋ ವೈಶಿಷ್ಟ್ಯವಿದೆಯೆಂದು ಪ್ರಚಾರ ಪಡಿಸಿದರೆ ಸಾಕು, ಪ್ರವಾಸಿಗಳು ಟನ್‌ಗಟ್ಟಲೆ ಪ್ಲಾಸ್ಟಿಕ್ ತಂದು ಸುರಿಯುತ್ತಾರೆ, ನೂರಾರು ರೆಸಾರ್ಟ್‌ಗಳು ಅರಣ್ಯ ಪ್ರದೇಶದಲ್ಲೆಲ್ಲ ತಲೆಯೆತ್ತುತ್ತವೆ, ವನ್ಯಜೀವಿ ಪಡಸಾಲೆಗಳಲೆಲ್ಲ ಹೋಂ ಸ್ಟೇ, ಪ್ರವಾಸೋದ್ಯಮದ ಹೆಸರಿನಲ್ಲಿ ಕಟ್ಟಡಗಳು,  
ಹೆದ್ದಾರಿಗಳೆಲ್ಲ ಬಂದು ವನ್ಯಜೀವಿಗಳಿಗೆ ಮಾರಕವಾಗುತ್ತವೆ.

ಇಷ್ಟನ್ನು ಬಿಟ್ಟರೆ, ಪಾರಂಪರಿಕ ತಾಣಗಳಿಗೆ ಅತೀ ಹೆಚ್ಚಿನ ಅಪಾಯವಿದ್ದರೆ ಆ ತಾಣವನ್ನು ಪಟ್ಟಿಯಿಂದ ತೆಗೆಯುತ್ತೇವೆಂದು ಹೇಳಬಹುದು. ೧೯೯೪ರಲ್ಲಿ ಒಮಾನ್ ದೇಶದ ಅರೇಬಿಯನ್ ಆರಿಕ್ಸ್ ಅಭಯಾರಣ್ಯವನ್ನು ವಿಶ್ವ ಪಾರಂಪರಿಕ ಪಟ್ಟಿಯಿಂದ ತೆಗೆಯಲಾಯಿತು. ಅಭಯಾರಣ್ಯದ ಶೇಕಡ ೯೦ರಷ್ಟು ಪ್ರದೇಶವನ್ನು ಒಮಾನ್ ದೇಶ ಡಿನೋಟಿಫೈ ಮಾಡಿದ ಪರಿಣಾಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಯುನೆಸ್ಕೊದ ಈ ನಿರ್ಧಾರದಿಂದ ಅಲ್ಲಿನ ಜೀವ ಸಂಕುಲಕ್ಕೆ ಒದಗಿದ ಅಪಾಯವೇನು ನಶಿಸಲಿಲ್ಲ.

ಪರಿಸ್ಥಿತಿ ಇನ್ನೂ ವಿಕೋಪಕ್ಕೆ ಹೋದರೆ ಅಫಘಾನಿಸ್ತಾನದಲ್ಲಿ ಬಮಿಯಾನ್ ಬುದ್ಧನ ವಿಗ್ರಹಗಳನ್ನು ಉಗ್ರಗಾಮಿಗಳು ಹೊಡೆದುರುಳಿಸುತ್ತಿದ್ದಾಗ ಯುನೆಸ್ಕೋ ಅವುಗಳನ್ನು ಹಾಳು ಮಾಡದ ಹಾಗೆ ಕೊಟ್ಟ ಕರೆಯ ಹಾಗೆ ಕರೆಮಾಡಬಹುದು. ಈಗ ಮಾಲಿ ದೇಶದಲ್ಲಿ ಉಗ್ರಗಾಮಿಗಳು ಟಿಂಬ್ಕ್‌ಟುವಿನ ಪ್ರ್ರಾಚೀನ ಇಸ್ಲಾಮ್ ಮಸೀದಿಗಳನ್ನು ಹಾಳುಗೆಡವ ಹೊರಟಿರುವ ಸ್ಥಳಗಳೂ ಕೂಡ ವಿಶ್ವ ಪಾರಂಪರಿಕ ಸ್ಥಾನದ ಪಟ್ಟಿಯಲ್ಲಿವೆ.

ನಮ್ಮ ದೇಶದ ಕಾಜಿರಂಗ, ಸುಂದರಬನ್ ರಾಷ್ಟ್ರೀಯ ಉದ್ಯಾನಗಳು, ಮುಂಬೈನ ಛತ್ರಪತಿ ಶಿವಾಜಿ ರೈಲು ನಿಲ್ದಾಣ (ಮುಂಚೆ ವಿಕ್ಟೋರಿಯ ಟರ್‌ಮಿನಸ್), ದೆಹಲಿಯ ಕೆಂಪು ಕೋಟೆ, ಸಾಂಚಿ ಸ್ತೂಪಗಳು ಹೀಗೆ ಹಲವಾರು ಸ್ಥಳಗಳನ್ನು ವಿಶ್ವ ಪಾರಂಪರಿಕ ಸ್ಥಾನಕ್ಕೆ ಸೇರಿಸಲಾಗಿದೆ.

ತುರ್ತು ಪರಿಸ್ಥಿತಿಗಳಲ್ಲಿ ಸ್ವಲ್ಪ ಸಹಾಯ ಧನವನ್ನು ಕೊಡಬಹುದು, ಅದೂ ಕೂಡ ಸದಸ್ಯ ದೇಶಗಳ (ಭಾರತವನ್ನೂ ಸೇರಿ) ದೇಣಿಗೆಯ ಮೇಲೆ ಅವಲಂಬಿತವಾಗಿದೆ. ಆ ಸಹಾಯಧನ ಸಹಾ, ನಮ್ಮ ಸರ್ಕಾರದವರು ಅರ್ಜಿ ಸಲ್ಲಿಸಿದರೆ, ಬಂದಿರುವ ಹಲವಾರು ದೇಶಗಳ ಅರ್ಜಿಗಳಲ್ಲಿ ಉತ್ತಮವಾದುದಕ್ಕೆ ಸಿಗಬಹುದು. ಅದರಲ್ಲಿ ನಮ್ಮ ದೇಣಿಗೆಯೂ ಇರಬೇಕಾಗುತ್ತದೆ.

