ಕರ್ನಾಟಕದ ಪಶ್ಚಿಮ ಘಟ್ಟಗಳ ಕೆಲ
ಪ್ರದೇಶಗಳನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿರುವುದು ರಾಜ್ಯದಲ್ಲೀಗ ಚರ್ಚೆಗೆ ಬಹು
ದೊಡ್ಡ ವಿಷಯವಾಗಿದೆ. ರಾಜ್ಯದಲ್ಲಿ ಅಲ್ಲೋಲಕಲ್ಲೋಲದ ವಾತಾವರಣವಾಗಿರುವ ಹಾಗೆ ಮಾಧ್ಯಮಗಳಲ್ಲಿ ಈ
ವಿಚಾರವು ಪ್ರಚಾರ ಪಡೆಯುತ್ತಿದೆ. ಕರ್ನಾಟಕದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನ (ನ್ಯಾಶನಲ್
ಪಾರ್ಕ್), ಸೋಮೇಶ್ವರ, ಬ್ರಹ್ಮಗಿರಿ, ಪುಷ್ಪಗಿರಿ ಮತ್ತು ತಲಕಾವೇರಿ ಅಭಯಾರಣ್ಯಗಳು
(ವೈಲ್ಡ್‌ಲೈಫ್ ಸ್ಯಾಂಕ್ಚುರಿ), ಪದಿನಾಲ್ಕನಾಡ್, ಕೆರ್ಟಿ, ಬಾಳಹಳ್ಳಿ, ಸೋಮೇಶ್ವರ ಮತ್ತು ಆಗುಂಬೆ ಕಾಯ್ದಿಟ್ಟ ಅರಣ್ಯಗಳನ್ನು (ರಿಸರ್ವ್
ಫಾರೆಸ್ಟ್) ಇತ್ತೀಚೆಗೆ ವಿಶ್ವ ಸಂಸ್ಥೆಯ
ಶಿಕ್ಷಣ, ವಿಜ್ಞಾನ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ
(ಯುನೆಸ್ಕೋ) ವಿಶ್ವ ಪಾರಂಪರಿಕ ನೈಸರ್ಗಿಕ ತಾಣವೆಂದು ಗುರುತಿಸಲಾಗಿದೆ.
ವಿಪರ್ಯಾಸವೆಂದರೆ, ಇದರ ಪರವಿರುವವರು (ಇವರ ಸಂಖ್ಯೆ
ಬಹು ವಿರಳ) ಮತ್ತು ವಿರೋಧಿಸುತ್ತಿರುವವರಿಗಿಬ್ಬರಿಗೂ ಈ ವಿಚಾರವಾಗಿ ತಪ್ಪು ಗ್ರಹಿಕೆಗಳಿವೆ.
ಸಂರಕ್ಷಣಾ ಕಾನೂನುಗಳು
ಪಶ್ಚಿಮ ಘಟ್ಟಗಳನ್ನು ಪಾರಂಪರಿಕ ಪಟ್ಟಿಗೆ
ಸೇರಿಸಿದರೆ ಇಲ್ಲಿನ ಕಾಡುಗಳ ರಕ್ಷಣೆಯಾಗುತ್ತದೆಯೆಂದು ಹಲವರು ವಿಜೃಂಭಿಸಿದ್ದಾರೆ. ಕೆಲವು
ಅಭಿವೃದ್ಧಿ ಕಾರ್ಯಗಳಿಂದ ಪಶ್ಚಿಮ ಘಟ್ಟಗಳ ಕಾಡುಗಳ ನಾಶವನ್ನು ಈ ಪಟ್ಟಿ ತಡೆಯುತ್ತದೆಂದು
ನಂಬಿದ್ದಾರೆ. ವಿಪರ್ಯಾಸವೆಂದರೆ, ಪಶ್ಚಿಮ ಘಟ್ಟಗಳನ್ನು ಈ ಪಟ್ಟಿಗೆ
ಸೇರಿಸಿದೊಡನೆ ಯಾವುದೇ ಹೆಚ್ಚಿನ ರಕ್ಷಣೆಯಾಗುವುದಿಲ್ಲ. ಇದರಿಂದ ಯಾವುದೇ ಹೊಸ ಕಾನೂನು
ಕಟ್ಟಳೆಗಳು ಬರುವುದಕ್ಕೆ ಸಾಧ್ಯವೇ ಇಲ್ಲ, ಇದೊಂದು
ಮಾನ್ಯತೆಯಷ್ಟೇ.
