Saturday, May 5, 2012
ಮಾನ್ಯ ಮುಖ್ಯಮಂತ್ರಿ ಮತ್ತು ಕೈಗಾರಿಕಾ ಸಚಿವರೇ ಸ್ವಲ್ಪ ಇತ್ತ ಗಮನಿಸಿ
ಇನ್ನೇನು ಕೆಲವೇ ದಿನಗಳಲ್ಲಿ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಗರಕ್ಕೆ ಬರುವ ಹೆದ್ದಾರಿಯ ಮಧ್ಯದಲ್ಲಿರುವ ಮಿಡಿಯನ್‌ಗಳಿಗೆ ಹೊಸ ಹುಲ್ಲುಹಾಸು, ಕಲ್ಲಿನ ಆನೆ ಹಾಗೂ ಇನ್ನಿತರ ಮೂರ್ತಿಗಳು ಬರಲಿವೆ. ರಾಜಧಾನಿಯ ಪ್ರಮುಖ ರಸ್ತೆಗಳಲ್ಲಿ ಸಣ್ಣ ಗುಂಡಿಗಳಿದ್ದರೂ ಅವನ್ನು ಮುಚ್ಚಲಾಗುತ್ತದೆ. ಇವೆಲ್ಲವೂ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ನಡೆಯುವ ತಯಾರಿಗಳು.
ರಾಜ್ಯವನ್ನು ಕೈಗಾರಿಕಾ ಅಭಿವೃದ್ಧಿ ಪಥದತ್ತ ಕೊಂಡ್ಯೊಯಲು ರಾಜ್ಯ ಸರ್ಕಾರ ಮಾಡುತ್ತಿರುವ ಸಾಧನೆಗಳು ಮತ್ತು ಕಾರ್ಯಗಳು ಶಾಘ್ಲನೀಯ. ಇದರ ಹಿನ್ನಲೆಯಲ್ಲಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಬರುವ ತಿಂಗಳು ಹಮ್ಮಿಕೊಂಡಿದೆ. ಹಿಂದೆಯೂ ಈ ಸಮಾವೇಶವನ್ನು ಅದ್ಧೂರಿಯಾಗಿ ಮತ್ತು ಯಶಸ್ವಿಯಾಗಿ ರಾಜ್ಯ ಸರ್ಕಾರ ನಡೆಸಿದೆ. ಈ ಸಮಾವೇಶಗಳು ಮುಗಿದ ತರುವಾಯ ಪ್ರಮುಖವಾಗಿ ಕಾರ್ಯ ಪ್ರಾರಂಭವಾಗುವುದು ಭೂ ಪರಭಾರೆಯ ಪ್ರಕ್ರಿಯೆ. ಇದಕ್ಕೆ ಸರ್ಕಾರ ಏಕಗವಾಕ್ಷಿ ಪರವಾನಿಗೆ ಪದ್ಧತಿಯ ಮೂಲಕ ಕೈಗಾರಿಕೆಗಳು, ಪ್ರವಾಸೋದ್ಯಮ ಮತ್ತಿತರ ಯೋಜನೆಗಳಿಗೆ ಶೀಘ್ರವಾಗಿ ಅನುಮತಿ ಕೊಡುತ್ತದೆ. ಪರವಾನಿಗೆಗಳೊಡನೆ ಇತರ ಹಲವು ಉತ್ತೇಜಕ ಸವಲತ್ತುಗಳನ್ನು ಬಂಡವಾಳ ಹೊಡಿಕೆದಾರರಿಗೆ ಕೊಡಲಾಗುತ್ತದೆ. ಇವೆಲ್ಲವೂ ಬಹು ಸಂತೋಷದ ವಿಚಾರ. ಇದರಿಂದ ರಾಜ್ಯಕ್ಕೆ ಹೆಚ್ಚು ಬಂಡವಾಳ, ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳು ಬರುತ್ತವೆ, ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುತ್ತದೆ.
