ದೇಶದಲ್ಲಿ ಹೆಚ್ಚಿನ ಹುಲಿಗಳಿರುವ ಅಂಕಿ-ಅಂಶಗಳನ್ನು ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಘೋಷಿಸಿತು. ಹುಲಿಗಳಿರುವ ಕೆಲವು ದೇಶಗಳಲ್ಲಿ ಈ ಮಾರ್ಜಾಲ ನಶಿಸಿ ಹೋಗುವ ಹಂತದಲ್ಲಿರುವ ಸಮಯದಲ್ಲಿ ಭಾರತದ ಅಂಕಿ-ಅಂಶಗಳು ಬಹು ಸಕಾರಾತ್ಮಕವಾದ ವಿಚಾರವಾಗಿದೆ. ಈ ಹುಲಿ ಸಂರಕ್ಷಣೆಯ ಯಶಸ್ಸಿನ ಒಂದು ಪ್ರಮುಖ ಕಾರಣವೆಂದರೆ ಅರಣ್ಯ ಇಲಾಖೆಯಲ್ಲಿ ಹಗಲು-ರಾತ್ರಿ ದುಡಿಯುವ ‘ಮುಂಚೂಣಿ ಸಿಬ್ಬಂದಿ’. ಈ ಬರಿಗಾಲಿನ ಯೋಧರು ವನ್ಯಜೀವಿ ಮತ್ತು ಅವುಗಳ ಆವಾಸಸ್ಥಾನಗಳನ್ನು, ಅವುಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿರುವ ಅಪಾಯಗಳನ್ನು ತಡೆಯಲು ಶ್ರಮಿಸುತ್ತಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದ ವನ್ಯಜೀವಿ ಧ್ವಜವನ್ನು ಎತ್ತರಕ್ಕೇರಲು ಇವರ ಕೊಡುಗೆ ಅಪಾರ. ಆದರೆ ಅಲಕ್ಷಿತರಾಗಿರುವ ಈ ವನ್ಯಜೀವಿ ಸಂರಕ್ಷಕರ ಕ್ಷೇಮ ಮತ್ತು ಒಳಿತಿಗಾಗಿ ಮಾಡಬೇಕಾಗಿರುವುದು ಸಾಕಷ್ಟಿದೆ.
ಭಾರತದಲ್ಲಿ ಎರಡು ವಿಧವಾದ ಮುಂಚೂಣಿ ಸಿಬ್ಬಂದಿ, ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಮೊದಲನೆಯ ಗುಂಪು ಸರ್ಕಾರದ ಕಾಯಂ ಸಿಬ್ಬಂದಿ. ಸರ್ಕಾರದ ನೌಕರಿ ಭರ್ತಿಯ ಮಾಮೂಲಿ ನಿಯಮಾವಳಿಗಳ ಮೂಲಕ ಕೆಲಸಕ್ಕೆ ಸೇರಿಕೊಳ್ಳುವವರು. ಇವರು ಸರ್ಕಾರದ ನಿರ್ವಹಣಾ ವ್ಯವಸ್ಥೆಯ ಮತ್ತು ಎಲ್ಲಾ ಸರ್ಕಾರಿ ಸಂಬಳ ಮತ್ತು ಸೌಲಭ್ಯಗಳಿಗೆ ಅರ್ಹರು. ಸರ್ಕಾರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಇತರೆ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೋಲಿಸಿದರೆ ಇವರಿಗೆ ಸಾಕಷ್ಟು ಜಟಿಲ ಸಮಸ್ಯೆಗಳಿವೆ. ಆದರೆ ಸರ್ಕಾರಿ ನೌಕರರಂತೆ ಎಲ್ಲಾ ಕೆಲಸಗಳನ್ನು