ವಿಶ್ವ ಪಾರಂಪರಿಕ ತಾಣದಿಂದಾಗುವ ಪರಿಣಾಮಗಳು
ಕೆಲವರು ಇದರ ರಾಜಕೀಯ ಲಾಭವನ್ನು ಪಡೆಯಲು ಕೂಡ ಪ್ರಯತ್ನಿಸುತ್ತಿದ್ದಾರೆ. ಪಾರಂಪರಿಕ ಪಟ್ಟಿಯಲ್ಲಿರುವ ಪ್ರದೇಶದಿಂದ ಜನರನ್ನು ಪುನರ್ವಸತಿ ಮಾಡಲಾಗುತ್ತದೆ, ಕೊಳವೆ ಬಾವಿ ತೋಡಲು ಕೂಡಾ ವಿದೇಶೀಯರ ಅನುಮತಿ ಕೇಳಬೇಕಾಗುತ್ತದೆ, ಹೀಗೇ ಇನ್ನಿತರ ಹಲವು ಗಾಳಿಸುದ್ದಿಗಳನ್ನು ಹಬ್ಬಿಸಲಾಗಿದೆ. ಏನೂ ತಿಳಿಯದ ಮುಗ್ಧ ಹಳ್ಳಿ ಜನರಿಗೆ ಹೀಗೆ ಹೇಳಿ ಅವರನ್ನು ಆತಂಕಕ್ಕೀಡು ಮಾಡುವುದೆಷ್ಟು ಸಮಂಜಸ? ಇದರಿಂದ ರಾಜಕೀಯ ಲಾಭವಾಗುವುದಂತೂ ಖಂಡಿತ, ಆದರೆ ತಿಳಿಯದ ಜನರಲ್ಲಿ ಗೊಂದಲವುಂಟು ಮಾಡುವುದರಿಂದ ಲಾಭವಾಗುವುದಾದರೂ ಯಾರಿಗೆ?

ಬಹು ಆಶ್ಚರ್ಯಕರವಾದ ವಿಷಯವೆಂದರೆ, ನಮ್ಮ ರಾಜ್ಯದ ಅರಣ್ಯ ಭಾಗಗಳ ಬಗ್ಗೆ ವರದಿ ತಯಾರಿಸಲು ಯುನೆಸ್ಕೋದಿಂದ ಗುತ್ತಿಗೆ ಪಡೆದು ವರದಿ ತಯಾರಿಸಿದ ಸಂಸ್ಥೆಯವರು ಈಗ ಇದರ ಬಗ್ಗೆ ಸಂಪೂರ್ಣ ನಿಶ್ಶಬ್ದವಾಗಿದ್ದಾರೆ. ಅವರಿಗೂ ಇದಕ್ಕೂ ಸಂಬಂಧವಿಲ್ಲದ ಹಾಗೆ ಮೌನವಹಿಸಿದ್ದಾರೆ. ಅವರೊಬ್ಬರನ್ನು ಬಿಟ್ಟು ಇನ್ನುಳಿದವರೆಲ್ಲರೂ (ರಾಜಕಾರಣಿಗಳು ಮತ್ತು ಪರಿಸರವಾದಿಗಳು) ಇದರ ಪರ, ವಿರೋಧದ ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ಇಷ್ಟೆಲ್ಲಾ ಚರ್ಚೆಗಳಾಗುತ್ತಿದ್ದರೂ ಸಾರ್ವಜನಿಕವಾಗಿ ಇದರ ನಿಜಾಂಶವನ್ನು ತಿಳಿಹೇಳಲು ಮುಂದೆ ಬರದೆ ಜನರಲ್ಲಿ ಹೆಚ್ಚು ಗೊಂದಲ ಸೃಷ್ಟಿಯಾಗುತ್ತಿದ್ದರೂ, ನೀರವತೆ ವಹಿಸಿರುವುದರಿಂದ ನಿಸರ್ಗ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡವರನ್ನೆಲ್ಲ ಜನ ಅನುಮಾನದ ದೃಷ್ಟಿಯಿಂದ ನೋಡುವ ಹಾಗಾಗಿದೆ.

ಬಹುಶ: ಯುನೆಸ್ಕೋ ಸಂಸ್ಥೆಯ ವೆಬ್‌ಸೈಟು ನೋಡಿದರೆ (http://www.unesco.org/new/en/) ನಮ್ಮಲ್ಲಿನ ಹಲವು ಅನುಮಾನಗಳಿಗೆ ಉತ್ತರ ಸಿಗಬಹುದು. ಅಂತರ್ಜಾಲದ ಲಭ್ಯವಿಲ್ಲದವರಿಗೆ ಸ್ಥಳೀಯ ಸರ್ಕಾರಿ ಅಧಿಕಾರಿಗಳು, ಸಂಘ-ಸಂಸ್ಥೆಯವರು ಅದರ ನಕಲನ್ನು ಕನ್ನಡದಲ್ಲಿ ಭಾಷಾಂತರಿಸಿ ಸ್ಥಳೀಯರಿಗೆ ತಲುಪಿಸಿ ಪ್ರಚಾರ ನೀಡಿದರೆ ಪರಿಸ್ಥಿತಿ ಸ್ವಲ್ಪವಾದರೂ ತಿಳಿಯಾಗಬಹುದು.

