Thursday, July 14, 2011

ಕರ್ನಾಟಕದ ವನ್ಯಜೀವಿ ಸಂಪತ್ತು

ವನ್ಯಜೀವಿ ಸಂರಕ್ಷಣೆಯೆಂಬುದು ಆಧುನಿಕ ಯುಗದಲ್ಲಿ ವಿದೇಶದಿಂದ ಅಮದಾದ ಯೋಜನೆಯೆಂಬ ಅಭಿಪ್ರಾವಿದೆ. ಆದರೆ ಭಾರತದಲ್ಲಿ ಇದರ ಇತಿಹಾಸ ಕ್ರಿ.ಪೂ ಮೂರನೇ ಶತಮಾನದಷ್ಟು ಹಿಂದಿನದು. ಸಾಮ್ರಾಟ ಅಶೋಕ ಆನೆಗಳನ್ನು ಸಂರಕ್ಷಿಸಲು ವಿಷೇಶವಾದ ಕಾನೂನುಗಳನ್ನು ತಂದಿದ್ದರು. ಕರ್ನಾಟಕದ ಸಂಸೃತಿ, ಧರ್ಮಗಳಲ್ಲಿ ವನ್ಯಜೀವಿ ಸಂರಕ್ಷಣೆಗೆ ಬಹು ಪ್ರಾಚೀನವಾದ ಇತಿಹಾಸವಿದೆ. ಇಂದಿಗೂ ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಹುಲಿದೇವರ ದೇವಸ್ಥಾನಗಳಿವೆ. ನಮ್ಮ ರಾಜ್ಯದಲ್ಲಿ ಪ್ರಚಲಿತವಾಗಿರುವ ಹುಲಿವೇಷವಂತೂ ಮನೆಮಾತು. ಮಲೆಮಹದೇಶ್ವರನಿಗೆ ಹುಲಿಯೇ ವಾಹನ. ಪ್ರಾಚೀನ ಜೈನ ಕವಿಗಳ ಕೃತಿಗಳಲ್ಲಿ ವನ್ಯಜೀವಿ ಹತ್ಯೆಯನ್ನು ತಡೆಗಟ್ಟುವ ಜೈನಮುನಿಗಳ ಭೋಧನೆಗಳಿವೆ. ಈ ಉಪದೇಶಗಳಿಗೆ ಧರ್ಮ ಭೋಧನೆ, ಅಹಿಂಸಾ ಪ್ರತಿಪಾದನೆಯ ದೃಷ್ಠಿಯಿತ್ತಾದಾರೂ ಅದು ಪ್ರಾಚೀನ ವನ್ಯಜೀವಿ ಸಂರಕ್ಷಣಾ ಪ್ರತಿಪಾದನೆಯೆಂದು ಹೇಳಬಹುದಾಗಿದೆ. ಇಂದಿಗೂ ಕೆಲವು ಜೈನ ಬಸದಿಗಳಲ್ಲಿ ಬೇಟೆಗಾರರಿಗೆ ಅಹಿಂಸಾಭೋದನೆಯನ್ನು ಮಾಡುತ್ತಿರುವ ಚಿತ್ರಗಳನ್ನು ಕಾಣಬಹುದಾಗಿದೆ.

ಈಚಿನ ದಿನಗಳಲ್ಲಿ ದೂರದರ್ಶನದ ಕೆಲವು ಚಾನಲ್‌ಗಳಿಂದಾಗಿ ವನ್ಯಜೀವಿಗಳ ಬಗ್ಗೆ ಸ್ವಲ್ಪ ಅರಿವು ಹೆಚ್ಚಾಗಿದೆ. ಆದರೆ ನಮ್ಮ ಹಿತ್ತಲಿನಲ್ಲಿರುವ ಕಾಡು, ವನ್ಯಜೀವಿಗಳ ಅರಿವು ಸ್ವಲ್ಪ ಕಡಿಮೆಯೇ ಹಾಗೂ ಅವುಗಳ ಸಂರಕ್ಷಣೆಗೆ ನಮ್ಮ ಪ್ರಯತ್ನ ಹೆಚ್ಚಾಗಬೇಕಾಗಿದೆ.

ವನ್ಯಜೀವಿಗಳು ಹಾಗೂ ಅವುಗಳ ಸಂರಕ್ಷಣೆಯೆಂದರೇನು?
ಇದೊಂದು ಬಹು ಸಾಮಾನ್ಯ ಪ್ರಶ್ನೆಯೆನಿಸಿದರೂ ನನ್ನ ಈ ಲೇಖನಕ್ಕೆ ಮೂಲಭೂತವೆಂದು ತಿಳಿದಿದ್ದೇನೆ. ಪರಿಸರ ಸಂರಕ್ಷಣೆ, ಪ್ರಾಣಿದಯೆ, ಸಾಮಾಜಿಕ ಸಮಸ್ಯೆಗಳು ಅಥವಾ ಕ್ರಿಯಾವಾದಕ್ಕಿಂತ ಇದು ಬಹು ಭಿನ್ನವಾದುದು. ಅದಕ್ಕಿಂತ ಮುಖ್ಯವಾಗಿ ಇತ್ತೀಚಿಗೆ ಹೆಚ್ಚಾಗಿ ಬಳಕೆಯಲ್ಲಿರುವ ಜೀವಿವೈವಿಧ್ಯತೆಯ ಸಂರಕ್ಷಣೆಗೂ ಹಾಗೂ ವನ್ಯಜೀವಿ ಸಂರಕ್ಷಣೆಗಿರುವ ಭಿನ್ನತೆ ಅರ್ಥೈಸಿಕೊಳ್ಳುವುದು ಬಹು ಮುಖ್ಯ.

ಪರಿಸರ ಸಂರಕ್ಷಣೆ ಹೆಚ್ಚು ಮಾನವ ಕೇಂದ್ರಿತವಾಗಿದ್ದು ಮಾನವನ ಜೀವನವನ್ನು ಉತ್ತಮಗೊಳಿಸುವುದು ಇದರಲ್ಲಿ ಮುಖ್ಯ ಧ್ಯೇಯವಾಗಿರುತ್ತದೆ. ಪ್ಲಾಸ್ಟಕ್ ನಿರ್ಮೂಲನೆ, ಪರಿಸರ ಮಾಲಿನ್ಯ, ಅಣು ವಿದ್ಯುತ್ ಸ್ಥಾವರಗಳಿಂದ ನಮ್ಮ ಮೇಲಾಗುವ ಪರಿಣಾಮ ಇನ್ನಿತರ ವಿಚಾರಗಳು ಪರಿಸರವಾದದ ಲಕ್ಷ್ಯವಾಗಿರುತ್ತದೆ. ಪ್ರಾಣಿದಯಾ ಚಟುವಟಿಕೆಗಳಲ್ಲಿ ಪ್ರಪಂಚದಲ್ಲಿರುವ ಎಲ್ಲಾ ಜೀವಿ ಜಂತುಗಳಿಗೂ ಒಂದೇ ಬೆಲೆ ಕಟ್ಟಲಾಗುತ್ತದೆ. ನಗರ ಪ್ರದೇಶಗಳಲ್ಲಿರುವ ಮಿಲಿಯಾಂತರ ಬೀದಿ ನಾಯಿಗಳು ಹಾಗೂ ನಶಿಸಿ ಹೋಗುವ ಹಂತದಲ್ಲಿರುವ ಕೇವಲ ಕೆಲವು ಸಾವಿರದಷ್ಟಿರುವ ಹುಲಿಯೋ ಅಥವಾ ಸಿಂಗಳಿಕ ಕೋತಿಗಳನ್ನು ಒಂದೇ ತಕ್ಕಡಿಯಲ್ಲಿ ತೂಗಲಾಗುತ್ತದೆ. ಪ್ರಾಣಿದಯಾ ಚಟುವಟಿಕೆಗಳಲ್ಲಿ ಒಂದೇ ಒಂದು ಕೋತಿಯನ್ನೂ ಅಥವಾ ಸರ್ಕಸ್ಸಿನಲ್ಲಿ ಹಿಂಸೆಗೊಳಪಡುವ ಯಾವುದೋ ಒಂದು ಪ್ರಾಣಿಯನ್ನು ರಕ್ಷಿಸುವುದು ಸಹ ಮುಖ್ಯವಾಗುತ್ತದೆ.