ಆದರೆ ಬಹು ಮುಖ್ಯವಾದೊಂದು ವಿಚಾರವನ್ನು ಈ ಅನುಮತಿ ನೀಡುವ ಪ್ರಕ್ರಿಯಲ್ಲಿ ಮರೆಯಲಾಗುತ್ತಿದೆ. ಕೆಲ ಯೋಜನಾ ಸ್ಥಳಗಳು ವನ್ಯಜೀವಿ ಸಂರಕ್ಷಣೆಯ ದೃಷ್ಟಿಯಲ್ಲಿ ಬಹು ಸೂಕ್ಷ್ಮ ಪ್ರದೇಶಗಳಾಗಿರುವುದು ವಿವಾವದಕ್ಕೆ ಮತ್ತು ವಿರೋಧಕ್ಕೆ ಕಾರಣವಾಗುತ್ತಿವೆ. ಈ ಯೋಜನೆಗಳಿಗೆ ಅನುಮತಿ ನೀಡುವಾಗ ಅರಣ್ಯಇಲಾಖೆಯ ಅಭಿಪ್ರಾಯವಾಗಲಿ ಅಥವಾ ತಜ್ಞರ ಅನಿಸಿಕೆಗಳನ್ನಾಗಲಿ ಕೇಳಲಾಗುವುದಿಲ್ಲ. ಇಲ್ಲಿ ಅನುಮತಿ ಪಡೆದ ನಂತರ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಅನುಮತಿಸಿದ ಯೋಜನೆ ಇದಕ್ಕೆ ಆದ್ಯತೆ ಕೊಡಬೇಕೆಂದು ಬಂಡವಾಳದಾರರು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಾರೆ. ಈ ಒತ್ತಡದ ನಡುವೆ ಹಲವಾರು ಕಾನೂನು, ಮಾರ್ಗಸೂಚಿಗಳನ್ನು, ಗೊತ್ತಿಲ್ಲದಂತೆ ಕಣ್ಣು ಮುಚ್ಚಿ ಯೋಜನಾ ಪ್ರಕ್ರಿಯೆಗೆ ಅಸ್ತು ಎನ್ನಲಾಗುವುದು. ಹಿಂದಿನ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಚಾಲನೆ ಕೊಟ್ಟ ಕೆಲವು ಯೋಜನೆಗಳು ಈ ವನ್ಯಜೀವಿ ವಿರೋಧಿ ನೀತಿಗೆ ಉದಾಹರಣೆಗಳು.
ಕರ್ನಾಟಕದ ಬಂಡೀಪುರ ಮತ್ತುತಮಿಳುನಾಡಿನ ಮುಧುಮಲೈ ಹುಲಿ ಯೋಜನಾ ಪ್ರದೇಶಗಳಿಗೆ ಸೇತುವೆಯಂತಿರುವ ಕೆಬ್ಬೆಪುರ, ಬಾಚಳ್ಳಿ, ಎಲಚೆಟ್ಟಿ, ಮಂಗಳ ಗ್ರಾಮಗಳ ಸುತ್ತಮುತ್ತಲಿರುವ ಕಾಡುಗಳು ಆನೆ, ಹುಲಿ, ಚಿರತೆ, ಕಾಟಿ ಇನ್ನಿತರ ವನ್ಯಜೀವಿಗಳ ಓಡಾಟ ಮತ್ತು ಸಂಚಲನೆಗೆ ಬಹು ಮುಖ್ಯವಾದ ಕಾಡಿನ ಪಡಸಾಲೆ. ಈ ಪಡಸಾಲೆಯೀಗ ಹಲವಾರು ಕಾರಣಗಳಿಂದ ಕುಗ್ಗುತ್ತಲೇ ಇದೆ. ಇಂತಹಾ ಸೂಕ್ಷ್ಮ ಪ್ರದೇಶದಲ್ಲೊಂದು ರೆಸಾರ್ಟ್ ನಿರ್ಮಾಣಕ್ಕೆ ಹಿಂದಿನ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಸರ್ಕಾರದಿಂದ ಅನುಮತಿ ನೀಡಲಾಯಿತು. ಹಲವಾರು ಎಕರೆ ಪ್ರದೇಶದಲ್ಲಿ ತಲೆ ಎತ್ತ ಬೇಕಾಗಿದ್ದ ರೆಸಾರ್ಟ್ ಕೊನೆಗೆ ವನ್ಯಜೀವಿ ಸಂರಕ್ಷಕರ ಹಸ್ತಕ್ಷೇಪ ಮತ್ತು ಅರಣ್ಯ ಇಲಾಖೆಯಲ್ಲಿ ಕೆಲವು ವನ್ಯಜೀವಿ ಪರ ಅಧಿಕಾರಿಗಳಿಂದ ಸಧ್ಯಕ್ಕಂತೂ ತಡೆಹಿಡಿಯಲಾಗಿದೆ. ಈ ರೆಸಾರ್ಟ್ ನಿರ್ಮಾಣ ಕಾರ್ಯಗತಗೊಂಡಿದ್ದರೆ, ಬಂಡೀಪುರ ಮತ್ತು ಮುಧುಮಲೈ ಮಧ್ಯೆಯಿದ್ದ ಕಾಡಿನ ಕೊಂಡಿಯೊಂದು ಮುರಿದು ಬೀಳುತ್ತಿತ್ತು.
ರಾಜ್ಯದ ಒಣ ಜಿಲ್ಲೆಗಳಲ್ಲಿರುವ ಕೆಲವೇ ಕೆಲವು ವನ್ಯಜೀವಿಧಾಮಗಳಲ್ಲೊಂದು ದರೋಜಿ ಕರಡಿಧಾಮ. ಕರಡಿಗಳ ಸಂರಕ್ಷಣೆಗೆಂದೇ ವಿಶೇಷವಾಗಿ ರಕ್ಷಿಸಲ್ಪಟ್ಟ, ದೇಶದಲ್ಲಿರುವ ಕೆಲವೇ ಕೆಲವು ವನ್ಯಜೀವಿಧಾಮಗಳಲ್ಲಿ ಇದೂ ಒಂದು. ಬಳ್ಳಾರಿ ಜಿಲ್ಲೆಗೊಂದು ಹೆಮ್ಮೆಯ ಗರಿ ದರೋಜಿ ಕರಡಿಧಾಮ. ಇದರ ಬದಿಗೆ ಬಂತೊಂದು ವಿಪತ್ತು. ಕರಡಿಧಾಮದ ಪಕ್ಕದಲ್ಲಿಯೇ ಆಘಾತಕಾರಿಯಾಗಿ ಉಕ್ಕಿನ ಕಾರ್ಖಾನೆಗೆ ಹಿಂದೂಮುಂದೂ ನೋಡದೆ ಅನುಮತಿ ನೀಡಲಾಯಿತು. ಈ ಯೋಜನೆಯ ವಿದ್ಯುನ್ಮಾನಗಳನ್ನು ವಿಶ್ಲೇಷಿಸದೇ ಕೊಟ್ಟ ಅನುಮತಿಯನ್ನು ತಡೆಯಲು ವನ್ಯಜೀವಿ ಸಂರಕ್ಷಕರು ನೀಡಿದ ವೈಜ್ಞಾನಿಕ ವರದಿಯ ಆಧಾರದ ಮೇಲೆ, ಆಗಿನ ಅರಣ್ಯ ಮಂತ್ರಿಗಳು ಮತ್ತು ಮುಖ್ಯ ಮಂತ್ರಿಗಳ ದೃಢ ನಿರ್ಧಾರದಿಂದ ದರೋಜಿ ಕರಡಿಧಾಮದ ಸಂರಕ್ಷಣೆಯಾಯಿತು. ವರದಿಯನ್ನು ಕಡೆಗಣಿಸಿ ಉಕ್ಕಿನತ್ತ ಒಲವು ತೋರಿದ್ದರೆ, ಸರ್ಕಾರ ಮತ್ತೆ ಸರ್ವೋಚ್ಚ ನ್ಯಾಯಾಲಯ ಮತ್ತು ಸಿ.ಇ.ಸಿಗಳ ಕೆಂಗಣ್ಣಿಗೆ ಗುರಿಯಾಗಬೇಕಿತ್ತು. ಈ ಸಕಾರಾತ್ಮಕ ನಿರ್ಧಾರದಿಂದ ಕೆಲವು ರಾಜಕೀಯ ಮುಖಂಡರುಗಳು ಅಜ್ಞಾತವಾಸ ಅನುಭವಿಸುವುದು ತಪ್ಪಿತು. ಅವರ ಒಳ ವರ್ತುಲದಲ್ಲಿದ್ದ ಅಧಿಕಾರಿಯೊಬ್ಬರ ಮಾತು ಕೇಳಿದ್ದರೆ ರಾಜಕೀಯ ಮುಖಂಡರ ತಲೆದಂಡವಾಗುತ್ತಿದ್ದುದು ನಿಶ್ಚಿತ.
ನಾವು ಮತ್ತೆ ದಕ್ಷಿಣ ಕರ್ನಾಟಕ್ಕೆ ಹಿಂದಿರುಗಿದರೆ, ಮತ್ತೊಂದು ವಿನಾಶಕಾರಿ ಸಕ್ಕರೆ ಕಾರ್ಖಾನೆಗೆ ಶಂಕು ಸ್ಥಾಪನೆಯಾಗಬೇಕಿದ್ದುದು ಬಿಳಿಗಿರಿರಂಗನಬೆಟ್ಟದ ತಪ್ಪಲಿನಲ್ಲಿ. ವನ್ಯಜೀವಿಧಾಮದ ಪಕ್ಕದಲ್ಲೇ ಅನುಮತಿ ನೀಡಿದ ಸಕ್ಕರೆ ಕಾರ್ಖಾನೆ ಪ್ರಾರಂಭವಾದರೆ ಅದು ರಾಜ್ಯದ ಪ್ರಮುಖ ವನ್ಯಜೀವಿ ಆವಾಸಸ್ಥಾನವಾದ ಬಿಳಿಗಿರಿರಂಗಸ್ವಾಮಿಬೆಟ್ಟಕ್ಕೆ ದೊಡ್ಡ ಕುತ್ತು ತರುತ್ತಿತ್ತು. ಅರಣ್ಯ ಇಲಾಖೆಯ ಸ್ಥಳೀಯ ಅಧಿಕಾರಿಗಳ ಆಸಕ್ತಿ ಮತ್ತು ಸಮಯೋಚಿತ ಕಾರ್ಯದಿಂದ ಇದು ಸಧ್ಯದಲ್ಲಿ ಪರದೆಯ ಹಿಂದೆ ಸರಿದಿದೆ.