ಮಾಡಿಯೂ ಬಹಳ ಕಡಿಮೆ ಸಂಬಳ ಪಡೆದು, ಯಾವುದೇ ಸೌಲಭ್ಯಗಳಿಲ್ಲದೆ ಎಲ್ಲರ ನಿರ್ಲಕ್ಷ್ಯಕ್ಕೊಳಗಾಗಿ ಅರಣ್ಯ ಇಲಾಖೆಯಲ್ಲಿ ದಿನನಿತ್ಯ ಬೆವರು ಹರಿಸಿ ದುಡಿಯುವ ಇನ್ನೊಂದು ಗುಂಪಿದೆ. ಇವರೇ ನಮ್ಮ ರಕ್ಷಿತಾರಣ್ಯಗಳ ಬೇಟೆ ನಿಗ್ರಹ ಶಿಬಿರಗಳಲ್ಲಿ ಕೆಲಸ ಮಾಡುವ ದಿನಗೂಲಿ ನೌಕರರು. ವನ್ಯಜೀವಿಗಳನ್ನು ಎಲ್ಲಾ ತೊಂದರೆಗಳಿಂದ ದೂರವಿಡಲು ಕಾಡಿನ ಮೂಲೆಗಳಲ್ಲಿರುವ ಬೇಟೆ ನಿಗ್ರಹ ಶಿಬಿರಗಳಲ್ಲುಳಿದು ಪ್ರತಿನಿತ್ಯ ಮರಗಳ್ಳರು, ಬೇಟೆಗಾರರಿಂದ ವನ್ಯಜೀವಿಗಳನ್ನು ರಕ್ಷಿಸಲು ಕಾಡಿನಲ್ಲಿ ಗಸ್ತು ತಿರುಗುವವರು ಇವರೇ.
ಇವರು ದೀರ್ಘಕಾಲ ಇದೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆಂದು ಕಾನೂನಿನ ದಾಖಲೆಗಳಲ್ಲಿ ತೋರಗೊಡದಿರುವುದಕ್ಕೆ ಈ ಹಂಗಾಮಿ ನೌಕರರ (ಕೆಲವರು ಹಲವಾರು ವರ್ಷಗಳು ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರೂ) ದಾಖಲೆಗಳಲ್ಲಿ ಆರ್ಥಿಕ ವರ್ಷದ ಕೊನೆಯಲ್ಲಿ ಬಿಡುವು ತೋರಿಸಲಾಗುತ್ತದೆ. ಇವರನ್ನು ಯಾವುದೇ ಸರ್ಕಾರಿ ಸಂಪ್ರದಾಯಗಳಿಲ್ಲದೆ ನೇಮಿಸಿ ಕೊಳ್ಳಲಾಗುತ್ತದೆ ಮತ್ತು ಇವರನ್ನು ‘ದಿನಗೂಲಿ ನೌಕರ’ರೆಂದು ಕರೆಯಲಾಗುತ್ತದೆ. ಇವರಿಗೆ ದಿನಗೂಲಿ ಬಿಟ್ಟರೆ ಸರ್ಕಾರಿ ನೌಕರರಿಗೆ ಸಿಗುವ ಯಾವುದೇ ಸೌಲಭ್ಯ, ವೇತನ ಹೆಚ್ಚಳ, ವಿಮೆ, ವೈದ್ಯಕೀಯ ಸೌಲಭ್ಯ ಸಿಗುವುದಿಲ್ಲ. ಅಲ್ಲದೆ, ತಿಂಗಳ ಕೊನೆಯಲ್ಲಿ ನಿಖರವಾಗಿ ಸಂಬಳ, ನಿತ್ಯಭತ್ಯೆ ಯಾವುದಕ್ಕೂ ಇವರು ಅರ್ಹರಲ್ಲ. ಸಂಬಳವೂ ಕೆಲವೊಮ್ಮೆ ಐದಾರು ತಿಂಗಳಾದರೂ ಕೈಗೆ ಸಿಗುವುದಿಲ್ಲ. ಸಿಕ್ಕರೂ ಕೆಲವರಿಗೆ ಹಲವಾರು ಸಬೂಬುಗಳನ್ನು ಹೇಳಿ, ಅವರಿಗೆ ನಿಗದಿಗೊಳಿಸಿದ ಸಂಬಳದಲ್ಲಿ ಕಡಿತ ಮಾಡಲಾಗುತ್ತದೆ. ಸರ್ಕಾರಿ ಧಾರಣೆಗನುಸಾರವಾಗಿ ಸಂಬಳ ಸಿಕ್ಕರೆ ಅದೇ ಅವರ ಸೌಭಾಗ್ಯ.
