ಆಗಲೇ ಕತ್ತಲಾಗಿತ್ತು, ತುಂತುರು ಮಳೆ, ಮುಂಗಾರಿನ ಆರಂಭದ ದಿನಗಳು. ಕೆಲ ಸ್ಥಳೀಯ ಮುಖಂಡರುಗಳನ್ನೂ ಸೇರಿ ಸುಮಾರು ೨೦೦ಕ್ಕೂ ಹೆಚ್ಚು ಜನರು ಕೂಡೆ ಹಿಡಿದು ರಸ್ತೆಯ ಮಧ್ಯದಲ್ಲಿ ಸೇರಿದ್ದರು. ರಾಜ್ಯ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರು, ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆಯವರು ಆ ಪ್ರದೇಶಕ್ಕೆ ಬಂದಿರುವುದು ಅವರಿಗೆ ಬಹು ಸಂತೋಷದ ವಿಚಾರವಾಗಿತ್ತು. ಇದು ಹಾಸನ ಜಿಲ್ಲೆಯ ಮಲೆನಾಡಿನ ಸಾಂಕೇತಿಕ ಹಳ್ಳಿ ಹೆತ್ತೂರೆಂಬ ಗ್ರಾಮದ ವಿಚಾರ.
ಕುಂಬ್ಳೆಯವರು ವನ್ಯಜೀವಿ ಸಂರಕ್ಷಣೆಗೆ ಜನರ ಬೆಂಬಲಕ್ಕಾಗಿ ಮನವಿ ಮಾಡಿದರು. ತಮ್ಮ ಬೆಂಬಲ ವ್ಯಕ್ತಪಡಿಸುತ್ತ ಜನರು ಬಹು ವರ್ಷಗಳ ಸಮಸ್ಯೆಯೊಂದನ್ನು ಅವರ ಮುಂದಿಟ್ಟರು. ಹಾಸನದ ಆಲೂರು, ಹೆತ್ತೂರು, ಗೌರಿಕೊಪ್ಪಲು, ಹೆಗ್ಗದ್ದೆ ಹಾಗೂ ಇತರೆ ಗ್ರಾಮಗಳ ಸುತ್ತ ಇರುವ ಆನೆ-ಮಾನವ ಸಂಘರ್ಷಣೆಗೆ ಸಲಹೆ ಮತ್ತು ಪರಿಹಾರವನ್ನು ಸೂಚಿಸಬೇಕೆಂದು ಅವರ ಅಹವಾಲಾಗಿತ್ತು. ವನ್ಯಜೀವಿಗಳ ಹೆಸರಿನಲ್ಲಿ ಅಲ್ಲಿಗೆ ಯಾರೇ ಬಂದರೂ ಸ್ಥಳೀಯರು ಈ ವಿಚಾರವನ್ನು ಚರ್ಚಿಸುತ್ತಾರೆ, ತಮ್ಮ ನೋವು ತೋಡಿಕೊಳ್ಳುತ್ತಾರೆ.
ಹೇಮಾವತಿ ಜಲಾಶಯದ ಹಿನ್ನೀರಿನ ದೊಡ್ಡಬೆಟ್ಟ, ಕಟ್ಟೆಪುರ ಅರಣ್ಯ ಪ್ರದೇಶಗಳನ್ನು ೨೦-೨೫ ಆನೆಗಳು (ಯಾರಿಗೂ ಸರಿಯಾದ ಸಂಖ್ಯೆ ತಿಳಿದಿಲ್ಲ) ಹಲವು ವರ್ಷಗಳಿಂದ ತಮ್ಮ ಮನೆ ಮಾಡಿಕೊಂಡಿವೆ. ಈ ಪ್ರದೇಶಗಳು ಹಿಂದೆ ಜೇನುಕಲ್ಬೆಟ್ಟ, ಯದವನಾಡು, ಹಾತ್ತೂರು, ಆನೆಕಾಡು, ದೊಡ್ಡಹರವೆ, ದುಬಾರೆ, ಆನೆಚೌಕೂರು ಕಾಡುಗಳ ಮೂಲಕ ನಾಗರಹೊಳೆಯ ತನಕ ಹಬ್ಬಿದ್ದವು. ಆದರೆ ೬೦-೮೦ರ ದಶಕಗಳಲ್ಲಿ ಕಾಫಿ ತೋಟಗಳ ವ್ಯಾಪಕ ವಿಸ್ತರಣೆ ಮತ್ತು ಹೇಮಾವತಿ, ಹಾರಂಗಿ, ಚಿಕ್ಲಿಹೊಳೆ ಅಣೆಕಟ್ಟುಗಳ ನಿರ್ಮಾಣದಿಂದ ಹಾಸನ ಹಾಗೂ ಉತ್ತರ ಕೊಡುಗು ಜಿಲ್ಲೆಗಳ ಭೂಗೋಳ ಬಹು ಬದಲಾಯಿತು. ಈ ಕಾಡುಗಳೀಗ ಇತರ ಪ್ರದೇಶಗಳಿಂದ ಬೇರ್ಪಟ್ಟಿವೆ. ಈ ಭೌಗೋಳಿಕ ಮಾರ್ಪಾಟಿಗೆ ಮೊದಲ ಬಲಿಪಶುಗಳಾದದ್ದು ಅಲ್ಲಿನ ಮಾನವೇತರ ಜೀವಿಗಳು. ಇಲ್ಲಾಗಲೇ ಹಲವು ವನ್ಯಜೀವಿ ಪ್ರಭೇಧಗಳು ಸ್ಥಳೀಯವಾಗಿ ನಶಿಸಿರಬಹುದು. ಆದರೆ ಆನೆಯಂತಹ ಕೆಲವು ಪ್ರಾಣಿಗಳು ಇಲ್ಲಿ ಈಗಲೂ ಉಳಿದಿವೆ, ಆದರೆ ಇವುಗಳ ಭವಿಷ್ಯ ಅನಿಶ್ಚಿತವಾಗಿದೆ.
ಈಗ ಈ ಆನೆಗಳು ಜನವಸತಿ, ಕೃಷಿಭೂಮಿಗಳ ಮಧ್ಯೆ ಇರುವ ಚಿಕ್ಕ ಕಾಡಿನಲ್ಲಿ ದ್ವೀಪಗಳಲ್ಲಿದ್ದಂತೆ ಆಗಿದೆ. ಸೀಮಿತವಾದ ಆವಾಸಸ್ಥಾನ, ಅಲ್ಪ ನೈಸರ್ಗಿಕ ಆಹಾರದ ಲಭ್ಯತೆ ಹಾಗೂ ದೊಡ್ಡ ಕಾಡುಗಳಿಗೆ ಹೋಗಲು ಇಲ್ಲದ ಕಾಡಿನ ಪಡಸಾಲೆಗಳು. ಇಲ್ಲಿನ ರೈತರ ಪ್ರಕಾರ ಇವುಗಳು ಊರಾನೆಗಳೇ ಆಗಿವೆ.
ಈ ಕಾರಣಗಳು ಇಲ್ಲಿ ಆನೆ-ಮಾನವನ ಸಂಘರ್ಷ ಅತೀ ವಿಷಮ ಪರಿಸ್ಥಿತಿ ತಲುಪುವ ಹಾಗೆ ಮಾಡಿವೆ. ಆನೆಗಳು ವರ್ಷವೂ ಹಲವು ಜನರನ್ನು ಕೊಲ್ಲುತ್ತವೆ. ಕತ್ತಲಾದ ಮೇಲೆ ಜನ ಮನೆಯಿಂದ ಆಚೆ ಬರಲು ಹೆದುರುತ್ತಾರೆ, ಮಕ್ಕಳು ನಡೆದು ಶಾಲೆಗೆ ಹೋಗಲು ಹೆದುರುತ್ತಾರೆ. ಇದರೊಡನೆ ಲಕ್ಷಾಂತರ ರೂಪಾಯಿಗಳ ಬೆಳೆ ನಷ್ಟ ಮಾಡುತ್ತವೆ.
ಮನವಿ ಪತ್ರ, ರಸ್ತೆತಡೆ, ಧರಣಿ ಎಲ್ಲವೂ ಆಗಿದೆ. ಈಗ ರೈತರು ತಮ್ಮ ಜಮೀನನ್ನು ಸರ್ಕಾರವೇ ಸ್ವಾಧೀನ ಪಡಿಸಿಕೂಂಡು ಪರಿಹಾರ ಕೂಡಬೇಕೆಂದು ಹೇಳುವ ಮಟ್ಟಕ್ಕೆ ರೊಸಿದ್ದಾರೆ. ಈ ಸಂಘರ್ಷಕ್ಕೆ ಕೆಲವು ಆನೆಗಳು ಸಹ ತಮ್ಮ ಪ್ರಾಣ ಕಳೆದುಕೊಳ್ಳುತ್ತಿವೆ. ಸಣ್ಣ ಸಂಖ್ಯೆಯಲ್ಲಿ, ದ್ವೀಪದಲ್ಲಿ ಬದುಕುತ್ತಿರುವ ಈ ಆನೆಗಳಿಗೆ ಭವಿಷ್ಯವಿದೆಯೆ?