ನಮ್ಮ ದೇಶದಲ್ಲಿ (ಅಥವಾ ಇನ್ನ್ಯಾವುದೇ
ದೇಶದಲ್ಲಾದರೂ) ಕಾನೂನು ಮಾಡುವ ಹಕ್ಕು ನಮ್ಮ ಚುನಾಯಿತ ಪ್ರತಿನಿಧಿಗಳಿಗೆ (ಎಂ.ಲ್.ಎ, ಎಂ.ಲ್.ಸಿ, ಎಂ.ಪಿ) ಮಾತ್ರ ಇರುವ ಅವಕಾಶ. ಅದು ವಿಧಾನಸಭೆ,
ವಿಧಾನ ಮಂಡಲ, ಲೋಕಸಭೆ ಮತ್ತು ರಾಜ್ಯ ಸಭೆಗಳಲ್ಲಿ ಚರ್ಚೆಗಳಾಗಿ, ವಿಧೇಯಕಗಳನ್ನು ಅಂಗೀಕರಿಸಿದಾಗ ಮಾತ್ರ ಹೊಸ ಕಾನೂನು ಮಾಡಲು ಸಾಧ್ಯವೇ ಹೊರತು
ಯಾವುದೇ ವಿದೇಶೀ ಸರ್ಕಾರವಾಗಲಿ, ವಿದೇಶೀ ಸಂಘಟನೆಗಳಾಗಲಿ ಅಥವಾ ಯುನೆಸ್ಕೋದಂತಹ
ಅಂತರಾಷ್ಟ್ರೀಯ ಸಂಸ್ಥೆಯಾಗಲಿ ಮಾಡಲು ಅವಕಾಶವೇ ಇಲ್ಲ. ನಮ್ಮದೊಂದು ಸ್ವತಂತ್ರ ಪ್ರಜಾಪ್ರಭುತ್ವ
ದೇಶ, ಯಾವುದೇ ದೇಶದ ವಸಾಹತು ಪ್ರದೇಶವಲ್ಲ. ಇಲ್ಲಿನ ಕಾನೂನು,
ನಿಯಮಗಳನ್ನು ರೂಪಿಸುವುದು ನಮ್ಮ ಜವಾಬ್ದಾರಿ ಮತ್ತು
ಹಕ್ಕು.
ನಮ್ಮ ಅರಣ್ಯ, ಪ್ರಕೃತಿ, ವನ್ಯಜೀವಿಗಳ ಸಂರಕ್ಷಣೆಯಾಗುತ್ತಿರುವುದು
ನಮ್ಮ ದೇಶದಲ್ಲಿರುವ ವನ್ಯಜೀವಿ ಸಂರಕ್ಷಣಾ ಕಾಯಿದೆ, ಅರಣ್ಯ ಸಂರಕ್ಷಣಾ ಕಾಯಿದೆ, ಪರಿಸರ ಸಂರಕ್ಷಣಾ
ಕಾಯಿದೆ, ಜೀವಿವೈವಿಧ್ಯ ಕಾಯಿದೆ ಮತ್ತು ರಾಜ್ಯದ,
ಕರ್ನಾಟಕ ಅರಣ್ಯ ಕಾಯಿದೆಗಳಿಂದ.. ಇವು ಪ್ರಪಂಚದಲ್ಲೇ
ನಿಸರ್ಗ ಸಂರಕ್ಷಣೆಗಿರುವ ಬಹು ಕಠಿಣವಾದ ಕಾಯಿದೆಗಳಲ್ಲಿ ಕೆಲವು. ಇವುಗಳನ್ನು ಸರಿಯಾಗಿ
ಪಾಲಿಸಿದರೆ ನಮ್ಮ ಜೈವಿಕ ಸಂಪತ್ತಿನ ಉತ್ತಮ ರಕ್ಷಣೆಯಾಗುತ್ತದೆಯೇ ಹೊರತು ಯಾವುದೇ ಪಟ್ಟಿ
ಹಚ್ಚಿದರೂ ಆಗುವುದಿಲ್ಲ.