ಬೇಸಿಗೆಯ ಧಗೆಯಲ್ಲಿ ಕಾಡಿನಲ್ಲಿ ಬೆಂಕಿ ಆರಿಸುವುದು, ಕಾಡುಪ್ರಾಣಿಗಳ ಮಧ್ಯೆ ಪ್ರತಿನಿತ್ಯ ಹತ್ತಾರು ಕಿಲೋಮೀಟರ್ ನಡೆದು, ಕಾನೂನುಬಾಹಿರವಾಗಿ ಕಾಡುಗಳಿಂದ ಲಾಭ ಪಡೆಯಲು ಹವಣಿಸುವವರ ವಿರುದ್ಧ ಹೋರಾಡುವುದು, ಜೀವನವನ್ನೇ ಅಪಾಯಕ್ಕೆ ಒಡ್ಡಿ ಕೆಲಸ ಮಾಡುವುದೇ ಇವರ ದಿನನಿತ್ಯದ ಕರ್ತವ್ಯ. ಇವರಿರುವ ಬೇಟೆ ನಿಗ್ರಹ ಶಿಬಿರಗಳಲ್ಲಿ ಸೌಲಭ್ಯಗಳು ಕೂಡ ಹೆಚ್ಚಿಲ್ಲ. ಆದರೆ ಇವರು ಮಾಡುವ ಕಷ್ಟ ಕೆಲಸದಿಂದ ವನ್ಯಜೀವಿಗಳಲ್ಲದೇ ಹಲವು ವನ್ಯಜೀವಿ ವಿಜ್ಞಾನಿಗಳು, ಅರಣ್ಯಾಧಿಕಾರಿಗಳು, ಸರ್ಕಾರ ಮತ್ತು ಸಮಾಜವೇ ಸೌಲಭ್ಯ ಪಡೆಯುತ್ತದೆ. ಇವರು ವನ್ಯಜೀವಿಗಳನ್ನು ಉಳಿಸದಿದ್ದರೆ ವನ್ಯಜೀವಿ ವಿಜ್ಞಾನಿಗಳು ಏನು ಸಂಶೋಧನೆ ನಡೆಸಲು ಸಾಧ್ಯ? ಪ್ರವಾಸೋದ್ಯಮದವರು ಹುಲಿ, ಆನೆಗಳನ್ನು ತೋರಿಸಿ ತಮ್ಮ ವ್ಯಾಪಾರ ಕುದುರಿಸುವುದಾದರೂ ಹೇಗೆ ಸಾಧ್ಯ?