ಹಾಗೆಯೇ ಇತ್ತೀಚಿಗೆ ಅತೀ ಹೆಚ್ಚು ಬಳಕೆಯಲ್ಲಿರುವ ಜೀವಿವೈವಿಧ್ಯತೆ (ಬಯೋಡೈವರ್ಸಿಟಿ) ಸಂರಕ್ಷಣೆಯ ಮೂಲ ಉದ್ದೇಶ ಏಲ್ಲಾ ಬಗೆಯ ಜೀವಿರಾಶಿಗಳನ್ನು ಉಳಿಸುವುದು (ಕೃಷಿತಳಿಗಳು, ಸ್ಥಳೀಯ ಜಾನುವಾರು ತಳಿಗಳು ಸೇರಿ). ಆದರೆ ಪ್ರಪಂಚದಲ್ಲಿ ಕೆಲವು ಜೀವಿಗಳು ಮನುಷ್ಯನೊಡನೆ ಯಶಸ್ವಿಯಾಗಿ ಸಹಬಾಳ್ವೆ ನಡೆಸುತ್ತವೆ. ಕೆಲವು ಜಾತಿಯ ಗಿಳಿಗಳು, ಕೋತಿ, ಕಾಗೆ, ಗೊರವಂಕ, ಕೇರೆ ಹಾವು ಇದಕ್ಕೆ ಕೆಲವು ಉದಾಹರಣೆಗಳು. ಆದರೆ ಹುಲಿ, ಆನೆ, ಸಿಂಗಳಿಕ, ಕಾಟಿ (ಕಾಡುಕೋಣ), ಮಂಗಟ್ಟೆ ಪಕ್ಷಿ, ಕಾಳಿಂಗ ಸರ್ಪ ಹಾರುವ ಓತಿಯಂತಹ ಕೆಲವು ವನ್ಯಜೀವಿಗಳು ನಿರ್ದಿಷ್ಟವಾದ ಆವಾಸಸ್ಥಾನ ಮತ್ತು ಆಹಾರ ಪದ್ಧತಿಗಳ ಮೇಲೆ ಅವಲಂಬಿತವಾಗಿವೆ. ಈ ಆವಾಸಸ್ಥಾನಗಳಾಚೆ ಅವುಗಳ ಉಳಿವು ಅಸಾಧ್ಯ.

ಹಾಗೆಯೇ ಅವುಗಳಲ್ಲಿ ಒಂದು ವೈಯಕ್ತಿಕ ಪ್ರಾಣಿಯನ್ನು ಉಳಿಸುವುದಕ್ಕಿಂತ ಅವುಗಳ ಸಮೂಹಗಳನ್ನು ರಕ್ಷಿಸುವ ಗುರಿಯಿರುತ್ತದೆ. ಆದ್ದರಿಂದ ನನ್ನ ಲೇಖನದ ಮೂಲ ಉದ್ದೇಶ ಈ ವನ್ಯಜೀವಿಗಳ ವಿಚಾರ ಮತ್ತು ಅವುಗಳ ಸಂರಕ್ಷಣೆಯ ವಿಶ್ಲೇಷಣೆ. ಈ ಜೀವಿಗಳ ಸಂರಕ್ಷಣೆಯಿಂದ ಮಾನವನಿಗೆ ಪರೋಕ್ಷವಾಗಿ ಒಳಿತಾದರೂ ಇದರ ಮುಖ್ಯ ಧ್ಯೇಯ ಈ ನಶಿಸುವ ಹಂತದಲ್ಲಿರುವ ಪ್ರಾಣಿಗಳನ್ನು ಅವುಗಳ ನೈಸರ್ಗಿಕ ಆವಾಸಗಳಲ್ಲಿ ಸಂರಕ್ಷಿಸುವುದು.

ನಮಗೇಕೆ ವನ್ಯಜೀವಿಗಳು?
ನಮ್ಮ ದೇಶದಲ್ಲಿನ ೭೫ರಷ್ಟು ಜನರು ಬಡತನದ ರೇಖೆಯ ಕೆಳಗಿದ್ದು ಅವರಿಗಿರುವ ತೊಂದರೆಗಳನ್ನು ನಿವಾರಿಸುವ ಬದಲು ಐಶ್ವರ್ಯವಂತರ ಹವ್ಯಾಸವೆನಿಸಿರುವ ವನ್ಯಜೀವಿ ಸಂರಕ್ಷಣೆಯತ್ತ ನಾವು ಗಮನ ಕೊಡಬೇಕೆ? ನಮ್ಮ ನೈಸರ್ಗಿಕ ಸಂಪತ್ತನ್ನು ಉಪಯೋಗಿಸಿ ಅಭಿವೃದ್ಧಿ ಯೋಜನೆಗಳನ್ನು ಅಳವಡಿಸಿಕೊಂಡು ನಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡಬೇಕಾಗಿದೆಯೆಲ್ಲವೇ? ನಮಗಿರುವ ಎಲ್ಲಾ ಆರ್ಥಿಕ, ಸಾಮಾಜಿಕ ತೊಂದರೆಗಳ ನಡುವೆ ನಾವು ಹುಲಿ, ಆನೆಗಳನ್ನೇಕೆ ಉಳಿಸಬೇಕು ಅಥವಾ ಉಳಿಸುವುದು ಮುಖ್ಯವೇ? ಈ ಮೂಲಭೂತವಾದ ಪ್ರಶ್ನೆಗಳಿಗೆ ಬಹಳಷ್ಟು ತಾರ್ಕಿಕ ಉತ್ತರಗಳಿವೆ.

ಮೊದಲಾಗಿ ಹುಲಿ, ಆನೆ ಹಾಗೂ ಅರಣ್ಯಗಳ ಸಂರಕ್ಷಣೆಯನ್ನು ನಾವು ಆರ್ಥಿಕ ದೃಷ್ಟಿಯಿಂದ ನೋಡಲಾಗುವುದಿಲ್ಲ, ಅದರಿಂದ ಸಮಾಜಕ್ಕಾಗುವ ಲಾಭಗಳು ಅನೇಕ. ನಾವು ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಅಥವಾ ಆರೋಗ್ಯ ಸೌಲಭ್ಯ ಕೊಡುವುದರಿಂದ ಅವರು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ, ದೇಶದ ಪ್ರಗತಿಯಾಗುತ್ತದೆ. ನಾವದನ್ನು ಕೇವಲ ಲಾಭದ ಕೋನದಿಂದ ನೋಡುವುದಿಲ್ಲ, ಹಾಗೆಯೇ ವನ್ಯಜೀವಿ ಸಂರಕ್ಷಣೆ ಕೂಡ. ಸಮಾಜಕ್ಕೆ ಇದರಿಂದ ಹಲವಾರು ಪರೋಕ್ಷ ಪ್ರಯೋಜನಗಳಿವೆ.

ಹೊರನೋಟಕ್ಕೆ ಅರಣ್ಯದಲ್ಲಿರುವ ಆನೆ, ಹುಲಿಗಳ ಸಂರಕ್ಷಣೆಯಂತೆ ಕಾಣುವ ವಿಚಾರ ನಮ್ಮ ನದಿಮೂಲಗಳ ಮತ್ತು ಜಲಾನಯನ ಪ್ರದೇಶಗಳ ರಕ್ಷಣೆ ಕೂಡ. ಕರ್ನಾಟಕದ ಪ್ರಮುಖ ನದಿ, ಉಪನದಿಗಳ ಉಗಮ ಸ್ಥಾನದ ಭೂಪಟ ತೆಗೆದರೆ ನಮ್ಮ ಕಾಡುಗಳನ್ನು ಸಂರಕ್ಷಿಸುವ ಅಗತ್ಯದ ಅರಿವಾಗುತ್ತದೆ. ನಮ್ಮ ಬಹಳಷ್ಟು ನದಿಗಳು ರಾಜ್ಯದ ಕೆಲವು ಅನಾಮಿಕ ಕಾಡುಗಳಿಂದ ಹುಟ್ಟುತ್ತವೆ. ಒಮ್ಮೆ ಕಾಡುಗಳು ನಾಶವಾದರೆ ಅದರೊಡನೆ ನಮ್ಮ ನದಿಮೂಲಗಳು ಎಂದೆಂದಿಗೂ ಅಳಿದಂತೆಯೇ. ಯಾವ ವೈeನಿಕ eನ, ಆರ್ಥಿಕ ಬಲ, ಅರಣ್ಯಾಭಿವೃದ್ಧಿಗಳೂ ನಮ್ಮ ನದಿಗಳನ್ನು ಮರಳಿ ತರಲಾರವು.