ಉತ್ತರಗಳು ಸಮಸ್ಯೆಗಳ ಒಂದು ಭಾಗವಾದರೆ, ಸಮಸ್ಯೆಗೆ ಮೂಲ ಕಾರಣಗಳನ್ನು ಹುಡುಕಿ ಅವುಗಳನ್ನು ಪರಿಹರಿಸುವುದು ಭವಿಷ್ಯದಲ್ಲಿ ರೈತರು ಮತ್ತು ಆನೆಗಳ ನಡುವೆ ಆಗುವ ಅನಾಹುತಗಳನ್ನು ತಪ್ಪಿಸಲು ಬಹು ಗುರುತರವಾಗುವುದು.
ಘಟ್ಟದ ಛಿದ್ರೀಕರಣ
ಅಣೆಕಟ್ಟು ಹಾಗೂ ಕಾಫಿ ತೋಟಗಳೊಡನೆ ಹೆದ್ದಾರಿ, ರೈಲ್ವೆ ಹಳಿ, ಅನಿಲದ ಕೊಳವೆ, ವಿದ್ಯುಚ್ಛಕ್ತಿ ಪ್ರಸರಣ ತಂತಿಗಳು ಇಲ್ಲಿನ ವನ್ಯಜೀವಿಗಳ ನೆಲೆಗಳನ್ನು ಸೀಳಿ, ಕಾಡನ್ನು ಚಿಕ್ಕ ಚಿಕ್ಕ ಹೋಳಾಗಿಸಿವೆ. ಆವಾಸಸ್ಥಾನದ ಛಿದ್ರೀಕರಣದಿಂದ ಉದ್ಭವಿಸುವ ಪ್ರಮುಖವಾದ ಸಮಸ್ಯೆಗಳಲ್ಲಿ ಒಂದಾದ ವನ್ಯಜೀವಿ-ಮಾನವ ಸಂಘರ್ಷಣೆಯನ್ನು ನಾವಿಲ್ಲಿ ಪ್ರತಿನಿತ್ಯ ನೋಡಬಹುದು. ಪ್ರಾಣ, ಬೆಳೆ ನಷ್ಟದಿಂದ ಜನ ಬೇಸತ್ತು ಹೋಗಿದ್ದಾರೆ. ಹಿಂದೆ ಆಗಿರುವ ತಪ್ಪಿನಿಂದ ಜನ ಎಚ್ಚೆತ್ತುಕೊಂಡಿದ್ದಾರೆ. ಈಗ ಜಿಲ್ಲೆಯಲ್ಲಿ ಕಿರುಜಲ ವಿದ್ಯುತ್ ಯೋಜನೆಗಳಿಂದಾಗುತ್ತಿರುವ ಅರಣ್ಯ ನಾಶದ ವಿರುದ್ದ ದನಿಯೆತ್ತಿದ್ದಾರೆ.
ಆದರೆ ದಿನೇ ದಿನೇ ಹೊಸ ಕಿರುಜಲ ವಿದ್ಯುತ್ ಯೋಜನೆಗಳಿಗೆ ಇಂಧನ ಇಲಾಖೆಯಿಂದ ಅನುಮತಿ ನೀಡಲಾಗುತ್ತಿದೆ. ಆ ಅನುಮತಿಯನ್ನಾಧಾರಿಸಿ ಉದ್ಯಮಿಗಳು ತಮ್ಮ ರಾಜಕೀಯ ಬಲವನ್ನು ಉಪಯೋಗಿಸಿ ಅರಣ್ಯ ಇಲಾಖೆಯಿಂದ ಅನುಮತಿ ತೆಗೆದುಕೊಳ್ಳುತ್ತಾರೆ. ಬೆಂಗಳೂರಿನಲ್ಲಿ ಕುಳಿತ ಈ ಉದ್ಯಮಿಗಳಿಗೆ ಕಾಡಿನ ನಾಶದಿಂದ ಸ್ಥಳೀಯರಿಗಾಗುವ ತೊಂದರೆ, ನೋವು ಸಂಕಷ್ಟಗಳು ಅರ್ಥವಾಗುವುದಾದರೂ ಹೇಗೆ. ಅವರು ಹೊಡುತ್ತಿರುವ ಕಿರುಜಲವಿದ್ಯುತ್ ಯೋಜನೆಗಳಿಂದ ಅವರ ಕಿಸೆ ತುಂಬಿದರೆ ಸಾಕು. ದೇಶದ ಅಭಿವೃದ್ದಿಯ ಸೋಗಿನಲ್ಲಿ ಅವರ ಹತ್ತು ತಲೆಮಾರಿನವರು ಕೂತು ತಿನ್ನುವಷ್ಟು ಕಾಂಚಾಣವಾದರೆ ಅವರಿಗೆ ನೆಮ್ಮದಿ.