ಇವರಿಗೆ ಸೌಲಭ್ಯಗಳನ್ನು ಉತ್ತಮಗೊಳಿಸಿದರೆ ಅದನ್ನು ಸರ್ಕಾರದ ಎಲ್ಲಾ ಇಲಾಖೆಗಳಲ್ಲಿರುವ ಹಂಗಾಮಿ ನೌಕರರಿಗೆ ಅನ್ವಯಗೊಳಿಸಬೇಕಾಗಬಹುದೆಂದು ಅರಣ್ಯ ಇಲಾಖೆಯ ದಿನಗೂಲಿ ನೌಕರರ ಸೇವಾ ಭದ್ರತೆಗೆ ಸಂಬಂಧಿಸಿದಂತೆ ಸರ್ಕಾರವೂ ಯಾವುದೇ ಸಕ್ರಿಯ ಕಾರ್ಯಗಳನ್ನು ಕೈಗೊಂಡಿಲ್ಲ. ಕರ್ನಾಟಕ ರಾಜ್ಯವೊಂದರಲ್ಲೇ ಸರ್ಕಾರದ ವಿವಿಧ ಇಲಾಖೆಗಳಲ್ಲಿ 5 ಸಾವಿರದಿಂದ 6 ಸಾವಿರದಷ್ಟು ಹಂಗಾಮಿ ನೌಕರರಿರುವುದರಿಂದ ಅರಣ್ಯ ಇಲಾಖೆ ಯಲ್ಲಿರುವವರಿಗೆ ಹೆಚ್ಚಿನ ವೇತನ ಅಥವಾ ಸೌಲಭ್ಯಗಳನ್ನು ಕೊಟ್ಟರೆ ಅದು ಎಲ್ಲಾ ಇಲಾಖೆಯವರಿಗೆ ಅನ್ವಯವಾಗಲಿ ಎಂಬ ಬೇಡಿಕೆ ಬರಬಹುದೆಂಬುದು ಅವರ ಹೆದರಿಕೆ. ಆದರೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಕೆಲಸದ ಕಾಠಿಣ್ಯ ಮತ್ತು ಅದರ ತೀವ್ರತೆ ಇತರ ಇಲಾಖಾ ನೌಕರರಿಗಿಂತ ಬಹು ಹೆಚ್ಚೆಂಬ ವಿಷಯವನ್ನು ಸರ್ಕಾರ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಅರಣ್ಯ ಇಲಾಖೆಯ ಕೆಲವು ಅಧಿಕಾರಿಗಳು ತಮ್ಮ ಇತಿಮಿತಿಯಲ್ಲಿ ಈ ಮುಂಚೂಣಿ ಸಿಬ್ಬಂದಿಯ ಸವಲತ್ತುಗಳನ್ನು ಉತ್ತಮಗೊಳಿಸಲು ಪ್ರಯತ್ನಿಸಿದ್ದಾರೆ. ಆದರೆ ಈ ಅಧಿಕಾರಿಗಳು ಅಲ್ಪಸಂಖ್ಯೆಯಲ್ಲಿದ್ದಾರೆ.
ರಾಜ್ಯದ ವನ್ಯಜೀವಿಧಾಮ ಮತ್ತು ರಾಷ್ಟ್ರೀಯ ಉದ್ಯಾನಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಮುಂಚೂಣಿ ಸಿಬ್ಬಂದಿಗೆ ವಿಮೆ ಮಾಡಿಸಬೇಕೆಂಬ ಆದೇಶವಿದೆ. ಪ್ರವಾಸಿಗರಿಂದ ಸಂಗ್ರಹಿಸಿದ ಶುಲ್ಕದಿಂದ ವಿಮೆಯನ್ನು ಮಾಡಿಸಲು ಆರ್ಥಿಕ ಮಂಜೂರಾತಿ ಕೂಡ ಕೊಡಲಾಗಿದೆ. ಆದರೂ ಕೆಲವು ವನ್ಯಜೀವಿ ವಿಭಾಗಗಳಲ್ಲಿ ಇದನ್ನು ಇಂದಿಗೂ ಕಾರ್ಯಗತಗೊಳಿಸಿಲ್ಲ. ಕೆಲವೆಡೆ ವಿಮೆಯನ್ನು ಮಾಡಿಸಲಾಗಿದೆಯಾದರೂ ಅದನ್ನು ಸಮಯಕ್ಕೆ ಸರಿಯಾಗಿ ನವೀಕರಿಸಲಾಗುತ್ತಿಲ್ಲ. ವಿಮೆ ಸಕಾಲಕ್ಕೆ ನವೀಕರಿಸದ ಕಾರಣ, ಸಾವು–ನೋವಿಗೆ ಈಡಾದ ಸಿಬ್ಬಂದಿಗೆ ನ್ಯಾಯವಾಗಿ ದೊರಕಬೇಕಾದ ವಿಮೆಯೂ ಸಿಗುತ್ತಿಲ್ಲ.