ದಿನ ನಿತ್ಯ ಜನನಾಯಕರು, ಅಧಿಕಾರಿಗಳೊಡನೆ ವನ್ಯಜೀವಿ, ನಿಸರ್ಗ ಸಂರಕ್ಷಣೆಗೆ ಕೆಲಸ ಮಾಡುವವರಿಗೆ ಇದು ದೊಡ್ಡ ತೊಂದರೆಯನ್ನೊಡ್ಡಿದೆ. ನೈಜವಾಗಿ ನಿಸರ್ಗ ಸಂರಕ್ಷಣೆಯಾಗುವ ಕಾರ್ಯಕ್ಕೆ ಇದರಿಂದ ಹಿನ್ನಡೆಯಾಗಿದೆ. ಯಾವುದೇ ಅಧಿಕಾರಿ, ರಾಜಕೀಯ ನಾಯಕರ ಬಳಿ ವನ್ಯಜೀವಿ ಸಂರಕ್ಷಣೆಯ ವಿಚಾರ ಚರ್ಚಿಸುವುದು ಬಹು ದಿನಗಳವರೆಗೆ ಇನ್ನು ಕಷ್ಟದ ಕೆಲಸ.

ಆದ್ದರಿಂದ ಪಶ್ಚಿಮ ಘಟ್ಟಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿದರೆ ಹೇಗೆ ಲಾಭವಿಲ್ಲವೋ, ಹಾಗೇ ಅದನ್ನು ಸೇರಿಸದಿದ್ದರೆ ನಷ್ಟವೂ ಇಲ್ಲ. ಇದರಿಂದ ನಿಸರ್ಗ ಸಂರಕ್ಷಣೆಗೆ ಲಾಭವಿಲ್ಲದ ಮೇಲೆ ಇಷ್ಟು ಜನ, ಜನನಾಯಕರ ವಿರೋಧವೇಕೆ ಬೇಕು? ಮೊದಲೇ ವನ್ಯಜೀವಿ ಸಂರಕ್ಷಣೆಯ ಬೆಂಬಲಕ್ಕೆ ಬರುವವರೇ ಇಲ್ಲ, ಈ ಪರಿಸ್ಥಿಯಲ್ಲಿ ಈ ವಿವಾದ, ವಿರೋಧ ಬೇಕಿತ್ತೇ? ನಿಜವಾಗಿಯೂ ಇದರಿಂದ ಉಪಯೋಗವಿದ್ದಿದ್ದರೆ ಹೋರಾಡುವುದರಲ್ಲಿ ಅರ್ಥವಿತ್ತು, ಆದರೆ ನೈಜವಾಗಿ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಉಪಯೋಗವಾಗುವ ವಿಚಾರಗಳನ್ನು ಬಿಟ್ಟು, ಅದರಿಂದ ನೇರ ಅಥವಾ ಪರೋಕ್ಷವಾಗಿ ಉಪಯೋಗವಿಲ್ಲದ ವಿಚಾರಗಳಿಗೆ ಸಮಯ ಹಾಕುವುದರಲ್ಲಿ ಲಾಭವಿದೆಯೇ? ಇರುವ ನಮ್ಮ ಕಾನೂನುಗಳ ಬಗ್ಗೆಯೇ ಸ್ಥಳೀಯರಲ್ಲಿರುವ ಗೊಂದಲಗಳು ಸಾಲದೆಂದು ಇನ್ನೊಂದು ಅಸ್ತವ್ಯಸ್ತತೆ.

ಇದರಿಂದ ಬಹುಶ: ವನ್ಯಜೀವಿ ಸಂರಕ್ಷಣೆ, ನಿಸರ್ಗ ಸಂರಕ್ಷಣೆಗೆ ಇನ್ನೂ ಹೆಚ್ಚಿನ ವಿರೋಧ, ಪ್ರತಿಬಂಧಕಗಳು ವ್ಯಕ್ತವಾಗುವುದು ಮುಂದಿನ ದಿನಗಳಲ್ಲಿ ನಾವು ಎದುರು ನೋಡಬಹುದಾದ ಪರಿಸ್ಥಿತಿ. ನಮ್ಮ ಕಾನೂನನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ನಮ್ಮ ಚೈತನ್ಯವನ್ನು ಕಾರ್ಯಕಾರಿಯಾಗಿಸ ಬೇಕಾಗಿದೆ. ದುರಾದೃಷ್ಟವಶಾತ್ ಅಂತಹಾ ಸಂದರ್ಭಗಳಲ್ಲಿ ನಮ್ಮ ವನ್ಯಜೀವಿ, ನಿಸರ್ಗ ಸಂರಕ್ಷಣೆಯ ವೈಜ್ಞಾನಿಕ ಸಮುದಾಯ ಅದು ನಮ್ಮದಲ್ಲದ ಕೆಲಸವೆಂದು ಮೌನ ವಹಿಸುತ್ತದೆ.

ವಿಶ್ವ ಪಾರಂಪರಿಕ ತಾಣದ ಪಟ್ಟಿಯಲ್ಲಿ ಪಶ್ಚಿಮ ಘಟ್ಟಗಳು ಸೇರ್ಪಡೆಯಾದರೆ ಹೆಮ್ಮೆಯ ವಿಷಯವೇ, ಅದು ಒಳಗೊಂಡಿಲ್ಲವಾದರೆ ಬಹುಶಃ ಹೆಚ್ಚಿನ ನಷ್ಟವೇನೂ ಇಲ್ಲ. ಇದೇನು ವನ್ಯಜೀವಿ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡವರೇ ಹೀಗೆ ಹೇಳುತ್ತಿರುವರೆಂದು ಹಲವರು ಹೀಯಾಳಿಸಬಹುದು. ಆದರೆ ರಾಜಕೀಯ ನಾಯಕರು, ಜನಪ್ರತಿನಿಧಿಗಳು, ಅಧಿಕಾರಿಗಳೊಡನೆ ನಿಸರ್ಗ ಸಂರಕ್ಷಣೆಗೆ ಒಲಿಸಿಕೊಂಡು ಕೆಲಸ ಮಾಡಿದರೆ ಕಾರ್ಯ ಬಹು ಹಗುರ. ದಿಟವಾಗಿ, ವಾಸ್ತವದಲ್ಲಿ ಗಣನೀಯ ಬದಲಾವಣೆಗಳು ಬರುವ ಹಾಗಿದ್ದರೆ, ನಮ್ಮ ಪಶ್ಚಿಮ ಘಟ್ಟಗಳಿಗೆ ಮಾರಕವಾಗಿರುವ ಅಪಾಯಗಳನ್ನು ತಡೆಯುವ ಶಕ್ತಿ ಈ ಪಟ್ಟಿಗಿದ್ದಿದ್ದರೆ, ಖಂಡಿತಾ ಇದರ ಅನುಷ್ಠಾನಕ್ಕೆ ಎಲ್ಲರ ವಿರೋಧ ಕಟ್ಟಿಕೊಂಡು ಹೋರಾಡುವುದರಲ್ಲಿ ಅರ್ಥವಿರುತ್ತಿತ್ತು.