ಈಗ ಪಟ್ಟಿಯಲ್ಲಿರುವ ಕಾಯ್ದಿಟ್ಟ ಅರಣ್ಯ
ಪ್ರದೇಶಗಳನ್ನು ಅಭಯಾರಣ್ಯಗಳನ್ನಾಗಿಯಾದರೂ ಘೋಷಿಸಿದರೆ ಅವಕ್ಕೆ ಹೆಚ್ಚು ರಕ್ಷಣೆಯೊದಗುತ್ತದೆ.
ಅವುಗಳನ್ನು ಅರಣ್ಯೇತರ ಚಟುವಟಿಕೆಗಳಿಗೆ (ಗಣಿಗಾರಿಕೆ, ಹೆದ್ದಾರಿ ಹಾಗೂ ಇನ್ನಿತರ ಬೃಹತ್ ಯೋಜನೆಗಳಿಗೆ) ವಿನಿಯೋಗಿಸುವುದಕ್ಕೆ ಹೆಚ್ಚಿನ
ನಿರ್ಬಂಧ ಬರುತ್ತದೆ.
ಆದರೆ ಇವುಗಳನ್ನು ವಿಶ್ವ ಪಾರಂಪರಿಕ
ಸ್ಥಳವೆಂದು ಘೋಷಿಸಿದೊಡನೆ ಯಾವುದೇ ಕಾನೂನು ತರಲು ಸಾಧ್ಯವಿಲ್ಲ. ನಾಲ್ಕಾರು ಫಲಕಗಳನ್ನು
ಹಾಕಬಹುದೇ ವಿನ: ಇದಕ್ಕಿಂತ ಹೆಚ್ಚೇನೂ ಮಾಡಲಾಗುವುದಿಲ್ಲ. ಬಹುಶ: ಕೇರಳ ರಾಜ್ಯ ತಮ್ಮ
ಕಿರುಹೊತ್ತಿಗೆಗಳಲ್ಲಿ, ಪ್ರಚಾರ ಸಮಾಗ್ರಿಗಳಲ್ಲಿ ವಿಶ್ವ ಪಾರಂಪರಿಕ
ಸ್ಥಳಗಳ ಚಿಹ್ನೆಯನ್ನು ರಾಜ್ಯದ ಪ್ರವಾಸೋದ್ಯಮದ ಸಂಭಾವ್ಯಗಳನ್ನು ಮಾರುಕಟ್ಟೆಯಲ್ಲಿ ಪ್ರಚಾರ
ಪಡಿಸಬಹುದಷ್ಟೇ. ಆದರೆ ಇನ್ನೊಂದು ದೃಷ್ಟಿಕೋನದಿಂದ ನೋಡಿದರೆ ತಾಜ್‌ಮಹಲು ವಿಶ್ವ ಪಾರಂಪರಿಕ ಪಟ್ಟಿಯಲ್ಲಿರದಿದ್ದರೂ
ಅಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೇನೂ ಕಡಿಮೆಯಾಗುವುದಿಲ್ಲ. ಹಾಗೆಯೇ ಪಶ್ಚಿಮ ಘಟ್ಟಗಳಿಗೆ
ಅನಿಯಂತ್ರಿತ ಪ್ರವಾಸೋದ್ಯಮದಿಂದ ಕೂಡ ಹಾನಿಕಾರಕ. ಅಲ್ಲೇನೋ ವೈಶಿಷ್ಟ್ಯವಿದೆಯೆಂದು ಪ್ರಚಾರ
ಪಡಿಸಿದರೆ ಸಾಕು, ಪ್ರವಾಸಿಗಳು ಟನ್‌ಗಟ್ಟಲೆ ಪ್ಲಾಸ್ಟಿಕ್ ತಂದು