ಮಳವಳ್ಳಿಯ ಕಾಡುಗಳಲ್ಲಿ ಕಿರುಜಲವಿದ್ಯುತ್ ಯೋಜನೆಗಳನ್ನು ಅನುಮತಿಸಿ ಆನೆಗಳು ಮೈಸೂರಿನವರೆಗೆ ಬರುವ ಹಾಗೆ ಮಾಡಿದ್ದಾರೆ. ಇವರ ಉದ್ದಿಮೆಗಾಗಿ ಮೈಸೂರಿನ ವ್ಯಕ್ತಿಯೊಬ್ಬನ ಕುಟುಂಬ ತಮ್ಮ ಯಜಮಾನನ್ನು ಕಳೆದುಕೊಂಡು ಸಂಕಷ್ಟದಲ್ಲಿದೆ. ಹೌದು, ಇದರಿಂದ ಬೆಂಗಳೂರಿನ ಬಂಡವಾಳಿಶಾಹಿಗಳಿಗೆ ನಷ್ಟವಿಲ್ಲವಲ್ಲ?
ದಿರ್ಘಾವದಿಯ ಯೋಜನೆ
ಈ ಪರಿಸ್ಥಿತಿಯಲ್ಲಿ ನಮಗಿರುವುದು ಎರಡು ದೀರ್ಘಾವಧಿಯ ಪರಿಹಾರಗಳು. ಆನೆಗಳನ್ನು ಸ್ಥಳಾಂತರಿಸುವುದು ಅಥವಾ ಆನೆಗಳನ್ನು ಹಿಡಿದು ಪಳಗಿಸುವುದು.
ಜನರ ಒತ್ತಡ ಅತೀ ಹೆಚ್ಚಾದಾಗ ಒಂದೋ, ಎರಡೋ ಆನೆಗಳನ್ನು ಹಿಡಿದು ಸ್ಥಳಾಂತರಗೊಳಿಸಲಾಗುತ್ತದೆ. ಕೆಲವು ದಿನಗಳ ಕಾಲ ಜನರ ಬಾಯಿಕಟ್ಟುತ್ತದೆ. ಪುನ: ಯಾರಾದರು ಆನೆಯಿಂದ ಅಸುನೀಗಿದರೆ ಕೂಗು ಹೆಚ್ಚುತ್ತದೆ. ಒಂದೆರೆಡು ಆನೆಗಳನ್ನು ಸ್ಥಳಾಂತರಗೊಳಿಸಿದರೆ ಪ್ರಯೋಜನವಾಗದು. ಆನೆಗಳು ಸಂಘಜೀವಿಗಳು. ಸಂಪೂರ್ಣ ಗುಂಪುಗಳನ್ನು ನೂರಾರು ಕಿ.ಮೀ ದೂರದ ಪ್ರದೇಶಕ್ಕೆ ಸ್ಥಳಾಂತರಿಸಬೇಕಾಗುತ್ತದೆ. ಹಾಗೆಯೇ ಆನೆಗಳು ಮಾತೃ ಪ್ರಧಾನ ಕುಟುಂಬ ಹಾಗಾಗಿ ಹಿಂಡಿನ ಯಜಮಾನತಿಯನ್ನು ಮಾತ್ರ ಸ್ಥಳಾಂತರಿಸುವುದಾಗಲಿ ಅಥವಾ ಹಿಂಡಿನ ಕೆಲವೇ ಕೆಲವು ಆನೆಗಳನ್ನು