Monday, May 28, 2012

ಒಂದು ಅನನುಕೂಲ ಸತ್ಯ


ಮಹಾರಾಷ್ಟ್ರದ ಚಂದ್ರಾಪುರದ ಕಾಡುಗಳಲ್ಲಿ ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಎರಡು ಹುಲಿಗಳು ದವಡೆಕತ್ತರಿಯಲ್ಲಿ(ಜಾಟ್ರಾಪ್) ಸಿಕ್ಕಿದ ಪ್ರಕರಣ ಅರಣ್ಯ ಇಲಾಖೆಯ ಗಸ್ತು ತಿರುಗುತ್ತಿದ್ದ ಸಿಬ್ಬಂದಿಗಳಿಂದ ತಿಳಿಯಿತು. ಇದರಲ್ಲಿ ಹುಲಿಯೊಂದು ಸ್ಥಳದಲ್ಲೇ ಮರಣ ಹೊಂದಿತ್ತು. ಇನ್ನೊಂದು ನಾಗಪುರದ ವನ್ಯಜೀವಿ ಪುನಶ್ಚೇತನಾ ಕೇಂದ್ರದಲ್ಲಿ ಎರಡೂ ಮೂತ್ರಪಿಂಡಗಳು ಹಾನಿಗೊಳಗಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದೆ. ನಾಗರಹೊಳೆಯ ಉತ್ತರದಲ್ಲಿರುವ ದೊಡ್ಡಹರವೆ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಹೋದ ತಿಂಗಳು ಸ್ಥಳೀಯ ವ್ಯಕ್ತಿಯೂಬ್ಬನು ಹುಲಿ ಬೇಟೆಯಾಡಿ ಪೋಲಿಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಇದೇ ತಿಂಗಳು ಹಿಮಾಚಲ ಪ್ರದೇಶದಲ್ಲಿ ೨೨ ವರ್ಷದ ಬಾಕ್ಸಿಂಗ್ ಕ್ರೀಡಾ ತರಬೇತುದಾರನೊಬ್ಬನಿಂದ ಮೂರು ಚಿರತೆ ಚರ್ಮಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಇದೇ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಹುಲಿ ಚರ್ಮ, ಮತ್ತೊಂದು ಚಿರತೆ ಚರ್ಮವನ್ನು ವಶಪಡಿಸಿಕೊಂಡರು. ಎರಡು ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಂಕಾಕ್‌ಗೆ ತೆರಳುತ್ತಿದ್ದ ಪ್ರಯಾಣಿಕನೊಬ್ಬನಿಂದ ೪೮೩ ನಕ್ಷತ್ರ ಆಮೆಗಳನ್ನು ವಶಪಡಿಸಿಕೊಂಡರು. ವನ್ಯಜೀವಿಗಳ ಬೇಟೆ ಮತ್ತು ವ್ಯಾಪಾರದ ಪ್ರಕರಣಗಳ ಪಟ್ಟಿ ಉದ್ದವಾಗುತ್ತಲೇ ಇದೆ.

ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು ೨೭೦ಕ್ಕೂ ಹೆಚ್ಚು ವನ್ಯಜೀವಿ ಬೇಟೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಂದರೆ, ಸುಮಾರು ನಾಲ್ಕು ದಿನಗಳಿಗೊಮ್ಮೆ ಕರ್ನಾಟಕದಲ್ಲಿ ವನ್ಯಜೀವಿ ಬೇಟೆ ದಾಖಲಾಗುತ್ತಿದೆ. ದಾಖಲಾಗುವುದು ಇಷ್ಟಾದರೆ ಪತ್ತೆಯಾಗದವು ಇನ್ನೆಷ್ಟೋ? ಮಾಧ್ಯಮಗಳಲ್ಲಿ ಕೂಡ ವನ್ಯಜೀವಿ ಬೇಟೆಯ ಸುದ್ದಿಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಈ ಎರಡೂ ಸಂಕೇತಗಳು ವನ್ಯಜೀವಿಗಳ ಬೇಟೆ ಹೆಚ್ಚಾಗುತ್ತಿರುವುದನ್ನು ತೋರಿಸುತ್ತಿರಬಹುದು.