ಸುರಿಯುತ್ತಾರೆ, ನೂರಾರು ರೆಸಾರ್ಟ್‌ಗಳು ಅರಣ್ಯ
ಪ್ರದೇಶದಲ್ಲೆಲ್ಲ ತಲೆಯೆತ್ತುತ್ತವೆ, ವನ್ಯಜೀವಿ ಪಡಸಾಲೆಗಳಲೆಲ್ಲ ಹೋಂ ಸ್ಟೇ,
ಪ್ರವಾಸೋದ್ಯಮದ ಹೆಸರಿನಲ್ಲಿ ಕಟ್ಟಡಗಳು,
ಹೆದ್ದಾರಿಗಳೆಲ್ಲ ಬಂದು ವನ್ಯಜೀವಿಗಳಿಗೆ ಮಾರಕವಾಗುತ್ತವೆ.
ಇಷ್ಟನ್ನು ಬಿಟ್ಟರೆ, ಪಾರಂಪರಿಕ ತಾಣಗಳಿಗೆ ಅತೀ ಹೆಚ್ಚಿನ ಅಪಾಯವಿದ್ದರೆ ಆ ತಾಣವನ್ನು ಪಟ್ಟಿಯಿಂದ
ತೆಗೆಯುತ್ತೇವೆಂದು ಹೇಳಬಹುದು. ೧೯೯೪ರಲ್ಲಿ ಒಮಾನ್ ದೇಶದ ಅರೇಬಿಯನ್ ಆರಿಕ್ಸ್ ಅಭಯಾರಣ್ಯವನ್ನು
ವಿಶ್ವ ಪಾರಂಪರಿಕ ಪಟ್ಟಿಯಿಂದ ತೆಗೆಯಲಾಯಿತು. ಅಭಯಾರಣ್ಯದ ಶೇಕಡ ೯೦ರಷ್ಟು ಪ್ರದೇಶವನ್ನು ಒಮಾನ್
ದೇಶ ಡಿನೋಟಿಫೈ ಮಾಡಿದ ಪರಿಣಾಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಯುನೆಸ್ಕೊದ ಈ
ನಿರ್ಧಾರದಿಂದ ಅಲ್ಲಿನ ಜೀವ ಸಂಕುಲಕ್ಕೆ ಒದಗಿದ ಅಪಾಯವೇನು ನಶಿಸಲಿಲ್ಲ.
ಪರಿಸ್ಥಿತಿ ಇನ್ನೂ ವಿಕೋಪಕ್ಕೆ ಹೋದರೆ
ಅಫಘಾನಿಸ್ತಾನದಲ್ಲಿ ಬಮಿಯಾನ್ ಬುದ್ಧನ ವಿಗ್ರಹಗಳನ್ನು ಉಗ್ರಗಾಮಿಗಳು ಹೊಡೆದುರುಳಿಸುತ್ತಿದ್ದಾಗ
ಯುನೆಸ್ಕೋ ಅವುಗಳನ್ನು ಹಾಳು ಮಾಡದ ಹಾಗೆ ಕೊಟ್ಟ ಕರೆಯ ಹಾಗೆ ಕರೆಮಾಡಬಹುದು. ಈಗ ಮಾಲಿ ದೇಶದಲ್ಲಿ
ಉಗ್ರಗಾಮಿಗಳು ಟಿಂಬ್ಕ್‌ಟುವಿನ ಪ್ರ್ರಾಚೀನ ಇಸ್ಲಾಮ್ ಮಸೀದಿಗಳನ್ನು ಹಾಳುಗೆಡವ ಹೊರಟಿರುವ
ಸ್ಥಳಗಳೂ ಕೂಡ ವಿಶ್ವ ಪಾರಂಪರಿಕ ಸ್ಥಾನದ ಪಟ್ಟಿಯಲ್ಲಿವೆ.