ಈ ರಕ್ಷಿತಾರಣ್ಯಗಳು ಔಷಧಿ ಸಸ್ಯಗಳ ಆಗರ. ಬೆಂಗಳೂರನ್ನು ನಾವು ಬಿ.ಟಿ. ರಾಜಧಾನಿ ಎಂದು ಕರೆದರೆ ಸಾಲದು. ಆ ಉದ್ಯಮಕ್ಕೆ ಬೇಕಾಗುವ ಆನುವಂಶಿಕ ಸಂಪನ್ಮೂಲಗಳಿರುವ ನಮ್ಮ ಅರಣ್ಯಗಳನ್ನು ರಕ್ಷಿಸಬೇಕು. ಇನ್ಯಾವ ರೋಗಗಳಿಗೆ ಈ ಕಾಡುಗಳಲ್ಲಿ ಔಷಧಿಗಳಿವೆ ಎಂಬುದು ತಿಳಿಯುವ ಮೊದಲೇ ಇವನ್ನು ಕಳೆದುಕೊಳ್ಳುವುದು ಮಾನವನಿಗಾಗುವ ನಷ್ಟ.

ರಾಜ್ಯದ ಪಶ್ಚಿಮ ಘಟ್ಟಗಳಲ್ಲಿ ಪ್ರತಿವರ್ಷ ವಿಜ್ಞಾನಕ್ಕೆ ಇದುವರೆಗೆ ತಿಳಿಯದ ಅನೇಕ ಜಾತಿಯ ಕಪ್ಪೆ, ಮೀನುಗಳನ್ನು ಕಂಡು ಹಿಡಿಯಲಾಗುತ್ತಿದೆ. ಇಲ್ಲಿ ೨೦೦೭ರ ನಂತರ ಎಂಟು ಹೊಸ ಜಾತಿಯ ಮೀನುಗಳನ್ನು ಮತ್ತು ಐದು ಜಾತಿಯ ಕಪ್ಪೆಗಳನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ನಮ್ಮ ಕಾಡುಗಳಲ್ಲೇನಿದೆಯೆಂದು ತಿಳಿದುಕೊಳ್ಳುವ ಮೊದಲೇ ನಾವದನ್ನು ಕಳೆದುಕೊಳ್ಳುವುದು ಜಾಣತನವಲ್ಲ.

ಪ್ರವಾಹ ಹಾಗೂ ಮಣ್ಣಿನ ಸವಕಳಿಯ ತಡೆ, ಹವಾಮಾನದ ನಿರ್ವಹಣೆ ಇನ್ನಿತರ ಪರಿಸರ ವ್ಯವಸ್ಥೆಯ ಸೇವೆಗಳು (ಇಕೋಸಿಸ್ಟಮ್ ಸರ್ವಿಸಸ್) ನಮ್ಮ ವನ್ಯಜೀವಿ ನೆಲೆಗಳ ಕೊಡುಗೆ. ಪ್ರಖ್ಯಾತ ಜೀವಿಪರಿಸ್ಥಿತಿ ಆರ್ಥಿಕ ತಜ್ಞ (ಇಕಾಲಾಜಿಕಲ್ ಇಕಾನಾಮಿಸ್ಟ್) ರಾಬರ್ಟ್ ಕಾಸ್ಟನ್ಸ ಅಂದಾಜಿಸುವಂತೆ ಪ್ರಪಂಚದಾದ್ಯಂತ ಕಾಡುಗಳು ನಮಗೆ ಕೊಡುವ ಪರಿಸರ ವ್ಯವಸ್ಥೆ ಸೇವೆಗಳ ವಾರ್ಷಿಕ ಮೌಲ್ಯ ೩೩ ಸಹಸ್ರ ಕೋಟಿ (ಟ್ರಿಲಿಯನ್) ಡಾಲರ್‌ಗಳು. ಕೊಡಗಿನ ಕಾಫಿ ತೋಟಗಳಲ್ಲಿ ಕಾಡುಜೇನು ನೊಣಗಳೇ ಉತ್ತಮ ಪರಾಗಸ್ಪರ್ಶಕ್ಕೆ ಕಾರಣ. ಈ ಜಟಿಲ ಪರಿಸರ ವ್ಯವಸ್ಥೆಯೆಲ್ಲವು ನಡೆಯುವುದು ವನ್ಯಜೀವಿಗಳ ಆವಾಸ ಸ್ಥಾನದ ರಕ್ಷಣೆಯಿಂದ. ಈ ಪರಿಸರ ವ್ಯವಸ್ಥೆಯ ಸೇವೆಗಳಲ್ಲದೆ ಪ್ರವಾಸೋದ್ಯಮ, ಆಧ್ಯಾತ್ಮಿಕ ಹಾಗೂ ಇನ್ನಿತರ ಹಲವಾರು ಪ್ರಯೋಜನಗಳು ವನ್ಯಜೀವಿ ಸಂರಕ್ಷಣೆಯಿಂದ ನಮಗಾಗುತ್ತಿವೆ.

ನಿಸರ್ಗದಲ್ಲಿ ನಮಗೆ ತಿಳಿಯದಿರುವ ಆದರೆ, ಮುಂದಿನ ದಿನಗಳಲ್ಲಿ ಉಪಯೋಗವಾಗುವ ಹಲವಾರು ವಿನ್ಯಾಸಗಳಿವೆ. ನಿಸರ್ಗದಿಂದ ಪ್ರೇರಿತವಾಗಿ ನಮಗೆ ಉಪಯೋಗವಾಗುವ ವಸ್ತುಗಳನ್ನು ತಯಾರಿಸುವುದಕ್ಕೆ ಬಯೋಮಿಮಿಕ್ರಿ ಎಂದು ಕರೆಯುತ್ತಾರೆ. ನಮ್ಮ ದಿನೋಪಯೋಗಿ ವಸ್ತುಗಳಲ್ಲಿ ಹಲವಾರು ನಿಸರ್ಗದಿಂದಲೇ ಅನ್ವೇಷಣೆಯಾಗಿರುವುದು. ಇಂದು ಬಹು ಪ್ರಖ್ಯಾತವಾಗಿರುವ ವೆಲ್‌ಕ್ರೋ ಎಂದು ಕರೆಯಲ್ಪಡುವ ಪಟ್ಟಿಯಾಕಾರದ ಬಂಧನಿಗಳನ್ನು ಕಂಡುಹಿಡಿದದ್ದು ಸ್ವಿಟ್ಜರ್‌ಲ್ಯಾಂಡಿನ ಕಾಡುಗಳಲ್ಲಿ ಸಿಗುವ ಬರ್ಡಾಕ್ ಎಂಬ ಮುಳ್ಳಿನ ಗಿಡದಿಂದ.