ಆದರೆ, ಅನಾದಿ ಕಾಲದಿಂದಲೂ ನಮ್ಮ ನಾಡಿನಲ್ಲಿ ಜನ ಅನೇಕ ಕಾರಣಗಳಿಗೆ ಬೇಟೆಯಾಡುವುದು ಪದ್ಧತಿ. ಆಹಾರಕ್ಕೆ, ಮೋಜಿಗೆ, ಧರ್ಮದ ಹೆಸರಿನಲ್ಲಿ, ವ್ಯಾವಹಾರಿಕ ದೃಷ್ಟಿಯಿಂದ, ಹೀಗೆ ಕಾರಣಗಳು ಹಲವಾರು. ಹಿಂದೆ ಜನ, ಜಾನುವಾರು ಮತ್ತು ಬೆಳೆ ಸಂರಕ್ಷಣೆಗಾಗಿ ಕೂಡ ಈಡುಗಾರರು ಬೇಟೆಯಾಡುತ್ತಿದ್ದರು. ಅದೊಂದು ಸಾಮಾಜಿಕ ಜವಾಬ್ದಾರಿಯೆಂದೇ ತಿಳಿದಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೊಕಿನ ಬಡ್ಡಡ್ಕ ಅಪ್ಪಯ್ಯ ಗೌಡರು ಈ ವಿಚಾರದಲ್ಲಿ ಪ್ರತಿಷ್ಠಿತರು. ಹಾಗೆಯೇ ಬೆಂಗಳೂರಿನ ಕೆನೆತ್ ಆಂಡರ್‌ಸನ್, ಕೊಡಗಿನ ನರಿಬೊಡಿ ಚಂಗಪ್ಪ ಹೀಗೆ ಹಲವರು ರಾಜ್ಯದ ಪ್ರಖ್ಯಾತ ಈಡುಗಾರರು. ಹಾಗಾದರೆ ಈಗ ಬೇಟೆ ಹೆಚ್ಚುತ್ತಿದೆ ಎನ್ನುವುದರಲ್ಲಿ ವಿಶೇಷವೇನು? ಕೆಲ ಜನ ಆಹಾರಕ್ಕಾಗಿ ಬೇಟೆಯಾಡುತ್ತಾರಲ್ಲವೆ?

ವ್ಯತ್ಯಾಸವೆಂದರೆ ಈಗ ನಮ್ಮ ಜನಸಾಂದ್ರತೆ ಅತೀ ಹೆಚ್ಚಾಗಿದೆ ಹಾಗೂ ಇದ್ದ ಅರಣ್ಯ ಪ್ರದೇಶ ಕುಗ್ಗುತ್ತಿದೆ. ಮಧ್ಯ ಆಫ್ರಿಕಾ ದೇಶಗಳು ಅಥವಾ ದಕ್ಷಿಣ ಅಮೇರಿಕಾದ ಕೆಲ ದೇಶಗಳಲ್ಲಿದ್ದ ಅತೀ ಕಡಿಮೆ ಜನಸಾಂದ್ರತೆಯಿರುವ ಕಾಡುವಾಸಿಗಳ ಹಾಗಿಲ್ಲ ನಮ್ಮ ಕಾಡು ಮತ್ತು ಅವುಗಳ ಸುತ್ತಮುತ್ತಲಿರುವ ಪ್ರದೇಶಗಳು. ಅಲ್ಲಿ ಪ್ರತೀ ಚದರ ಕಿಲೋಮಿಟರ್‌ನಲ್ಲಿ ಒಬ್ಬರಿಗಿಂತ ಕಡಿಮೆ ಜನವಾಸ್ತವ್ಯವಿದ್ದರೆ ನಮ್ಮ ದೇಶದಲ್ಲಿ ಕಾಡಿನ ಸುತ್ತಮುತ್ತಲೂ ಚದರ ಕಿಲೋಮಿಟರ್‌ನಲ್ಲಿ ೩೦೦ಕ್ಕೂ ಹೆಚ್ಚು ಜನರಿದ್ದಾರೆ. ಕಾಡಿನೊಳಗಾದರೂ ಜನ ಸಂಖ್ಯೆ ಕಡಿಮೆಯಿದೆಯೆ? ಅಲ್ಲೂ ಕೂಡ ವನ್ಯಜೀವಿಗಳು ಬೇಟೆಯನ್ನು ತಡೆದುಕೊಳ್ಳಲಾರದಷ್ಟು ಹೆಚ್ಚು ಜನಸಾಂದ್ರತೆಯಿದೆ. ಬೇಟೆಯ ಬಗ್ಗೆ ಅಧ್ಯಯಿಸಿರುವ ವನ್ಯಜೀವಿ ವಿಜ್ಞಾನಿಗಳ ಪ್ರಕಾರ, ಚದರ ಕಿಲೋಮಿಟರ್ ಪ್ರದೇಶದಲ್ಲಿ ಒಬ್ಬರಿಗಿಂತ ಹೆಚ್ಚು ಜನಸಾಂದ್ರತೆಯಿದ್ದಲ್ಲಿ ಅಲ್ಲಿ ಬೇಟೆ, ತಾಳಿಕೆಯ ಮಟ್ಟವನ್ನು ಮೀರಿ ಅಸರ್ಮರ್ಥಿತವಾಗುತ್ತದೆ. ಈ ಪ್ರದೇಶಗಳಲ್ಲಿ ವನ್ಯಜೀವಿಗಳು ನಶಿಸುವುದು ಖಡಾಖಂಡಿತ. ನಮ್ಮಲ್ಲೀಗ ಆಹಾರಕ್ಕಾಗಿ ಬೇಟೆಯಾಡುವ ಪರಿಸ್ಥಿತಿ ಬಹುಶ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಕೆಲ ಅರಣ್ಯವಾಸಿ ಸಮುದಾಯಗಳಿಗೆ ಬಿಟ್ಟರೆ ಇನ್ನ್ಯಾರಿಗೂ ಅದರ ಅವಶ್ಯಕತೆಯಿಲ್ಲ.