ನಮ್ಮ ದೇಶದ ಕಾಜಿರಂಗ, ಸುಂದರಬನ್ ರಾಷ್ಟ್ರೀಯ ಉದ್ಯಾನಗಳು, ಮುಂಬೈನ ಛತ್ರಪತಿ ಶಿವಾಜಿ ರೈಲು ನಿಲ್ದಾಣ (ಮುಂಚೆ ವಿಕ್ಟೋರಿಯ ಟರ್‌ಮಿನಸ್),
ದೆಹಲಿಯ ಕೆಂಪು ಕೋಟೆ, ಸಾಂಚಿ ಸ್ತೂಪಗಳು ಹೀಗೆ ಹಲವಾರು ಸ್ಥಳಗಳನ್ನು ವಿಶ್ವ ಪಾರಂಪರಿಕ ಸ್ಥಾನಕ್ಕೆ
ಸೇರಿಸಲಾಗಿದೆ.
ತುರ್ತು ಪರಿಸ್ಥಿತಿಗಳಲ್ಲಿ ಸ್ವಲ್ಪ ಸಹಾಯ
ಧನವನ್ನು ಕೊಡಬಹುದು, ಅದೂ ಕೂಡ ಸದಸ್ಯ ದೇಶಗಳ (ಭಾರತವನ್ನೂ ಸೇರಿ)
ದೇಣಿಗೆಯ ಮೇಲೆ ಅವಲಂಬಿತವಾಗಿದೆ. ಆ ಸಹಾಯಧನ ಸಹಾ, ನಮ್ಮ ಸರ್ಕಾರದವರು ಅರ್ಜಿ ಸಲ್ಲಿಸಿದರೆ, ಬಂದಿರುವ ಹಲವಾರು ದೇಶಗಳ ಅರ್ಜಿಗಳಲ್ಲಿ ಉತ್ತಮವಾದುದಕ್ಕೆ ಸಿಗಬಹುದು. ಅದರಲ್ಲಿ
ನಮ್ಮ ದೇಣಿಗೆಯೂ ಇರಬೇಕಾಗುತ್ತದೆ.
ವಿಶ್ವ ಪಾರಂಪರಿಕ ತಾಣದಿಂದಾಗುವ ಪರಿಣಾಮಗಳು
ಕೆಲವರು ಇದರ ರಾಜಕೀಯ ಲಾಭವನ್ನು ಪಡೆಯಲು ಕೂಡ
ಪ್ರಯತ್ನಿಸುತ್ತಿದ್ದಾರೆ. ಪಾರಂಪರಿಕ ಪಟ್ಟಿಯಲ್ಲಿರುವ ಪ್ರದೇಶದಿಂದ ಜನರನ್ನು ಪುನರ್ವಸತಿ
ಮಾಡಲಾಗುತ್ತದೆ, ಕೊಳವೆ ಬಾವಿ ತೋಡಲು ಕೂಡಾ ವಿದೇಶೀಯರ ಅನುಮತಿ
ಕೇಳಬೇಕಾಗುತ್ತದೆ, ಹೀಗೇ ಇನ್ನಿತರ ಹಲವು ಗಾಳಿಸುದ್ದಿಗಳನ್ನು
ಹಬ್ಬಿಸಲಾಗಿದೆ. ಏನೂ ತಿಳಿಯದ ಮುಗ್ಧ ಹಳ್ಳಿ ಜನರಿಗೆ ಹೀಗೆ ಹೇಳಿ ಅವರನ್ನು ಆತಂಕಕ್ಕೀಡು
ಮಾಡುವುದೆಷ್ಟು ಸಮಂಜಸ? ಇದರಿಂದ ರಾಜಕೀಯ ಲಾಭವಾಗುವುದಂತೂ ಖಂಡಿತ,
ಆದರೆ ತಿಳಿಯದ ಜನರಲ್ಲಿ ಗೊಂದಲವುಂಟು ಮಾಡುವುದರಿಂದ
ಲಾಭವಾಗುವುದಾದರೂ ಯಾರಿಗೆ?