ಇದೆಲ್ಲಕ್ಕಿಂತ ಮುಖ್ಯವಾಗಿ ಈ ಉತ್ಕೃಷ್ಟ ಜೀವಿಗಳನ್ನುಳಿಸಲು ನೈತಿಕ, ಐತಿಹಾಸಿಕ ಹಾಗೂ ಭಾವುಕ ಕಾರಣಗಳಿವೆ. ವನ್ಯಜೀವಿಗಳು ಈ ಭೂಮಿಗೆ ಮಾನವನಿಗಿಂತ ಬಹು ಮೊದಲೇ ಬಂದ ಜೀವಿಗಳು, ಇವುಗಳಿಗೂ ಕೂಡ ಭುವಿಯ ಮೇಲೆ ನಮ್ಮಷ್ಟೆ ಹಕ್ಕಿದೆಯೆಂಬುದು ನನ್ನ ಪ್ರತಿಪಾದನೆ. ಮಾನವ ಈ ಭೂಮಿಯಲ್ಲಿ ವಿಕಸನಗೊಂಡು ಕೇವಲ ಸುಮಾರು ೨೦೦,೦೦೦ ವರ್ಷಗಳಾಗಿರಬಹುದು, ಆದರೆ ಹುಲಿಗಳು ಎರಡು ಮಿಲಿಯನ್ ವರ್ಷಗಳ ಹಿಂದೆಯೇ ಏಷ್ಯಾ ಖಂಡದ ಕಾಡುಗಳಲ್ಲಿ ತಿರುಗುತ್ತಿದ್ದವು, ಆಗ ನಾವಿನ್ನೂ ಆಫ್ರಿಕಾದ ಕಾಡುಗಳಲ್ಲಿ ಮರದ ಮೇಲಿದ್ದೆವು.

ಕರ್ನಾಟಕದಲ್ಲಿನ ವನ್ಯಜೀವಿಗಳು
ಕರ್ನಾಟಕ ಐ.ಟಿ, ಬಿ.ಟಿಯ ಹಾಗೆ ವನ್ಯಜೀವಿ ಸಂಪತ್ತಿಗೆ ಹೆಸರುವಾಸಿಯಾದ ರಾಜ್ಯ. ಐದು ರಾಷ್ಟ್ರೀಯ ಉದ್ಯಾನ, ೨೩ ವನ್ಯಜೀವಿಧಾಮಗಳನ್ನು ಒಳಗೊಂಡು ರಾಜ್ಯದ ಭೂವಿಸ್ತರಣದ ಶೇಖಡ ೩.೫ರಷ್ಟು ಭಾಗವನ್ನು ವನ್ಯಜೀವಿಗಳಿಗಾಗಿ ಮೀಸಲಿಡಲಾಗಿದೆ. ಒಣ ಕುರುಚಲು ಕಾಡುಗಳಿಂದ ಹಿಡಿದು ನಿತ್ಯಹರಿದ್ವರ್ಣದ ಕಾನನಗಳಿರುವುದು ನಮ್ಮ ರಾಜ್ಯದ ವಿಶೇಷತೆಯೆಂದೇ ಹೇಳಬೇಕು. ಹುಲಿ, ಚಿರತೆಯಂತಹ ದೊಡ್ಡ ಮಾರ್ಜಾಲಗಳು, ಆನೆ, ಕಾಟಿ, ಕಡವೆಯಂತಹ ಸಸ್ಯಹಾರಿಗಳು, ಸಿಂಗಲಿಕ, ಕಾಡುಪಾಪದಂತಹ ವಾನರ ಜಾತಿಗೆ ಸೇರಿದ ಪ್ರಾಣಿಗಳು, ಕೆನ್ನಾಯಿ, ತೋಳ, ಕತ್ತೆಕಿರುಬ, ಕಪ್ಪಲು ನರಿಯಂತಹ ನಾಯಿ ಜಾತಿಯ ಪ್ರಾಣಿಗಳು, ಕಾಳಿಂಗಸರ್ಪ, ಹಾರುವ ಓತಿಗಳಂತವ ವಿಶೇಷ ಸರಿಸೃಪಗಳು, ದೊರವಾಯನ ಹಕ್ಕಿ, ಓಂಗಿಲೆ ಪಕ್ಷಿ, ನೀಲಗಿರಿ ಪಾರಿವಾಳ ಹಾಗೂ ಇನ್ನಿತರ ಎಷ್ಟೋ ವಿಶಿಷ್ಟ ವನ್ಯಜೀವಿಗಳು ನಮ್ಮ ರಾಜ್ಯದಲ್ಲಿ ಕಂಡುಬರುತ್ತವೆ.

ನಮ್ಮ ವನ್ಯಜೀವಿಗಳ ನಿರ್ವಹಣೆಯ ಕೆಲವು ಪದ್ದತಿಗಳು, ರಾಜ್ಯದಲ್ಲಿದ್ದ ಆಂಗ್ಲ ಬೇಟೆಗಾರರು ಬಹು ಪ್ರಖ್ಯಾತಿ. ಈ ಕೆಲವು ವನ್ಯಜೀವಿ ವಿರೋಧಿ ಪದ್ದತಿಗಳು ನಿಂತವಾದರೂ ಅವು ನಮ್ಮ ವನ್ಯಜೀವಿ ಇತಿಹಾಸದಲ್ಲಿ ಸೇರಿಹೋಗಿವೆ.

೧೯ನೇ ಶತಮಾನದಲ್ಲಿ ಪ್ರಾರಂಭಗೊಂಡು ೧೯೭೧ರಲ್ಲಿ ಕೊನೆಗೊಂಡ ಆನೆಗಳನ್ನು ಹಿಡಿಯುವ ಖೆಡ್ಡಾ ಪರಂಪರೆ ಎಲ್ಲರಿಗೂ ತಿಳಿದದ್ದೇ. ನಾಗರಹೊಳೆಯ ಕಾಕನಕೋಟೆ ಅರಣ್ಯಪ್ರದೇಶದಲ್ಲಿ ಹೆಚ್ಚಾಗಿ ನಡೆಯುತ್ತಿದ್ದ ಈ ಪದ್ದತಿಯು ಈಗಿನ ಕಬಿನಿ ಆಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ ನಡೆಯುತ್ತಿತ್ತು. ಹಾಗೆಯೇ ಬೆಂಗಳೊರಿನಲ್ಲಿ ವಾಸವಾಗಿದ್ದ ಕೆನೆತ್ ಆಂಡರಸನ್‌ರ ಬೇಟೆಯ ಅನುಭವ ಕಥನಗಳು ಕನ್ನಡಿಗರಿಗೆ ಚಿರಪರಿಚಿತ. ಮೈಸೂರಿನಲ್ಲಿದ್ದ ಮೂವರು ಸಹೋದರರ ವ್ಯಾನ್‌ಇಂಜನ್ ಮತ್ತು ವ್ಯಾನ್‌ಇಂಜನ್ ಖಾಸಗಿ ಸಂಸ್ಥೆ, ವನ್ಯಜೀವಿಗಳ ಅದರಲ್ಲೂ ಹುಲಿ, ಚಿರತೆ ಹಾಗೂ ಇನ್ನಿತರ ದೊಡ್ಡ ಸ್ತನಿಗಳ ಚರ್ಮ ಪ್ರಸಾಧಕರು (ಟಾಕ್ಸಿಡರ್ಮಿಸ್ಟ್), ಜಗದ್‌ವಿಖ್ಯಾತರಾಗಿದ್ದರು. ೧೯೩೦ ರಿಂದ ೬೦ತ್ತರವರೆಗೂ ಸಕ್ರಿಯವಾಗಿದ್ದ ಕಾರ್ಖಾನೆ ೧೦೦ ಜನ ಉದ್ಯೋಗಿಗಳನ್ನು ಒಳಗೊಂಡಿತ್ತು. ನಂತರದ ದಿನಗಳಲ್ಲಿ ವನ್ಯಜೀವಿ ಬೇಟೆ ನಿಷೇಧವಾದ ಮೇಲೆ ಕೆಲಸ ಕಡಿಮೆಯಾಗಿ ೧೯೯೮ರಲ್ಲಿ ಮುಚ್ಚಲಾಯಿತು. ಅವರುಗಳಲ್ಲಿ ಈಗಲೂ ಒಬ್ಬ ಸಹೋದರ ಬದುಕಿದ್ದಾರೆ.