ಸ್ಥಳಾಂತರಿಸಿದರೆ ಪ್ರಯೋಜನವಾಗದು. ಆಗ ಅವು ಹಿಂದಕ್ಕೆ ಬರುವ ಸಾಧ್ಯತೆಗಳೇ ಹೆಚ್ಚು. ಹಾಗೆಯೇ ವಯಸ್ಕ ಗಂಡು ಆನೆಗಳನ್ನು ಸ್ಥಳಾಂತರಿಸಿದರೆ ತೊಂದರೆ ಕೊಡುತ್ತಿರುವ ಸಲಗಗಳನ್ನು ಸರಿಯಾಗಿ ಗುರುತಿಸಿ ಅವನ್ನು ಸ್ಥಳಾಂತರಿಸಬೇಕಾಗುತ್ತದೆ. ಹಿಂದೆ ಎರಡು ಆನೆಗಳಿಗೆ ರೇಡಿಯೋ ದೊರಮಾಪನ ಪಟ್ಟಿಗಳನ್ನು (ರೇಡಿಯೋ ಕಾಲರ್) ಅಳವಡಿಸಿ ಬಂಡೀಪುರಕ್ಕೆ ಸ್ಥಳಾಂತರಿಸಲಾಯಿತು. ಆ ಎರಡೂ ಸಲಗಗಳು ಹಿಂದಕ್ಕೆ ಬಂದಿವೆ.
ಚಿಕ್ಕ ಸಂಖ್ಯೆಯಲ್ಲಿರುವ ಆನೆಗಳ ಸ್ಥಳಾಂತರವನ್ನು ಮಲೇಷಿಯಾ, ಶ್ರೀಲಂಕ ಹಾಗೂ ಆಫ್ರಿಕಾದ ಹಲವಾರು ದೇಶಗಳಲ್ಲಿ ಯಶಸ್ವಿಯಾಗಿ ಕೈಗೊಂಡಿದ್ದಾರೆ. ಅದಕ್ಕೆ ಕೂಲಂಕುಷವಾದ ತಯಾರಿ ಮತ್ತು ಸಂಪನ್ಮೂಲಗಳ ಅವಶ್ಯಕತೆಯಿದೆ.
ಒಂದು ಅಂದಾಜಿನ ಪ್ರಕಾರ ಆನೆಯೊಂದನ್ನು ಹಿಡಿದು ಸ್ಥಳಾಂತರಿಸಲು ಸುಮಾರು ನಾಲ್ಕು ಲಕ್ಷ ರೂಪಾಯಿಗಳು ಖರ್ಚಾಗುತ್ತದೆ. ಹಾಸನ ಜಿಲ್ಲೆಯಲ್ಲಿ ಹಿಂದಿನ ಎರಡು ವರ್ಷಗಳಲ್ಲಿ ಸರ್ಕಾರವು ಸುಮಾರು ೧.೫ ಕೋಟಿಗಳನ್ನು ಮಾನವ-ವನ್ಯಜೀವಿ ಸಂಘರ್ಷಕ್ಕೆ ಪರಿಹಾರ ರೂಪದಲ್ಲಿ ಹಣವನ್ನು ವ್ಯಯಸಿದೆ. ಇದರಲ್ಲಿ ಅರ್ಧದಷ್ಟು ಖರ್ಚಿನಲ್ಲಿ ಇಲ್ಲಿರುವ ಎಲ್ಲಾ ಆನೆಗಳನ್ನು ಸ್ಥಳಾಂತರಿಸಬಹುದಾಗಿತ್ತು.