ಬಹು ಆಶ್ಚರ್ಯಕರವಾದ ವಿಷಯವೆಂದರೆ, ನಮ್ಮ ರಾಜ್ಯದ ಅರಣ್ಯ ಭಾಗಗಳ ಬಗ್ಗೆ ವರದಿ ತಯಾರಿಸಲು ಯುನೆಸ್ಕೋದಿಂದ ಗುತ್ತಿಗೆ
ಪಡೆದು ವರದಿ ತಯಾರಿಸಿದ ಸಂಸ್ಥೆಯವರು ಈಗ ಇದರ ಬಗ್ಗೆ ಸಂಪೂರ್ಣ ನಿಶ್ಶಬ್ದವಾಗಿದ್ದಾರೆ. ಅವರಿಗೂ
ಇದಕ್ಕೂ ಸಂಬಂಧವಿಲ್ಲದ ಹಾಗೆ ಮೌನವಹಿಸಿದ್ದಾರೆ. ಅವರೊಬ್ಬರನ್ನು ಬಿಟ್ಟು ಇನ್ನುಳಿದವರೆಲ್ಲರೂ
(ರಾಜಕಾರಣಿಗಳು ಮತ್ತು ಪರಿಸರವಾದಿಗಳು) ಇದರ ಪರ, ವಿರೋಧದ
ಚರ್ಚೆಯಲ್ಲಿ ಭಾಗವಹಿಸಿದ್ದಾರೆ. ಇಷ್ಟೆಲ್ಲಾ ಚರ್ಚೆಗಳಾಗುತ್ತಿದ್ದರೂ ಸಾರ್ವಜನಿಕವಾಗಿ ಇದರ
ನಿಜಾಂಶವನ್ನು ತಿಳಿಹೇಳಲು ಮುಂದೆ ಬರದೆ ಜನರಲ್ಲಿ ಹೆಚ್ಚು ಗೊಂದಲ ಸೃಷ್ಟಿಯಾಗುತ್ತಿದ್ದರೂ,
ನೀರವತೆ ವಹಿಸಿರುವುದರಿಂದ ನಿಸರ್ಗ ಸಂರಕ್ಷಣೆಯಲ್ಲಿ
ತೊಡಗಿಸಿಕೊಂಡವರನ್ನೆಲ್ಲ ಜನ ಅನುಮಾನದ ದೃಷ್ಟಿಯಿಂದ ನೋಡುವ ಹಾಗಾಗಿದೆ.
ಬಹುಶ: ಯುನೆಸ್ಕೋ ಸಂಸ್ಥೆಯ ವೆಬ್‌ಸೈಟು
ನೋಡಿದರೆ (http://www.unesco.org/new/en/) ನಮ್ಮಲ್ಲಿನ ಹಲವು ಅನುಮಾನಗಳಿಗೆ ಉತ್ತರ
ಸಿಗಬಹುದು. ಅಂತರ್ಜಾಲದ ಲಭ್ಯವಿಲ್ಲದವರಿಗೆ ಸ್ಥಳೀಯ ಸರ್ಕಾರಿ ಅಧಿಕಾರಿಗಳು, ಸಂಘ-ಸಂಸ್ಥೆಯವರು ಅದರ ನಕಲನ್ನು ಕನ್ನಡದಲ್ಲಿ ಭಾಷಾಂತರಿಸಿ ಸ್ಥಳೀಯರಿಗೆ
ತಲುಪಿಸಿ ಪ್ರಚಾರ ನೀಡಿದರೆ ಪರಿಸ್ಥಿತಿ ಸ್ವಲ್ಪವಾದರೂ ತಿಳಿಯಾಗಬಹುದು.