ಈಗಿನ ಬೇಟೆ ಎರಡು ಮುಖ್ಯ ಕಾರಣಗಳಿಗಾಗಿ ಆಗುತ್ತಿದೆ. ಕೆಲವರು ಮಾಂಸದ ರುಚಿಗಾಗಿ ಬೇಟೆಯಾಡುತ್ತಿದ್ದರೆ, ಇನ್ನಿತರರು ವನ್ಯಜೀವಿಗಳ ದೇಹದ ಭಾಗಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿರುವ ಬೇಡಿಕೆಯ ಪೂರೈಕೆಗೆ ವನ್ಯಜೀವಿಗಳನ್ನು ಕೊಲ್ಲುತ್ತಾರೆ. ದೇಶದ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುತ್ತಿದ್ದಂತೆ ಬೇಟೆಯಂತಹ ಸಮಾಜ ವಿರೋದಿ ಚಟುವಟಿಕೆಗಳು ಕಡಿಮೆಯಾಗಬೇಕಲ್ಲವೇ? ಆದರೆ ದುರಾದೃಷ್ಟವಶಾತ್ ಇದು ತಿರುಗುಮುರುಗಾಗಿದೆ. ವನ್ಯಜೀವಿಗಳ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ. ಹಾಗೆಯೇ ದಕ್ಷಿಣ ಈಶಾನ್ಯ ದೇಶಗಳ ಆರ್ಥಿಕ ಮುನ್ನೆಡೆಯಿಂದಾಗಿ ನಮ್ಮದೇಶದ ವನ್ಯಜೀವಿಗಳ ಮೇಲೆ ಅತೀವ ಒತ್ತಡ ಬೀಳುತ್ತಿದೆ. ಫ್ರೀಟ್ರೇಡ್ನಿಂದಾಗಿ ದೇಶದಿಂದ ದೇಶಗಳಿಗೆ ಅಧಿಕೃತವಾಗಿ ಹಾಗೂ ಅನಧಿಕೃತವಾಗಿ ಸಾಮಾನು ಸರಂಜಾಮುಗಳನ್ನು ಸಾಗಿಸುವುದು ಅಷ್ಟೇನೂ ದೊಡ್ಡ ವಿಷಯವಾಗುಳಿದಿಲ್ಲ. ಈಗ ದಿನನಿತ್ಯದ ವಸ್ತುಗಳೊಡನೆ ವನ್ಯಜೀವಿಗಳ ವ್ಯಾಪಾರ ಸರಾಗವಾಗಿ ನಡೆಯುತ್ತಿದೆ.

ಕಳ್ಳದಂಧೆಗಾಗಿ ಹಿಂದೆ ಹೆಚ್ಚಾಗಿ ಬೇಟೆಯಾಗುತ್ತಿದ್ದದ್ದು ಹುಲಿ, ಚಿರತೆ, ನೀರುನಾಯಿಗಳ ಚರ್ಮ ಮತ್ತು ಅವುಗಳ ಮೂಳೆ, ಹಲ್ಲು, ಮೀಸೆ, ಉಗುರುಗಳಿಗಾಗಿ. ಆದರೆ ಇತ್ತೀಚಿನ ಬೆಳವಣಿಗೆಯಲ್ಲಿ ವಿನಾಶದ ಅಂಚಿನಲ್ಲಿರುವ ವನ್ಯಜೀವಿ ಪ್ರಭೇದಗಳೊಂದಿಗೆ ಕೆಲವು ಸಾಮಾನ್ಯವಾಗಿ ಕಂಡು ಬರುವ ಪ್ರಭೇದಗಳನ್ನು ಸಹಾ ವಾಣಿಜ್ಯೋದ್ದೇಶಕ್ಕಾಗಿ ಬೇಟೆಯಾಡುತ್ತಿರುವುದು ಅಘಾತಕಾರಿ. ಗೂಬೆ, ಎರಡು ತಲೆ ಹಾವು, ಮೃದುಚಿಪ್ಪಿನ ಆಮೆ, ಚಿಪ್ಪುಹಂದಿ, ಇನ್ನಿತರ ವನ್ಯಜೀವಿಗಳ ವ್ಯಾಪಕ ಮಾರಾಟ ದಂಧೆ ಪ್ರಾರಂಭವಾಗಿದೆ.

ವನ್ಯಜೀವಿಗಳ ದೇಹದ ಭಾಗಗಳಿಗೆ ಹೆಚ್ಚಾಗಿರುವ ಬೇಡಿಕೆ ಒಂದು ಕಾರಣವಾದರೆ, ಎರಡನೆಯದು ನಮ್ಮ ಅರಣ್ಯ ಸಂರಕ್ಷಣೆ, ಅತೀ ಕ್ಲಿಷ್ಟವಾದ ಮಾನವ-ವನ್ಯಜೀವಿ ಸಂಘರ್ಷಣೆಯನ್ನು ಕಡಿಮೆ ಮಾಡುವುದು, ಇಂತಹ ಜವಾಬ್ದಾರಿಯನ್ನು ಹೊತ್ತಿರುವ ಅರಣ್ಯ ಇಲಾಖೆಗೀಗ ರಕ್ಷಣೆಯೊಡನೆ ಇತರ ಹಲವಾರು ಕಾರ್ಯಕ್ರಮಗಳ ಜವಾಬ್ದಾರಿಯನ್ನು ಭುಜದ ಮೇಲೆ ಹೇರಲಾಗಿದೆ. ಮಹಾತ್ಮಾ ಗಾಂಧೀ ಗ್ರ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಹಲವು ಗ್ರಾಮೀಣ ಅಭಿವೃದ್ಧಿ ಯೋಜನೆಗಳು, ಪ್ರವಾಸೋದ್ಯಮ, ಕಾಡಿನಲ್ಲಿ ರಸ್ತೆ ನಿರ್ಮಿಸುವುದು, ಸೇತುವೆ ಕಟ್ಟುವುದು ಹೀಗೆ ಹಲವಾರು ಹೊಣೆಗಾರಿಕೆಗಳು. ಹೀಗಿದ್ದಾಗ ವನ್ಯಜೀವಿಗಳನ್ನು ಕಾಯುವ ಕೆಲಸಕ್ಕೆ ಸಮಯವೆಲ್ಲಿ?