ಮನುಷ್ಯನ ಜೀವಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಆದರೆ ವಿಮೆಯಿಂದ ಬರುತ್ತಿದ್ದ ಅಲ್ಪ ಮಟ್ಟದ ಮೊತ್ತದಿಂದ ಆದರೂ ಮೃತರ ಕುಟುಂಬಕ್ಕೆ ಸಹಾಯವಾಗುತ್ತದೆ. ಈ ವಿಮಾ ಸೌಲಭ್ಯವನ್ನು ಸಕಾಲಿಕವಾಗಿ ನವೀಕರಿಸುವುದನ್ನು ಶಿಸ್ತಾಗಿ ಪಾಲಿಸಬೇಕಾಗಿದೆ. ಕೆಲ ಸಂಘ-ಸಂಸ್ಥೆಗಳವರು ಮುಂಚೂಣಿ ಸಿಬ್ಬಂದಿಗೆ ವಿಮೆ ಮಾಡಿಸುವಲ್ಲಿ ಆಸಕ್ತಿ ವಹಿಸಿದ್ದಾರೆ. ಆದರೆ ಇಂತಹ ಸಹಾಯ ಕೇವಲ ನಾಗರಹೊಳೆ, ಬಂಡೀಪುರದಂತಹ ಖ್ಯಾತ ಹುಲಿಧಾಮಗಳಿಗೆ ಮೀಸಲಾಗಿರುವುದೇ ಹೆಚ್ಚು. ಹಾಗಾಗಿ ಈ ಸೌಲಭ್ಯಗಳನ್ನು ಸರ್ಕಾರವೇ ನೀಡಿದರೆ ಸೂಕ್ತ ಹಾಗೂ ಶಾಶ್ವತವಾದ ವ್ಯವಸ್ಥೆಯಾಗಬಹುದು.
ಈ ದಯನೀಯ ಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಬೇಟೆ ನಿಗ್ರಹ ಶಿಬಿರಗಳಲ್ಲಿ ಮತ್ತು ಬೆಂಕಿ ತಡೆ ಶಿಬಿರಗಳಲ್ಲಿ ಕೆಲಸ ಮಾಡಲು ಜನರೇ ಸಿಗುವುದು ಅನುಮಾನ. ದೇಶದ ಆರ್ಥಿಕ ಸ್ಥಿತಿ ಉತ್ತಮಗೊಂಡಂತೆ ಕೂಲಿಯೂ ಹೆಚ್ಚುತ್ತಲಿದೆ. ದೇಶದ ಕೆಲ ಭಾಗಗಳಲ್ಲಿ ಕಾಫಿ, ಅಡಿಕೆಯಂತಹ ವಾಣಿಜ್ಯ ಬೆಳೆಗಳ ಕೃಷಿಯಲ್ಲಿ ದಿನಗೂಲಿ ವೇತನವು ಆರುನೂರು ರೂಪಾಯಿಗಳಿಗೆ ತಲುಪಿದೆ. ಇಷ್ಟು ಅಧಿಕ ದಿನಗೂಲಿಯಿದ್ದರೂ ಕೃಷಿ ಕೆಲಸಕ್ಕೆ ಕೆಲಸಗಾರರು ಸಿಗುವುದು ಬಹು ಕಷ್ಟವಾಗಿದೆ. ಇದರೊಡನೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಪಡಿತರ ಸೌಲಭ್ಯ ಅಂತಹ ಸರ್ಕಾರಿ ಕಾರ್ಯನೀತಿಗಳು ಕೃಷಿ ಕೆಲಸಗಾರರ ಲಭ್ಯತೆಯ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರಿವೆ.