ದಿನ ನಿತ್ಯ ಜನನಾಯಕರು, ಅಧಿಕಾರಿಗಳೊಡನೆ ವನ್ಯಜೀವಿ, ನಿಸರ್ಗ
ಸಂರಕ್ಷಣೆಗೆ ಕೆಲಸ ಮಾಡುವವರಿಗೆ ಇದು ದೊಡ್ಡ ತೊಂದರೆಯನ್ನೊಡ್ಡಿದೆ. ನೈಜವಾಗಿ ನಿಸರ್ಗ
ಸಂರಕ್ಷಣೆಯಾಗುವ ಕಾರ್ಯಕ್ಕೆ ಇದರಿಂದ ಹಿನ್ನಡೆಯಾಗಿದೆ. ಯಾವುದೇ ಅಧಿಕಾರಿ, ರಾಜಕೀಯ ನಾಯಕರ ಬಳಿ ವನ್ಯಜೀವಿ ಸಂರಕ್ಷಣೆಯ ವಿಚಾರ ಚರ್ಚಿಸುವುದು ಬಹು
ದಿನಗಳವರೆಗೆ ಇನ್ನು ಕಷ್ಟದ ಕೆಲಸ.
ಆದ್ದರಿಂದ ಪಶ್ಚಿಮ ಘಟ್ಟಗಳನ್ನು ವಿಶ್ವ
ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿದರೆ ಹೇಗೆ ಲಾಭವಿಲ್ಲವೋ, ಹಾಗೇ ಅದನ್ನು ಸೇರಿಸದಿದ್ದರೆ ನಷ್ಟವೂ ಇಲ್ಲ. ಇದರಿಂದ ನಿಸರ್ಗ ಸಂರಕ್ಷಣೆಗೆ
ಲಾಭವಿಲ್ಲದ ಮೇಲೆ ಇಷ್ಟು ಜನ, ಜನನಾಯಕರ ವಿರೋಧವೇಕೆ ಬೇಕು? ಮೊದಲೇ ವನ್ಯಜೀವಿ ಸಂರಕ್ಷಣೆಯ ಬೆಂಬಲಕ್ಕೆ ಬರುವವರೇ ಇಲ್ಲ, ಈ ಪರಿಸ್ಥಿಯಲ್ಲಿ ಈ ವಿವಾದ, ವಿರೋಧ ಬೇಕಿತ್ತೇ?
ನಿಜವಾಗಿಯೂ ಇದರಿಂದ ಉಪಯೋಗವಿದ್ದಿದ್ದರೆ
ಹೋರಾಡುವುದರಲ್ಲಿ ಅರ್ಥವಿತ್ತು, ಆದರೆ ನೈಜವಾಗಿ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ
ಉಪಯೋಗವಾಗುವ ವಿಚಾರಗಳನ್ನು ಬಿಟ್ಟು, ಅದರಿಂದ ನೇರ ಅಥವಾ ಪರೋಕ್ಷವಾಗಿ
ಉಪಯೋಗವಿಲ್ಲದ ವಿಚಾರಗಳಿಗೆ ಸಮಯ ಹಾಕುವುದರಲ್ಲಿ ಲಾಭವಿದೆಯೇ? ಇರುವ ನಮ್ಮ ಕಾನೂನುಗಳ ಬಗ್ಗೆಯೇ ಸ್ಥಳೀಯರಲ್ಲಿರುವ ಗೊಂದಲಗಳು ಸಾಲದೆಂದು
ಇನ್ನೊಂದು ಅಸ್ತವ್ಯಸ್ತತೆ.