‘ರಾಗಿಕಲ್ಲು ತಿರುಗುವಾಗ ರಾಜ್ಯವೆಲ್ಲಾ ನೆಂಟರಂತೆ. ಅವಕಾಶವಿದ್ದಲ್ಲಿ ಬಂಡವಾಳ ಹೂಡುವವರು ಬೇಕಾಗಿದ್ದಕ್ಕಿಂತ ಹೆಚ್ಚಿಗೆ ಭೂಮಿಯನ್ನು ಪಡೆಯಲು ಪ್ರಯತ್ನಿಸುತ್ತಾರೆ ಹಾಗೂ ಅವರು ವನ್ಯಜೀವಿ ಸಂರಕ್ಷಣೆ, ಸ್ಥಳೀಯ ಪರಿಸರದ ಬಗ್ಗೆಯೇನೂ ಕಾಳಜಿ ವಹಿಸುವವರಲ್ಲ, ಅವರಿಗಿರುವ ಗುರಿ ಒಂದೇ. ಬಂಡವಾಳಕ್ಕೆ ತಕ್ಕಂತೆ ಲಾಭ. ಆದರೆ ಸರ್ಕಾರ ಜನರ ಹಿತಾಸಕ್ತಿಯೊಡನೆ ವನ್ಯಜೀವಿ ಸಂರಕ್ಷಣೆಯತ್ತ ಸಹ ಗಮನ ಕೊಡಬೇಕಾಗುತ್ತದೆ. ಎಲ್ಲಾ ಕಡೆಯೂ ಅಭಿವೃದ್ದಿ ನಿಲ್ಲಿಸುವುದು ಗುರಿಯಲ್ಲ. ಆದರೆ ಪರಿಸರ ಸೂಕ್ಷ್ಮ ಪ್ರದೇಶ, ಪ್ರಮುಖ ವನ್ಯಜೀವಿ ಪಡಸಾಲೆಗಳು, ರಾಷ್ಟ್ರೀಯ ಉದ್ಯಾನ, ವನ್ಯಜೀವಿಧಾಮಗಳಿಂದ ನಮ್ಮ ಅಭಿವೃದ್ಧಿಯನ್ನು ದೂರವಿಡಬೇಕಾಗಿದೆ.
೧೯ ಮತ್ತು ೨೦ನೇ ಶತಮಾನದಲ್ಲಿ ಐರೋಪ್ಯ ರಾಷ್ಟ್ರಗಳಲ್ಲಾದ ಕೈಗಾರಿಕಾ ಕ್ರಾಂತಿ, ನಾಟಾ ಉದ್ದಿಮೆಗಾಗಿ ಕಾಡಿನ ನಾಶ, ಅತಿಯಾದ ಬೇಟೆಯಿಂದ ಅಲ್ಲಿದ್ದ ಹಲವಾರು ವನ್ಯಜೀವಿಗಳು ನಶಿಸಿ ಹೋದವು. ಸ್ಕಾಟ್‌ಲ್ಯಾಂಡ್‌ನಿಂದ ತೋಳಗಳು, ಸ್ವಿಟ್ಜ್‌ರ್‌ಲ್ಯಾಂಡ್‌ನಿಂದ ಕರಡಿ ಮತ್ತು ಲಿಂಕ್ಸ್, ಪೋಲೆಂಡ್‌ನಿಂದ ಕಾಡೆಮ್ಮೆ, ನೆದರ್‌ಲ್ಯಾಂಡ್ಸ್‌ನಿಂದ ಹಂದಿ ಮೀನು (ಡಾಲ್ಫಿನ್), ಸ್ಪೇನ್‌ನಿಂದ ಬೊಕ್ಕ ತಲೆಯ ಕೆಂಬರಲು (ಐಬಿಸ್) ಹಕ್ಕಿ, ಹೀಗೆ ಹತ್ತಾರು ಉದಾಹರಣೆಗಳಿವೆ. ಆ ವನ್ಯಜೀವಿಗಳನ್ನು ಹಿಂದಕ್ಕೆ ತರಲು ಇಂದು ಅದೇ ದೇಶಗಳು ಮಿಲಿಯಾಂತರ ಡಾಲರ್ ಹಣ ವ್ಯಯ ಮಾಡಲು ತಯಾರಾಗಿವೆ. ಆ ದೇಶಗಳು ಮಾಡಿರುವ ತಪ್ಪುಗಳಿಂದ ಪಾಠ ಕಲಿಯುವುದು ಜಾಣತನ, ಆದರೆ ಅದೇ ತಪ್ಪನ್ನು ನಾವೂ ಮಾಡುವುದು ಮೂರ್ಖತನವಾಗುತ್ತದೆ.