ಈ ಎಲ್ಲಾ ಸಮಸ್ಯೆಗಳೊಡನೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದಲ್ಲಿ ಶೇಕಡ ಐವತ್ತಕ್ಕಿಂತ ಹೆಚ್ಚು ಸಿಬ್ಬಂದಿಗಳ ಕೊರತೆ. ಇರುವ ಸಿಬ್ಬಂದಿಗಳಿಗೆ ಸರಿಯಾದ ಸೌಲಭ್ಯ, ಸೌಕರ್ಯಗಳೇ ಇಲ್ಲ. ಕಾಡಿನ ದುರ್ಗಮ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವ ಈ ಅರಣ್ಯ ರಕ್ಷಕರು ಮತ್ತು ವೀಕ್ಷಕರ ಗತಿ ಯಾರಿಗೂ ತಿಳಿಯದ ವಿಷಯ. ಅದರಲ್ಲೂ ತಾತ್ಕಾಲಿಕ ನೌಕರರ ಪಾಡು ಬಲು ಕ್ಲಿಷ್ಟ. ಸಂಬಳ, ಮೇಲಧಿಕಾರಿಯ ಕೃಪೆಯ ಮೇಲಿರುತ್ತದೆ. ಹುಲಿ ಯೋಜನೆ ಪ್ರದೇಶದಲ್ಲಿ ಕೆಲಸ ಮಾಡುವವರಿಗೆ ಯೋಜನಾ ಭತ್ಯೆಯನ್ನು ಕೇಂದ್ರ ಸರ್ಕಾರ ಕೂಟ್ಟರೂ, ಹಲವು ಬಾರಿ ಕೆಳ ಮಟ್ಟದ ನೌಕರರಿಗೆ ತಲುಪುವುದೇ ಇಲ್ಲ. ರಾಜ್ಯದ ಪ್ರತಿಷ್ಠಿತ ರಾಷ್ಟ್ರೀಯ ಉದ್ಯಾನವೊಂದರಲ್ಲಿ ಈ ವರ್ಷ ಅಧಿಕಾರಿಯೊಬ್ಬರು ತಮ್ಮ ಭತ್ಯೆಯನ್ನು ಮಾತ್ರ ಕರ್ತವ್ಯ ಲೋಪವಾಗದಂತೆ ಶಿಸ್ತಿನಿಂದ ತೆಗೆದುಕೊಂಡು, ನೌಕರರ ಹುಲಿ ಯೋಜನಾ ಭತ್ಯೆಯನ್ನು ಹಂಚಲೇ ಇಲ್ಲ. ಹಣವೆಲ್ಲ ಸರ್ಕಾರಕ್ಕೆ ಹಿಂದಿರುಗಿದೆ. ಹೀಗಿರುವಾಗ ಕಾಡು ಕಾಯುವ ಸಿಬ್ಬಂದಿಗೆ ಬೇಟೆ ನಿಗ್ರಹಿಸಿರೆಂದು ಹೇಳಲು ಕಷ್ಟವಾಗುತ್ತದೆ.

ವನ್ಯಜೀವಿ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುವವರು ಕಾಡಿನಲ್ಲಿ ಗಸ್ತು ತಿರುಗುವ ಬೇಟೆನಿಗ್ರಹ ದಳಗಳು. ಪ್ರತೀ ದಿನವೂ ಕಾಡಿನ ಆಯಕಟ್ಟು ಪ್ರದೇಶಗಳಲ್ಲಿ ಗಸ್ತು ತಿರುಗುವುದು, ಬೇಟೆಯಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ಪತ್ತೆ ಹಚ್ಚುವುದು, ವನ್ಯಜೀವಿ ಸಂರಕ್ಷಣೆಗೆ ಅತ್ಯುತ್ತಮ ಫಲಿತಾಂಶಗಳನ್ನು ತಂದು ಕೂಟ್ಟ ಕಾರ್ಯ ವಿಧಾನ. ಹಿಂದೆ ಹಲವು ಅಭಯಾರಣ್ಯ, ರಾಷ್ಟ್ರೀಯ ಉದ್ಯಾನಗಳಲ್ಲಿ ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಾಡಿದ ಉತ್ತಮ ಕಾರ್ಯಗಳಿಂದ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿತ್ತು. ಆದರೆ ಇಂದು ಈ ಬೇಟೆ ನಿಗ್ರಹದ ವಿಧಾನದಲ್ಲಿ ನಂಬಿಕೆಯಿರುವ ಅಧಿಕಾರಿಗಳೇ ಕಡಿಮೆ. ಕಾಡಿನಲ್ಲಿ ನಡೆದಾಡುವ, ವನ್ಯಜೀವಿಗಳನ್ನು ನೋಡಿ ಸಂತೋಷ ಪಡುವ, ನಿಸರ್ಗದ ಬಗ್ಗೆ ಉತ್ಕಟ ಭಾವನೆಯಿರುವ ಅಧಿಕಾರಿಗಳು ಕೂಡ ನಶಿಸುವ ಹಂತದಲ್ಲಿದ್ದಾರೆ. ಕಾಡಿನಲ್ಲಿ ಗಸ್ತು ತಿರುಗದಿದ್ದರೆ ಉರುಳು, ದವಡೆ ಕತ್ತರಿಗಳನ್ನು ಪತ್ತೆ ಹಚ್ಚುವುದು ಅಸಾಧ್ಯ.