ಕನ್ನಡ ಸಾಹಿತ್ಯದಲ್ಲಿ ವನ್ಯಜೀವಿಗಳು
ಆಂಗ್ಲ ಭಾಷೆಯಲ್ಲಿ ಸಾಕಷ್ಟು ವನ್ಯಜೀವಿ ಸಾಹಿತ್ಯವಿದ್ದರೂ, ಪ್ರಪಂಚದಲ್ಲೇ ಅತೀ ಹೆಚ್ಚು ಹುಲಿ, ಏಷ್ಯಾದ ಆನೆಗಳನ್ನು ಹೊಂದಿರುವ ರಾಜ್ಯವಾಗಿ ಕನ್ನಡದಲ್ಲಿ ವೈಜ್ಞಾನಿಕ ಆಧಾರಿತ ವನ್ಯಜೀವಿ ಬರವಣಿಗೆಯ ಸಾಕಷ್ಟು ಕೊರತೆಯಿದೆ. ಪರಿಸರದ ಬಗ್ಗೆ ಬಹಳಷ್ಟು ಬರವಣಿಗೆ, ಬ್ರಿಟಿಶ್ ದೊರೆಗಳ ಶಿಕಾರಿ ಅನುಭವಗಳ ಕನ್ನಡ ತರ್ಜುಮೆಗಳು ಇದ್ದರೂ ಪ್ರಸಕ್ತ ವನ್ಯಜೀವಿ ವಿಚಾರಗಳ ಬಗ್ಗೆ ಇನ್ನೂ ಬರೆಯಲು ಸಾಕಷ್ಟು ಅವಕಾಶವಿದೆ.

ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ವನ್ಯಜೀವಿ ಮತ್ತು ವನ್ಯಜೀವಿ ಬೇಟೆಗಳ ಬಗ್ಗೆ ಹಲವು ಉಲ್ಲೇಖಗಳಿವೆ. ಸಾಹಿತ್ಯ ಮತ್ತು ಐತಿಹಾಸಿಕ ಕುರುಹುಗಳು ಇತಿಹಾಸದಲ್ಲಿ ಯಾವ ವನ್ಯಜೀವಿ ಪ್ರಭೇದಗಳು ಎಲ್ಲಿದ್ದವು ಮತ್ತು ಎಲ್ಲಿಂದ ಇಂದು ಕಣ್ಮರೆಯಾಗಿವೆಯೆಂಬ ಮಹತ್ವದ ವಿಚಾರಗಳನ್ನು ತಿಳಿಸುತ್ತವೆ. ಚಾಲುಕ್ಯರ ದೊರೆ ಮೂರನೇ ಸೋಮೇಶ್ವರ (೧೧೨೯-೩೦) ತನ್ನ ಪುಸ್ತಕ ಮಾನಸೋಲ್ಲಾಸದಲ್ಲಿ ಜಿಂಕೆಗಳನ್ನು ಬೇಟೆಯಾಡುವ ವಿಧಾನಗಳನ್ನು ವಿವರಿಸಿದ್ದಾನೆ. ಬೇಟೆಯ ಬಗ್ಗೆ ಹಲವು ಶಾಸನ ಮತ್ತು ವೀರಗಲ್ಲುಗಳಿರುವುದು ಬಹು ಕೂತೂಹಲಕಾರಿ. ನರೇಂದ್ರ ರೈ ದೇರ್ಲರವರ ಬೇಟೆ; ಪ್ರಭುತ್ವದಿಂದ ಪ್ರಜಾಪ್ರಭುತ್ವದೆಡೆಗೆ ಪುಸ್ತಕದಲ್ಲಿ ಪ್ರಾಚೀನ ಕನ್ನಡದ ವಿಕ್ರಮಾರ್ಜುನ ವಿಜಯ, ರಾಜಶೇಖರ ವಿಳಾಸ, ಗಿರಿಜಾ ಕಲ್ಯಾಣ, ಲಕ್ಷ್ಮಯ್ಯಕವಿ ಇನ್ನಿತರರ ಹಲವಾರು ಕೃತಿಗಳಲ್ಲಿನ ಬೇಟೆಗಳ ಪ್ರಸ್ತಾಪಗಳನ್ನು ವಿವರಿಸಿದ್ದಾರೆ. ಆಧುನಿಕ ಕನ್ನಡದ ಸಾಹಿತ್ಯದಲ್ಲಿ ಕುವೆಂಪು, ಕೆದಂಬಾಡಿ ಜತ್ತಪ್ಪ ರೈ, ಬಡ್ಡಡ್ಕ ಅಪ್ಪಯ್ಯ ಗೌಡರು ಹಾಗೂ ತೇಜಸ್ವಿಯವರುಗಳು ಬೇಟೆಯ ಬಗ್ಗೆ ತಮ್ಮ ಕೃತಿಗಳಲ್ಲಿ ಉಲ್ಲೇಖಿಸಿದ್ದಾರೆ.

ವನ್ಯಜೀವಿ ವಿಜ್ಞಾನ ಮತ್ತು ಸಂರಕ್ಷಣೆಯಲ್ಲಿ ನಮ್ಮ ಪಾತ್ರ
ವನ್ಯಜೀವಿ ಸಂರಕ್ಷಣೆ ಮತ್ತು ವಿಜ್ಞಾನದಲ್ಲಿ ಕರ್ನಾಟಕ ದೊಡ್ಡ ಪಾತ್ರವನ್ನೇ ವಹಿಸಿದೆ. ನಮ್ಮಲ್ಲಿ ತೆಗೆದುಕೊಂಡ ಹಲವಾರು ಗುರುತರವಾದ ನಿರ್ಧಾರಗಳನ್ನು ದೇಶದ ಇತರ ರಾಜ್ಯಗಳಲ್ಲಿ ಅನುಸರಿಸಿದ್ದಾರೆ. ಹಾಗೆಯೇ ವನ್ಯಜೀವಿ ವಿಜ್ಞಾನಕ್ಕೆ ಸಹ ನಾವು ಉತ್ತಮ ಕೊಡುಗೆಯನ್ನು ನೀಡಿದ್ದೇವೆ.

೧೯೦೫ರಲ್ಲೇ ಕೊಡಗಿನ ಸ್ತನಿಗಳ ಸಮೀಕ್ಷೆ ಹಮ್ಮಿಕೊಳ್ಳಲಾಗಿತ್ತು, ೧೯೩೫ರಲ್ಲಿ ಪ್ರಾಣಿ ಶಾಸ್ತ್ರಜ್ಞ ಸಿ.ಅರ್.ಎನ್.ರಾವ್ ಸಕಲೇಶಪುರ, ಸುಬ್ರಹ್ಮಣ್ಯ ಪ್ರದೇಶಗಳಲ್ಲಿ ಹದಿನೆಂಟು ಜಾತಿಯ ಕಪ್ಪೆಗಳನ್ನು ಪರಿಶೋದಿಸಿದ್ದಾರೆ. ೧೯೫೦ರ ದಶಕದಲ್ಲಿ ಎಂ.ಡಿ.ಪಾರ್ಥಸಾರಥಿ ಕೋತಿಗಳ ಮೇಲಿನ ಅಧ್ಯಯನ, ಭಾರತದಲ್ಲಿಯೇ ಕಪಿಗಳ ಬಗ್ಗೆ ನಡೆಸಿದ ಮೊತ್ತಮೊದಲ ಸಂಶೋಧನೆಯಾಯಿತು. ಕೋತಿಗಳಲ್ಲಿ ಶಿಶು ಹತ್ಯೆಯ ವರದಿ ಮಾಡಿದವರಲ್ಲಿ ಇವರು ವಿಶ್ವದಲ್ಲೇ ಮೊದಲಿಗರು.

೧೯೭೦-೮೦ರ ದಶಕದಲ್ಲಿ ಅಲ್ಪಾವಧಿ ಸಮೀಕ್ಷೆಗಳು ನಡೆದವಾದರೂ ಧೀರ್ಘಾವಧಿ ಸಂಶೋಧನೆಗಳು ವಿರಳ. ಆಗಿನ ಸಮೀಕ್ಷೆಗಳಲ್ಲಿ ವೈಜ್ಞಾನಿಕ ನಿಕೃಷ್ಟತೆಯ ಕೊರತೆಯಿದ್ದರೂ ಇಂದಿನ ಅನೇಕ ಆಧುನಿಕ ಅಧ್ಯಯನಗಳಿಗೆ ಬುನಾದಿಯನ್ನು ಹಾಕಿದವು. ೧೯೭೫ರ ನಂತರ ಆನೆ, ಕೆನ್ನಾಯಿ, ಅಳಿಲು ಮುಂತಾದ ವನ್ಯಜೀವಿಗಳ ಬಗ್ಗೆ ಸಂಶೋಧನೆಗಳು ನಡೆದವು. ೮೦ರ ದಶದಲ್ಲಿ ಕನ್ನಡದವರೇ ಆದ ಕೆ.ಉಲ್ಲಾಸ ಕಾರಂತರು ನಾಗರಹೊಳೆಯಲ್ಲಿ ಪ್ರಾರಂಭಿಸಿದ ಹುಲಿ ಮತ್ತು ಬಲಿ ಪ್ರಾಣಿಗಳ ಸಂಶೋಧನೆ ವಿಶ್ವದಲ್ಲಿ ಹುಲಿಗಳ ಮೇಲಿನ ಅತ್ಯಂತ ದೀರ್ಘವಧಿಯ ವೈಜ್ಞಾನಿಕ ಅಧ್ಯಯನವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇವರ ಅಧ್ಯಯನ ವಿಶ್ವದ ಅತ್ಯುನ್ನತ ವೈಜ್ಞಾನಿಕ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ.