ಇಂತಹ ಪರಿಸ್ಥಿತಿಯಲ್ಲಿ ಮುಂಬರುವ ದಿನಗಳಲ್ಲಿ ಅರಣ್ಯ ಇಲಾಖೆಯ ವನ್ಯಜೀವಿ ಸಂರಕ್ಷಣಾ ವಿಭಾಗದ ಕೆಲಸಕ್ಕೆ ನೌಕರರು ಸಿಗುವುದು ಬಹು ಕಷ್ಟವಾಗುತ್ತದೆ. ಕಡಿಮೆ ವೇತನ, ಸಂಬಳ ನೀಡುವಲ್ಲಿ ವಿಳಂಬ, ಬರುವ ವೇತನದಲ್ಲೂ ಕಡಿತ, ದುರ್ಗಮ ಪ್ರದೇಶಗಳಲ್ಲಿ ಜೀವನ, ಕುಟುಂಬದಿಂದ ವಾರಗಟ್ಟಲೆ ದೂರವಿರುವುದು, ವೈದ್ಯಕೀಯ ಸೌಲಭ್ಯಗಳ ಕೊರತೆ, ಇವೆಲ್ಲದರಿಂದ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದಲ್ಲಿ ಹಂಗಾಮಿ ಆಧಾರದ ಮೇಲೆ ನೌಕರಿ ಮಾಡುವುದು ಯಾರಿಗೂ ಬೇಡವಾಗುತ್ತಿದೆ. ಈ ವಿಚಾರದಲ್ಲಿ ಅರಣ್ಯ ಇಲಾಖೆ ಗಮನ ಕೊಡದಿದ್ದರೆ, ಮುಂದಿನ ದಿನಗಳಲ್ಲಿ ಸಂರಕ್ಷಣಾ ಕಾರ್ಯ ಮಾಡಬೇಕಾದ ಮುಂಚೂಣಿ ವಲಯಗಳಲ್ಲಿ ಸಾಕಷ್ಟು ತೆರಪು ಇರುವುದರಲ್ಲಿ ಅನುಮಾನವೇ ಇಲ್ಲ. ಈ ಸಿಬ್ಬಂದಿಗಿರುವ ಅನನುಕೂಲಗಳ ವಿಚಾರದಲ್ಲಿ ಸರ್ಕಾರವು ತಕ್ಷಣ ಗಮನ ಹರಿಸದಿದ್ದಲ್ಲಿ ವನ್ಯಜೀವಿ ಮತ್ತು ಕಾಡಿನ ಸಂರಕ್ಷಣೆಗೆ ಅತೀ ಅಗತ್ಯವಾದ ಬೇಟೆ ನಿಗ್ರಹ ಶಿಬಿರಗಳು, ಗಸ್ತು ತಿರುಗುವ ವಿಚಾರಗಳು ಗತಕಾಲದ ವಿಚಾರಗಳಾಗುವುದರಲ್ಲಿ ಅಚ್ಚರಿಯೇನಿಲ್ಲ. ವನ್ಯಜೀವಿ ವಿಭಾಗಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಹಲವಾರು ಮುಂಚೂಣಿ ಸಿಬ್ಬಂದಿ ಸಾಕಷ್ಟು ವಯಸ್ಸಾದವರು. ಇವರಿಗೆ ಕಾಡು ತಿರುಗುವ ಕೆಲಸ ಕಷ್ಟವಾಗುತ್ತಿದೆ. ಆದರೆ ಇವರ ಸ್ಥಾನಗಳನ್ನು ತುಂಬಲು ಯುವಕರು ಮುಂದೆ ಬರುತ್ತಿಲ್ಲ. ಹಾಗಾಗಿ ವನ್ಯಜೀವಿ ಸಂರಕ್ಷಣಾ ದೃಷ್ಟಿಕೋನದಿಂದ ಇವರ ಸಮಸ್ಯೆ ಬಗೆಹರಿಸುವುದು ಎಲ್ಲದಕ್ಕಿಂತ ಬಹು ಮುಖ್ಯವಾಗಿ ಆಗಬೇಕಾಗಿರುವ ಕಾರ್ಯ.