ಕಾಡಿಗೇ ಹೋಗದ ಪರಿಸ್ಥಿತಿ ಅಧಿಕಾರಿಗಳಲ್ಲಷ್ಟೇ ಅಲ್ಲ ಸರ್ಕಾರೇತರ ಸಂಸ್ಥೆಗಳು, ವನ್ಯಜೀವಿ ವಿಜ್ಞಾನಿಗಳಲ್ಲೂ ಕೂಡ ಪ್ರಚಲಿತ. ಹಲವಾರು ತಜ್ಞರುಗಳು ಸಭೆ, ಗೋಷ್ಠಿ, ಮೇಳಗಳಲ್ಲೇ ಸಮಯ ವ್ಯಯಿಸುತ್ತಾರೆ. ಆದರೆ ಸರ್ಕಾರಕ್ಕೆ ಪ್ರತಿದಿನವೂ ವನ್ಯಜೀವಿ ಸಂರಕ್ಷಣೆ ಹೇಗೆ ಮಾಡಬೇಕೆನ್ನುವ ಪಾಠ ಹೇಳುವುದಂತೂ ಮರೆಯುವುದಿಲ್ಲ.

೧೯ ಮತ್ತು ೨೦ನೇ ಶತಮಾನದಲ್ಲಿಐರೋಪ್ಯ ರಾಷ್ಟ್ರಗಳಲ್ಲಾದ ಅತಿಯಾದ ಬೇಟೆಯಿಂದ ಅಲ್ಲಿದ್ದ ಹಲವಾರು ವನ್ಯಜೀವಿಗಳು ನಶಿಸಿ ಹೋದವು. ಸ್ಕಾಟ್‌ಲ್ಯಾಂಡ್‌ನಿಂದ ತೋಳಗಳು, ಸ್ವಿಟ್ಜ್‌ರ್‌ಲ್ಯಾಂಡ್‌ನಿಂದ ಕರಡಿ ಮತ್ತು ಲಿಂಕ್ಸ್, ಪೋಲೆಂಡ್‌ನಿಂದ ಕಾಡೆಮ್ಮೆ, ನೆದರ್‌ಲ್ಯಾಂಡ್ಸ್‌ನಿಂದ ಹಂದಿ ಮೀನು (ಡಾಲ್ಫಿನ್), ಸ್ಪೇನ್‌ನಿಂದ ಬೊಕ್ಕ ತಲೆಯ ಕೆಂಬರಲು (ಐಬಿಸ್) ಹಕ್ಕಿ, ಹೀಗೆ ಹತ್ತಾರು ಉದಾಹರಣೆಗಳಿವೆ. ಆ ವನ್ಯಜೀವಿಗಳನ್ನು ಹಿಂದಕ್ಕೆ ತರಲು ಇಂದು ಅದೇ ದೇಶಗಳು ಮಿಲಿಯಾಂತರ ಡಾಲರ್ ಹಣ ವ್ಯಯ ಮಾಡಲು ತಯಾರಾಗಿವೆ. ಆ ದೇಶಗಳು ಮಾಡಿರುವ ತಪ್ಪುಗಳಿಂದ ಪಾಠ ಕಲಿಯುವುದು ಜಾಣತನ, ಆದರೆ ಅದೇ ತಪ್ಪನ್ನು ನಾವೂ ಮಾಡುವುದು ಮೂರ್ಖತನವಾಗುತ್ತದೆ.

ಹಿಂದೆ ೮೦ರ ದಶಕಗಳಲ್ಲಿ ಅರಣ್ಯ ಇಲಾಖೆಯ ಉತ್ತಮ ಕಾರ್ಯಗಳಿಂದ ವನ್ಯಜೀವಿಗಳು ೮೦ ಮತ್ತು ೯೦ರ ದಶಕಗಳಲ್ಲಿ ಸುಧಾರಿಸಿಕೊಂಡಿದ್ದವು. ಆದರೆ ಈಗ ವನ್ಯಜೀವಿ ಸಂರಕ್ಷಣಾ ಕಾರ್ಯವೇ ದಿಕ್ಕು ಬದಲಿಸುತ್ತಿದೆ. ತನ್ನ ಮುಖ್ಯ, ನೇರ ಗುರಿಯಿಂದ ಹಲವಾರು ದಿಕ್ಕುಗಳಿಗೆ ತಿರುಗಿದೆ. ಅದನ್ನು ತಕ್ಷಣವೇ ಸರಿಪಡಿಸದಿದ್ದರೆ ನಮ್ಮ ದೇಶದ ಬಹುಮೂಲ್ಯ ವನ್ಯಜೀವಿಗಳು ನಾಶವಾಗುವ ಪರಿಸ್ಥಿತಿ ಬರಬಹುದು. ಬೇಟೆಯನ್ನು ಕಡಿಮೆ ಮಾಡಲು ಅದು ಪ್ರತಿದಿನದ ಸಮಸ್ಯೆಯೆಂದು ಗುರುತಿಸುವುದು ಬಹು ಮುಖ್ಯ. ಬೇಟೆನಿಗ್ರಹ ಕಾಲ್ದಳಗಳು ಸರ್ಮರ್ಥವಾಗಿ ಕಾರ್ಯ ನಿರ್ವಹಿಸುವಂತಾಗಬೇಕು, ಅದನ್ನು ಗುರುತಿಸಿ ಕೆಳ ವರ್ಗದ ಸಿಬ್ಬಂದಿಗಳನ್ನು ಹುರಿದುಂಬಿಸಿ ಕೆಲಸ ಮಾಡುವ ಅಧಿಕಾರಿಗಳು ಬೇಕು. ಇಲ್ಲವಾದಲ್ಲಿ ಇರುವ ಹಲವಾರು ಒತ್ತಡಗಳ ಮಧ್ಯೆ ವನ್ಯಜೀವಿ ಸಂರಕ್ಷಣೆ ಹಲವಾರು ದಶಕಗಳ ಹಿಂದಿದ್ದ ಪರಿಸ್ಥಿತಿಗೆ ತಲುಪುವ ಸಾಧ್ಯತೆಯಿದೆ.




ಈ ಲೇಖನದ ಪರಿಷ್ಕೃತ ಆವೃತ್ತಿ ದಿನಾಂಕ ೨೪-೦೫-೨೦೧೨ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