ಈಗಿನ ಯುವಪೀಳಿಗೆ ವನ್ಯಜೀವಿ ಸಂಶೋಧನೆಯತ್ತ ಬಹಳಶ್ಟು ಒಲವು ತೋರಿದೆ. ಇಂದು ಕನ್ನಡದ ಎಂ.ಡಿ.ಮಧುಸೂಧನ, ದಿವ್ಯ ಮುದ್ದಪ್ಪ, ದೇವ್‌ಚರಣ್ ಜತ್ತಣ್ಣ, ಹೆಚ್.ಎನ್.ಕುಮಾರ ಹಾಗೂ ಮತ್ತಿತರರು ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾರೆ. ಹಾಗೆಯೇ ಬೆಂಗಳೂರಿನಲ್ಲೇ ವನ್ಯಜೀವಿ ವಿಜ್ಞಾನದ ಸ್ನಾತಕೋತ್ತರ ಪದವಿ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ. ವೈಲ್ಡ್‌ಲೈಫ್ ಕನ್ಸರ್ವೇಶನ್ ಸೊಸೈಟಿ, ಸೆಂಟರ್ ಫಾರ್ ವೈಲ್ಡ್‌ಲೈಫ್ ಸ್ಟಡೀಸ್, ನ್ಯಾಷನಲ್ ಸೆಂಟರ್ ಫಾರ್ ಬಯಲಾಜಿಕಲ್ ಸೈನ್ಸಸ್ ಮತ್ತಿತರ ಸಂಸ್ಥೆಗಳ ಸಹಯೋಗದೊಡನೆ ಉನ್ನತ, ವಿಶ್ವ ಮಟ್ಟದ ಪಠ್ಯಕ್ರಮವಿರುವ ವ್ಯಾಸಾಂಗವಕಾಶವಿರುವುದು ರಾಜ್ಯಕ್ಕೆ ಹೆಮ್ಮೆಯ ವಿಷಯ.

ನಮ್ಮ ವನ್ಯಜೀವಿಗಳಿಗಿರುವ ಕುತ್ತು
ದಿನೇ ದಿನೇ ಏರುತ್ತಿರುವ ಜನಸಂಖ್ಯೆ ಹಾಗೂ ವಾರ್ಷಿಕವಾಗಿ ಶೇಖಡ ೯ರಷ್ಟು ಬೆಳೆಯುತ್ತಿರುವ ಆರ್ಥಿಕತೆ, ವನ್ಯಜೀವಿ ಸಂರಕ್ಷಣೆಯಲ್ಲಿ ಹೆಚ್ಚಿನ ಸಹಾಯವನ್ನೇನು ಮಾಡಿಲ್ಲ. ಈ ಸುಂದರ ವನ್ಯಜೀವಿಗಳನ್ನು ಉಳಿಸಿಕೊಳ್ಳುವುದು ಈಗ ನಮ್ಮ ಸಮಾಜಕ್ಕೆ ಬಹು ದೊಡ್ಡ ಸವಾಲಾಗಿದೆ. ಇವುಗಳ ಸಂರಕ್ಷಣೆಗೆ ಇರುವ ತೊಡುಕುಗಳ ಪಟ್ಟಿ ದೊಡ್ಡದಾದರೂ ಕೆಲವು ಗುರುತರವಾದ ಸವಾಲುಗಳನ್ನು ಅರಿಯುವುದು ಮುಖ್ಯ.

ಸ್ವಾತಂತ್ರ್ಯಾನಂತರ ಜನಸಂಖ್ಯೆ ಹೆಚ್ಚಳ ಮತ್ತು ಆಗಿನ ಜನಸಂಖ್ಯೆಯ ಆಹಾರದ ಬೇಡಿಕೆಯನ್ನು ನೀಗಲು ಲಕ್ಷಾಂತರ ಚದರ ಕಿಲೋಮಿಟರ್ ಅರಣ್ಯ ಕೃಷಿಗಾಗಿ ಮೀಸಲಿಡಲಾಯಿತು. ಅದರೊಡನೆ ಆಣೆಕಟ್ಟು, ಕಾಲುವೆ, ವಿದ್ಯುತ್ ಸ್ಥಾವರಗಳು, ಹೆದ್ದಾರಿ, ರೈಲ್ವೆಹಳಿ, ಗಣಿಗಾರಿಕೆ, ಪ್ಲೈವುಡ್, ಬೆಂಕಿ ಪೆಟ್ಟಿಗೆ ಕಾರ್ಖಾನೆಗಳು ಹಾಗೂ ಇನ್ನಿತಿರ ಹಲವಾರು ಅಭಿವೃದ್ದಿ ಯೋಜನೆಗಳಿಗೆ ವನ್ಯಜೀವಿಗಳ ಆವಾಸಸ್ಥಾನಗಳನ್ನು ಬಿಟ್ಟುಕೊಡಲಾಯಿತು.

ಈ ತರಹದ ಕೆಲವು ಯೋಜನೆಗಳಿಂದ ವನ್ಯಜೀವಿಗಳು ತಮ್ಮ ನೆಲೆಯನ್ನು ಸಂಪೂರ್ಣವಾಗಿ ಕಳೆದುಕೊಂಡರೆ (ಉದಾ: ಆಣೆಕಟ್ಟು, ವಿದ್ಯುತ್ ಸ್ಥಾವರಗಳು, ಕಾರ್ಖಾನೆಗಳು), ಇನ್ನಿತರ ಯೋಜನೆಗಳಿಂದ ವನ್ಯಜೀವಿಗಳ ಆವಾಸಸ್ಥಾನಗಳು ಉಳಿದರೂ ಅವುಗಳನ್ನು ಇಬ್ಬಾಗಿಸಿ ವನ್ಯಜೀವಿಗಳಿಗೆ ಪರೋಕ್ಷವಾಗಿ ತೊಡಕಾಗುತ್ತದೆ (ಉದಾ: ಹೆದ್ದಾರಿ, ರೈಲ್ವೆ ಹಳಿ, ಕಾಲುವೆ). ಕಾಲುವೆಗಳು ಕೆಲವು ವನ್ಯಜೀವಿಗಳು ಕಾಡಿನ ಇತರ ಭಾಗಗಳಿಗೆ ವಲಸೆ ಹೊಗುವುದನ್ನು ತಡೆಯುತ್ತವೆ. ಹೆದ್ದಾರಿ, ರೈಲ್ವೆ ಹಳಿಗಳು ವನ್ಯಜೀವಿ ನೆಲೆಗಳನ್ನು ಒಡೆಯುವುದರೊಡನೆ ವೇಗವಾಗಿ ಚಲಿಸುವ ವಾಹನಗಳಿಗೆ ಸಿಲುಕಿ ಸಾಯುವ ಪ್ರಾಣಿಗಳು ನೂರಾರು. ಇತ್ತೀಚಿನ ದಿನಗಳಲ್ಲಿ ಹಸಿರು ಯೋಜನೆಗಳೆಂದು ಕರೆಸಿಕೊಳ್ಳುವ ಗಾಳಿಗಿರಣಿಗಳು, ಕಿರು ಜಲವಿದ್ಯುತ್ ಯೋಜನೆಗಳು (ಮಿನಿ ಹೈಡಲ್ ಪ್ರಾಜೆಕ್ಟ್ಸ್) ಕೂಡಾ ವನ್ಯಜೀವಿಗಳ ಆವಾಸ ಸ್ಥಾನವನ್ನು ಛಿದ್ರೀಕರಣಗೊಳಿsಸುತ್ತಿವೆಸಿದೆ.