ಈ ವರ್ಷದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ಮತ್ತು ಬೆಂಬಲ ಕೊಡಲಾಗುವುದೆಂದು ಘೋಷಿಸಲಾಗಿದೆ. ಪ್ರವಾಸೋದ್ಯದಲ್ಲಿ ಹೆಚ್ಚು ಅರಣ್ಯ ಪ್ರದೇಶಗಳಿರುವ ಮೈಸೂರು, ಕೊಡಗು, ಚಿಕ್ಕಮಗಳೂರು, ಚಾಮರಾಜನಗರ, ಉತ್ತರಕನ್ನಡ ಜಿಲ್ಲೆಗಳು ಬಂಡವಾಳ ಹೂಡುವವರಿಗೆ ಆಕರ್ಷಕ ಕೇಂದ್ರಗಳು. ಇದರೊಡನೆ ‘ಆಡೋದು ಮಡಿ, ಉಂಬೋದು ಮೈಲಿಗೆ ಎಂಬಂತೆ ಹಲವರು ಪರಿಸರ ಪ್ರವಾಸೋದ್ಯಮದ (ಇಕೋ ಟೊರಿಸಂ) ಹೆಸರಿನಲ್ಲಿ ವನ್ಯಜೀವಿ ವಿರೋಧದ ಯೋಜನೆಗಳನ್ನು ಸ್ಥಾಪಿಸಲು ಕಾತುರರಾಗಿರುತ್ತಾರೆ. ಇವರ ಹುಮ್ಮಸ್ಸು, ಸಡಗರವೆಲ್ಲ ಅತೀ ಆಕರ್ಷಣಿಯ ನೈಸರ್ಗಿಕ ಪ್ರದೇಶಗಳಲ್ಲಿ ಉದ್ದಿಮೆ ಸ್ಥಾಪಿಸುವುದಷ್ಟೇ ಆಗಿರುತ್ತದೆ. ವನ್ಯಜೀವಿ ಕಾಳಜಿಯಾಗಲಿ, ಸಂರಕ್ಷಣೆಗೆ ಬೆಂಬಲವಾಗಲಿ ಯಾವುದೂ ಇವರ ಧ್ಯೇಯವಾಗಿರುವುದಿಲ್ಲ.
ನಮ್ಮಲ್ಲಿನ ಭೂಪ್ರದೇಶದಲ್ಲಿ ವನ್ಯಜೀವಿಗಳಿಗಾಗಿ ಮೀಸಲಿಟ್ಟಿರುವುದು ಕೇವಲ ಶೇಕಡ ನಾಲ್ಕರಷ್ಟು ಮಾತ್ರ. ಈ ಪ್ರದೇಶಗಳಿಂದ ನಮ್ಮ ರೆಸಾರ್ಟ್, ಕೈಗಾರಿಕೆಗಳನ್ನು ದೂರವಿಟ್ಟರೆ, ನಮ್ಮಆರ್ಥಿಕ ಮುನ್ನಡೆಗೆ ಯಾವುದೇ ಪರಿಣಾಮ ಬೀರುವುದಿಲ್ಲ. ನಮ್ಮ ಶೇಕಡ ಒಂಭತ್ತರಷ್ಟು ಆರ್ಥಿಕ ಅಭಿವೃದ್ದಿಯ ಗುರಿಯನ್ನು ಮುಂದುವರಿಸಿಕೊಂಡು ಹೋಗಬಹುದು.
ಈ ಲೇಖನದ ಪರಿಷಕೃತ ಆವೃತ್ತಿ ದಿನಾಂಕ ೦೫-೦೫-೨೦೧೨ರಂದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿದೆ.
Subscribe to:
Post Comments (Atom)
No comments:
Post a Comment