ನಿಗದಿತ ವೇತನವನ್ನು ಸಕಾಲಿಕವಾಗಿ ನೇರವಾಗಿ ಬ್ಯಾಂಕ್ ಖಾತೆಗಳಿಗೆ ರವಾನಿಸುವುದು ಈ ಮುಂಚೂಣಿ ಸಿಬ್ಬಂದಿಯನ್ನು ಉತ್ತೇಜಿಸುವಲ್ಲಿ ಬಹು ಮುಖ್ಯವಾದ ಪಾತ್ರವನ್ನು ವಹಿಸಲಿದೆ. ಅಧಿಕಾರಿಗಳು ಮನಸೋ ಇಚ್ಛೆ ಹಂಗಾಮಿ ನೌಕರರನ್ನು ಕೆಲಸದಿಂದ ಹೊರಹಾಕುವುದನ್ನು ತಡೆಯಬೇಕು. ಈ ಕೆಲಸಗಳಲ್ಲಿ ಹೆಚ್ಚಾಗಿ ಇರುವವರು ಕಾಡು ಕುರುಬರು, ಜೇನು ಕುರುಬರು, ಸೋಲಿಗರಂತಹ ಅರಣ್ಯವಾಸಿಗಳು. ಇವರಿಗೆ ರಾಜಕೀಯ ಬೆಂಬಲವೂ ಕಡಿಮೆ ಮತ್ತು ಅನ್ಯಾಯಗಳ ವಿರುದ್ಧ ದನಿಯೆತ್ತುವ ಧೈರ್ಯ ಮತ್ತು ಚಾತುರ್ಯ ಇಲ್ಲದ ಜನರಿವರು. ನಿಯಮಾನುಸಾರ ತಮಗೆ ಸಿಗಬೇಕಾದ ಸಂಬಳದ ಬಗೆಗೂ ಹಲವರಿಗೆ ಅರಿವು ಇಲ್ಲ. ಇಂತಹ ಜನರನ್ನು ಎಷ್ಟು ವರ್ಷಗಳವರೆಗೆ ಶೋಷಿಸುವುದು? ಇತ್ತೀಚೆಗೆ, ಹತ್ತು ವರ್ಷಗಳಿಗಿಂತ ಹೆಚ್ಚು ಅವಧಿಗೆ ಕೆಲಸ ಮಾಡಿದ ತಾತ್ಕಾಲಿಕ ಸಿಬ್ಬಂದಿಯನ್ನು ಕಾಯಂಗೊಳಿಸಲು ನಿರ್ಧರಿಸಲಾಯಿತು. ಆದರೆ ಹತ್ತು ವರ್ಷಗಳಿಗಿಂತ ಹೆಚ್ಚು ಅವಧಿಗೆ ಕೆಲಸ ಮಾಡಿದ ಹಲವರ ಹೆಸರುಗಳನ್ನು ವಿಭಾಗ ಮಟ್ಟದಿಂದ ಇಲಾಖಾ ಮುಖ್ಯಸ್ಥರಿಗೆ ಕಳುಹಿಸಲೇ ಇಲ್ಲ!
ವನ್ಯಜೀವಿ ಸಂರಕ್ಷಣೆಯಲ್ಲಿ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ವಿಶಿಷ್ಟ ಸ್ಥಾನಮಾನವಿದೆ. ಅಪಾಯಕ್ಕೆ ಒಳಗಾಗಿರುವ ವನ್ಯ ಪ್ರಭೇದಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ನಾವು ಮುಂದಾಳತ್ವ ವಹಿಸಿದ್ದೇವೆ. ಸೀತಾಳೆ ಹೂವಿನಿಂದ ಆನೆಯಂತಹ ವನ್ಯಜೀವಿಗಳನ್ನು ಉಳಿಸಲು ಹೋರಾಡುವ ಈ ವನ್ಯಜೀವಿ ಸಂರಕ್ಷಕರ ಬಗ್ಗೆ ಕೂಡ ನಿಗಾ ವಹಿಸುವುದು ಬಹು ಮುಖ್ಯ. ಇಲ್ಲವಾದಲ್ಲಿ ವನ್ಯಜೀವಿ ಸಂರಕ್ಷಣೆಗೆ ಕಟ್ಟಿರುವ ಬುನಾದಿ ಚೂರುಚೂರಾಗುವುದರಲ್ಲಿ ಅನುಮಾನವೇ ಇಲ್ಲ.
Hats off sir :) You told the story of Unsung heros of Forest Department
ReplyDeleteThis comment has been removed by the author.
ReplyDeleteThanks
ReplyDelete