ಆವಾಸಸ್ಥಾನದ ನಾಶದ ನಂತರ ವನ್ಯಜೀವಿಗಳಿಗಿರುವ ಮತ್ತೊಂದು ಕುತ್ತು, ಕಳ್ಳಬೇಟೆ. ದಶಕಗಳ ಹಿಂದೆ ಬೇಟೆ ಆಂಗ್ಲ ದೊರೆಗಳ ಪ್ರಭುತ್ವದ ಸಂಕೇತವಾಗಿದ್ದರೆ, ಇನ್ನೊಂದೆಡೆ ನಮ್ಮ ರಾಜಮಹಾರಾಜರ ಹೆಮ್ಮೆಯ ಚಿಹ್ನೆಯಾಗಿತ್ತು. ಕೆಲವು ವನವಾಸಿಗಳಿಗೆ ಇದು ಆಹಾರದ ಮೂಲವಾಗಿತ್ತು. ಆದರೆ ಈಗ ಮೋಜಿಗಾಗಿ ಹಾಗೂ ಕಾಡು ಮಾಂಸದ ರುಚಿಗಾಗಿ ಬೇಟೆ ಆಡುತ್ತಾರೆ. ಕೆಲೆವೆಡೆ ಆವಾಸ ಸ್ಥಾನವಿದ್ದರೂ ಹುಲಿ, ಚಿರತೆ ಸೀಳುನಾಯಿಯಂತಹ ದೊಡ್ಡ ಮಾಂಸಹಾರಿ ಪ್ರಾಣಿಗಳ ಉಳಿವಿಗೆ ಅವುಗಳ ಭಕ್ಷ್ಯ ಪಟ್ಟಿಯಲ್ಲಿರುವ ಜಿಂಕೆ, ಕಡವೆ, ಕಾಡು ಹಂದಿ, ಕಾಟಿಯಂತಹ ನೈಸರ್ಗಿಕ ಆಹಾರವಿಲ್ಲದೆ, ಅವುಗಳು ಸ್ಥಳೀಯವಾಗಿ ನಶಿಸಿ ಹೋಗಿವೆ. ಅಥವಾ ಬೇಟೆಯಿಂದಾಗಿ ಈ ಗೊರಸು ಪ್ರಾಣಿಗಳ ದಟ್ಟಣೆ ಬಹು ಕಡಿಮೆಯಾಗಿದೆ. ಮಾಂಸಾಹಾರಿ ಪ್ರಾಣಿಗಳಿಗೆ ಬೇಕಾಗಿರುವ ಆಹಾರವಿಲ್ಲದಿದ್ದರೆ, ಕಾಡುಗಳಿದ್ದರೂ ಅಪ್ರಯೋಜಕವಾಗುತ್ತದೆ. ಈ ತರಹದ ಕಾಡುಗಳನ್ನು ವನ್ಯಜೀವಿ ವಿಜ್ಞಾನಿ ಕೆಂಟ್ ರೆಡ್‌ಫ಼ರ್ಡ್ ಎಂಪ್ಟಿ ಫ಼ಾರೆಸ್ಟ್ ಅಥವಾ ಖಾಲಿ ಕಾಡುಗಳು ಎಂದು ಬಣ್ಣಿಸಿದ್ದಾರೆ.

ಇತ್ತೀಚಿಗೆ ಹುಲಿ, ಚಿರತೆಗಳ ಚರ್ಮ, ಮೂಳೆಗಳಿಗೆ ಚೀನಾ ಮತ್ತು ಇತರ ದಕ್ಷಿಣ ಈಶಾನ್ಯ ದೇಶಗಳಲ್ಲಿರುವ ಬೇಡಿಕೆಗೆ ನಮ್ಮ ರಾಜ್ಯದಲ್ಲಿ ಇವುಗಳ ಬೇಟೆ ಹೆಚ್ಚಾಗಿದೆ. ಈ ಸಮಸ್ಯೆ ಮುಂಚೆ ಕೇವಲ ಉತ್ತರ ಭಾರತದ ಕಾಡುಗಳಲ್ಲಿ ತೊಡಕಾಗಿತ್ತಾದರೂ ಈಗ ಕರ್ನಾಟಕಕ್ಕೂ ಕಾಲಿಟ್ಟಿದೆ.

ಬೆಂಕಿ, ಮರ ಕಡಿತಲೆ, ಕಾಡು ಉತ್ಪನ್ನಗಳ ಅತಿಯಾದ ಶೇಖರಣೆ, ಜಾನುವಾರು ಕಾಡಿನಲ್ಲಿ ಮೇಯಿಸುವುದು ನಮ್ಮ ವನ್ಯಜೀವಿಗಳಿಗಿರುವ ಇತರ ಮುಖ್ಯ ಅಪಾಯಗಳು. ಈ ತೊಡುಕುಗಳು ವನ್ಯಜೀವಿಗಳ ಆವಾಸಸ್ಥಾನದ ಮೇಲೆ ಬಹಳಷ್ಟು ಪರೋಕ್ಷ ತೊಂದರೆಗಳನ್ನು ಒಡ್ಡುತ್ತವೆ. ಬೆಂಕಿ ಸಸ್ಯಾಹಾರಿ ಪ್ರಾಣಿಗಳಿಗೆ ಆಹಾರದ ಕೊರತೆಯುಂಟು ಮಾಡುತ್ತದೆ, ಚಿಕ್ಕಪುಟ್ಟ ಸಸಿಗಳೆಲ್ಲ ಸುಟ್ಟು ಬೂದಿಯಾಗಿ ಕಾಡು ಅಭಿವೃದ್ಧಿಯಾಗುವುದಿಲ್ಲ, ನೆಲದ ಮೇಲಿರುವ ಬೀಜಗಳೆಲ್ಲ ಸುಟ್ಟು ಬಿಜೋತ್ಪನ್ನವೂ ಆಗುವುದಿಲ್ಲ. ಜಾನುವಾರುಗಳು ಸಸ್ಯಾಹಾರಿ ವನ್ಯಜೀವಿಗಳ ಆಹಾರಕ್ಕೆ ಪೈಪೋಟಿಯೊಡ್ಡುತ್ತವೆ ಹಾಗೂ ರೋಗಗಳನ್ನು ವನ್ಯಜೀವಿಗಳಿಗೆ ಹರಡುತ್ತವೆ.

ಹಣ್ಣುಗಳು, ನೆಲ್ಲಿ, ಸೀಗೆ, ಜೇನು, ಚಕ್ಕೆ ಹೀಗೆ ಕಾಡಿನಲ್ಲಿ ಸಿಗುವ ಕಾಡು ಉತ್ಪನ್ನಗಳನ್ನು ತೆಗೆದರೆ ಪೌಷ್ಠಿಕತೆಗೆ ಅದರ ಮೇಲೆಯೇ ಅವಲಂಬಿತವಾಗಿರುವ ವನ್ಯಜೀವಿಗಳಿಗೆ ಅವುಗಳ ಪಾಲು ಸಿಗದ ಹಾಗಾಗುತ್ತದೆ. ಅದರಲ್ಲೂ ಬೇಸಿಗೆ ಸಮಯದಲ್ಲಿ ಕಾಡಿನಲ್ಲಿ ಪೌಷ್ಠಿಕ ಆಹಾರದ ಕೊರತೆಯಿರುವಾಗ ಕಾಡು ಉತ್ಪನ್ನಗಳನ್ನು ತೆಗೆಯುವುದು ವನ್ಯಜೀವಿಗಳ ಮೇಲೆ ಬಹು ದೊಡ್ಡ ಒತ್ತಡ ಹೇರುತ್ತದೆ.