ಇದರಿಂದ ಬಹುಶ: ವನ್ಯಜೀವಿ ಸಂರಕ್ಷಣೆ,
ನಿಸರ್ಗ ಸಂರಕ್ಷಣೆಗೆ ಇನ್ನೂ ಹೆಚ್ಚಿನ ವಿರೋಧ,
ಪ್ರತಿಬಂಧಕಗಳು ವ್ಯಕ್ತವಾಗುವುದು ಮುಂದಿನ ದಿನಗಳಲ್ಲಿ
ನಾವು ಎದುರು ನೋಡಬಹುದಾದ ಪರಿಸ್ಥಿತಿ. ನಮ್ಮ ಕಾನೂನನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ನಮ್ಮ
ಚೈತನ್ಯವನ್ನು ಕಾರ್ಯಕಾರಿಯಾಗಿಸ ಬೇಕಾಗಿದೆ. ದುರಾದೃಷ್ಟವಶಾತ್ ಅಂತಹಾ ಸಂದರ್ಭಗಳಲ್ಲಿ ನಮ್ಮ
ವನ್ಯಜೀವಿ, ನಿಸರ್ಗ ಸಂರಕ್ಷಣೆಯ ವೈಜ್ಞಾನಿಕ ಸಮುದಾಯ ಅದು
ನಮ್ಮದಲ್ಲದ ಕೆಲಸವೆಂದು ಮೌನ ವಹಿಸುತ್ತದೆ.
ವಿಶ್ವ ಪಾರಂಪರಿಕ ತಾಣದ ಪಟ್ಟಿಯಲ್ಲಿ ಪಶ್ಚಿಮ
ಘಟ್ಟಗಳು ಸೇರ್ಪಡೆಯಾದರೆ ಹೆಮ್ಮೆಯ ವಿಷಯವೇ, ಅದು
ಒಳಗೊಂಡಿಲ್ಲವಾದರೆ ಬಹುಶಃ ಹೆಚ್ಚಿನ ನಷ್ಟವೇನೂ ಇಲ್ಲ. ಇದೇನು ವನ್ಯಜೀವಿ ಸಂರಕ್ಷಣೆಯಲ್ಲಿ
ತೊಡಗಿಸಿಕೊಂಡವರೇ ಹೀಗೆ ಹೇಳುತ್ತಿರುವರೆಂದು ಹಲವರು ಹೀಯಾಳಿಸಬಹುದು. ಆದರೆ ರಾಜಕೀಯ ನಾಯಕರು,
ಜನಪ್ರತಿನಿಧಿಗಳು, ಅಧಿಕಾರಿಗಳೊಡನೆ ನಿಸರ್ಗ ಸಂರಕ್ಷಣೆಗೆ ಒಲಿಸಿಕೊಂಡು ಕೆಲಸ ಮಾಡಿದರೆ ಕಾರ್ಯ ಬಹು
ಹಗುರ. ದಿಟವಾಗಿ, ವಾಸ್ತವದಲ್ಲಿ ಗಣನೀಯ ಬದಲಾವಣೆಗಳು ಬರುವ ಹಾಗಿದ್ದರೆ,
ನಮ್ಮ ಪಶ್ಚಿಮ ಘಟ್ಟಗಳಿಗೆ ಮಾರಕವಾಗಿರುವ ಅಪಾಯಗಳನ್ನು
ತಡೆಯುವ ಶಕ್ತಿ ಈ ಪಟ್ಟಿಗಿದ್ದಿದ್ದರೆ, ಖಂಡಿತಾ ಇದರ ಅನುಷ್ಠಾನಕ್ಕೆ ಎಲ್ಲರ ವಿರೋಧ
ಕಟ್ಟಿಕೊಂಡು ಹೋರಾಡುವುದರಲ್ಲಿ ಅರ್ಥವಿರುತ್ತಿತ್ತು.