ಆನೆಗಳನ್ನು ಸ್ಥಳಾಂತರಿಸುವಾಗ ಸಂಪೂರ್ಣ ಹಿಂಡು ಅಥವಾ ತೊಂದರೆ ಕೊಡುತ್ತಿರುವ ಗಂಡಾನೆಗಳನ್ನು ಗುರುತಿಸಿ ಸ್ಥಳಾಂತರಿಸಬೇಕಾಗುತ್ತದೆ -ಚಿತ್ರ:ಹೆಚ್.ಸಿ.ಪೂರ್ಣೆಶಆನೆಗಳನ್ನು ಹಿಡಿದು ಪಳಗಿಸುವುದು ನಮಗಿರುವ ಎರಡನೇ ಪರಿಹಾರ. ಪ್ರಾಯಶ: ಇದೇ ಆನೆಗಳನ್ನು ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಬನ್ನೇರುಘಟ್ಟ ಮಾದರಿಯ ಆನೆ ಸಫಾರಿ ಪ್ರಾರಂಬಿಸಬಹುದು. ಇದೊಂದನ್ನು ಪ್ರವಾಸೀತಾಣವಾಗಿಸಿದರೆ ಅಲ್ಲಿನ ಸುತ್ತಮುತ್ತಲಿನ ಜನರಿಗೆ ಉದ್ಯೋಗಾವಕಾಶವಾಗಬಹುದು. ಇದರಿಂದ ಬರುವ ಆದಾಯವನ್ನು ಆ ಆನೆಗಳ ಪೋಷಣೆಗೆ ಮತ್ತು ಕಾಡಾನೆಗಳ ಸಂರಕ್ಷಣೆಗೆ ಉಪಯೋಗಿಸಬಹುದು. ಆನೆಗಳಿಂದ ಸ್ಥಳೀಯರಿಗೆ ಸಹ ಪರೋಕ್ಷವಾಗಿ ಸ್ವಲ್ಪವಾದರೂ ಪ್ರಯೋಜನವಾಗುತ್ತದೆ.
ಈ ಸಮಸ್ಯೆಯನ್ನು ಇನ್ನು ಹೆಚ್ಚು ದಿನ ನಿರ್ಲಕ್ಷಿಸಲಾಗುವುದಿಲ್ಲ. ವನ್ಯಜೀವಿ ವಿಜ್ಞಾನಿಗಳು, ಸಂರಕ್ಷಕರು, ಪ್ರಾಣಿದಯಾ ಸಂಘದವರೊಡನೆ ಚರ್ಚಿಸಿ ಬಹು ಬೇಗ ವೈಜ್ಞಾನಿಕ ಆಧಾರಿತ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಇದಕ್ಕೆ ಮಾದ್ಯಮದವರ ಹಾಗೂ ಸ್ಥಳೀಯರ ಬೆಂಬಲ ಸಹ ಬಹುಮುಖ್ಯ.
ಹೌದು, ಕಾರ್ಯಾಚರಣೆಯ ಸಮಯದಲ್ಲಿ ಸ್ವಲ್ಪ ಏರುಪೇರಾಗುವುದು ಯಾವುದೇ ಒಂದು ಕ್ಲಿಷ್ಟ ಕಾರ್ಯದ ಒಂದು ಭಾಗ. ಈ ಸಮಸ್ಯೆಗಳನ್ನು ಸ್ವಲ್ಪವಾದರೂ ಗ್ರಹಿಸಿ, ಮುಂದಾಲೋಚಿಸಿದರೆ ನಿವಾರಣೆಗೆ ಪ್ರಯತ್ನಿಸಬಹುದು. ಸಹಮತದ, ದಿಟ್ಟ ನಿರ್ಧಾರವಿದ್ದರೆ ಇವೆಲ್ಲವನ್ನೂ ನಿಭಾಯಿಸಬಹುದು.
ಈ ವಿಚಾರವನ್ನು ಇನ್ನು ತೂಗುಯ್ಯಾಲೆಯಲ್ಲಿ ಬಿಟ್ಟರೆ ವನ್ಯಜೀವಿಗಳ ಬಗ್ಗೆ ನಮ್ಮ ಸಮಾಜದಲ್ಲಿರುವ ಅಲ್ಪ ಪ್ರೇಮವೂ ನಶಿಸುತ್ತದೆ, ಹಾಗೆಯೇ ವನ್ಯಜೀವಿ ಸಂರಕ್ಷಣೆಗೆ ಬೆಂಬಲವೂ ಕ್ಷೀಣಿಸುತ್ತದೆ. ಇಲ್ಲವಾದಲ್ಲಿ ಜೀವಭಯದಲ್ಲಿ ಬದುಕುತ್ತಿರುವ ಜನರು ಆನೆಗಳ ವಿರುದ್ಧ ಅತಿರೇಕದ ಕ್ರಮಗಳನ್ನು ತೆಗೆದುಕೊಳ್ಳುವುದರಲ್ಲಿ ಅನುಮಾನವಿಲ್ಲ.
ಈ ಲೇಖನದ ಪರಿಷ್ಕೃತ ಆವೃತ್ತಿ ದಿನಾಂಕ ೧೧-೦೯-೨೦೧೧ರಂದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತವಾಗಿತ್ತು.
No comments:
Post a Comment