ನಾವು ಕಳೆದುಕೊಂಡ ಪ್ರಭೇದಗಳು
ಸಂರಕ್ಷಣೆಯ ಇಷ್ಟೆಲ್ಲಾ ಪ್ರಯತ್ನಗಳ ನಡುವೆ ನಾವಾಗಲೇ ಕೆಲವು ಪ್ರಾಣಿ ಪ್ರಭೇದಗಳನ್ನು ಕಳೆದುಕೊಂಡಿದ್ದೇವೆ. ರಾಜ್ಯದ ಬಂಡೀಪುರದ ಬಳಿಯಿರುವ ಬೀರಂಬಾಡಿ, ಈಗಿನ ಚಾಮರಾಜನಗರ ಜಿಲ್ಲೆಯ ಅತ್ತಿಕಲ್‌ಪುರ, ಕೊಳ್ಳೇಗಾಲ ತಾಲ್ಲೂಕಿನ ಬಂಡಳ್ಳಿ, ಬಳ್ಳಾರಿ, ಬಹುಶ: ಚಿಕ್ಕಬಳ್ಳಾಪುರದಲ್ಲಿ ಸಹ ಕಂಡು ಬರುತ್ತಿದ್ದ ಸಿವಂಗಿ ಅಥವಾ ಬೇಟೆ ಚಿರತೆ (ಆಂಗ್ಲಭಾಷೆಯಲ್ಲಿ ಚೀತಾ) ಇಂದು ಕಣ್ಮರೆಯಾಗಿದೆ. ಈಗ ಉತ್ತರ ಭಾರತದಲ್ಲಿ ಕಂಡು ಬರುವ ಮರವಿ (ನೀಲ್‌ಗಾಯ್) ಕರ್ನಾಟಕದಲ್ಲಿ ಮುಂಚೆ ಕಂಡುಬರುತ್ತಿತ್ತು. ಹಾಗೆಯೇ ಪಶ್ಚಿಮ ಘಟ್ಟಗಳಲ್ಲಿ ಕಂಡು ಬರುತ್ತಿದ್ದ ಮಲಬಾರ್ ಕಬ್ಬೆಕ್ಕು ನಶಿಸಿರುವುದು ಖಚಿತವಾಗಿದೆ. ಈ ಶತಮಾನದ ಆದಿಯಲ್ಲಿ ಬ್ರಹ್ಮಗಿರಿ ಬೆಟ್ಟಗಳಲ್ಲಿ ನೀಲಗಿರಿ ಥಾರ್ (ನೀಲಗಿರಿ ಟಗರು) ಸಹ ಇತ್ತೆಂದು ಭಾವಿಸಲಾಗಿದೆ. ಇವೆಲ್ಲವೂ ನಾವು ಕಳೆದುಕೊಂಡ ಪ್ರಮುಖ ವನ್ಯಜೀವಿ ಪ್ರಭೇದಗಳು.

ಹಾಗೆಯೇ ನೀಲಗಿರಿ ಲಂಗೂರ್ ಅಥವಾ ಕರಿ ಮುಚ್ಚ ಕೊಡಗಿನ ದಕ್ಷಿಣ ಭಾಗದಲ್ಲಿ ಹೆಚ್ಚಾಗಿ ಸಿಗುತ್ತಿದದ್ದು ಈಗ ಅಲ್ಲಿನ ಬ್ರಹ್ಮಗಿರಿ ಅಭಯಾರಣ್ಯಕ್ಕೆ ಮಾತ್ರ ಸೀಮಿತವಾಗಿದೆ. ಅತಿಯಾದ ಬೇಟೆಯೇ ಈ ಅವನತಿಗೆ ಮುಖ್ಯ ಕಾರಣ. ದಕ್ಷಿಣ ಭಾರತದ ಹಾಗೂ ಶ್ರೀಲಂಕದ ಕೆಲವೇ ಕೆಲವು ಭಾಗಗಳಿಗೆ ಸೀಮಿತವಾಗಿರುವ ಗ್ರಿಜ಼ಲ್ ದೊಡ್ಡ ಅಳಿಲು ಕರ್ನಾಟಕದ ಕಾವೇರಿ ವನ್ಯಜೀವಿಧಾಮದ ನದಿಯ ದಡದ ಕೆಲವು ಕಾಡುಪ್ರದೇಶದಲ್ಲಿ ಸಿಗುವ ಇನ್ನೊಂದು ಅಪರೂಪದ ಪ್ರಾಣಿ.

ಕೆಲವು ಪ್ರಭೇಧಗಳು ನಶಿಸಿಲ್ಲವಾದರೂ ಅವುಗಳ ಐತಿಹಾಸಿಕ ನೆಲೆಗಳಿಂದ ಕಣ್ಮರೆಯಾಗಿ ಈಗ ಕೆಲವೇ ಕೆಲವು ಪ್ರದೇಶಗಳಿಗೆ ಸೀಮಿತವಾಗಿವೆ. ಹುಲಿಗಳು ಹಿಂದಿನ ಬೇಟೆಗಾರರು, ರಾಜ್ಯಪತ್ರಗಳಲ್ಲಿ (ಗೆಜ಼ೆಟ್) ಬಣ್ಣಿಸಿದ ಹಲವಾರು ಪ್ರದೇಶಗಳಿಂದ ಇಂದು ಕಣ್ಮರೆಯಾಗಿವೆ. ಚಾಮರಾಜನಗರದ ಕೆಲವು ಭಾಗ, ತುಮಕೂರಿನಂತಹ ಒಣ ಪ್ರದೇಶದಲ್ಲೂ ಕೂಡ ಇದ್ದ ನಮ್ಮ ರಾಷ್ಟ್ರೀಯ ಪ್ರಾಣಿ ಈಗ ಉಳಿದಿರುವುದು ಕೆಲವೇ ಕೆಲವು ರಾಷ್ಟ್ರೀಯ ಉದ್ಯಾನ, ವನ್ಯಜೀವಿಧಾಮ ಮತ್ತು ಪಶ್ಚಿಮ ಘಟ್ಟಗಳ ಕೆಲವು ಕಾಡುಗಳಲ್ಲಿ ಮಾತ್ರ. ರಾಜ್ಯದ ಶರಾವತಿ ಕಣಿವೆ, ಶೆಟ್ಟಿಹಳ್ಳಿ ಹಾಗೂ ಹಾಸನ ಜಿಲ್ಲೆಯಿಂದ ಆನೆಗಳು ಕಣ್ಮರೆಯಾಗಿವೆ ಅಥವಾ ಆ ದಿನ ಇನ್ನು ದೂರವಿಲ್ಲ. ಹಾಗೆಯೇ ತೋಳ, ಭಾರತದ ಎರಳೆ (ಇಂಡಿಯನ್ ಗೆಜ಼ೆಲ್, ಚಿಂಕಾರ), ಯರಲೊಡ್ಡು ಅಥವಾ ದೊರವಾಯನ ಹಕ್ಕಿ ರಾಜ್ಯದಲ್ಲಿ ಬಹು ಗಂಭೀರ ಪರಿಸ್ಥಿತಿ ತಲುಪಿವೆ.

ಕರ್ನಾಟಕದ ವನ್ಯಜೀವಿಗಳನ್ನು ಉಳಿಸಿಕೊಳ್ಳಬಹುದೇ?
೧೯೯೫ರ ನಂತರ ದೂರದರ್ಶನದ ಕ್ರಾಂತಿ ಜನರಲ್ಲಿ ವನ್ಯಜೀವಿ, ವನ್ಯಜೀವಿ ವಿಜ್ಞಾನ ಮತ್ತು ಅರಣ್ಯ ಸಂರಕ್ಷಣೆಯತ್ತ ಗಮನ ಸೆಳೆದಿದೆ. ನ್ಯಾಷನಲ್ ಜಿಯೋಗ್ರಾಫಿಕ್, ಅನಿಮಲ್ ಪ್ಲಾನೆಟ್ ಮತ್ತು ಡಿಸ್ಕವರಿಯಂತಹ ಚಾನೆಲ್‌ಗಳಿಂದ ವಿಶೇಷವಾಗಿ ನಗರವಾಸಿ ಮಧ್ಯಮವರ್ಗದ ಜನರಲ್ಲಿ ವನ್ಯಜೀವಿಗಳ ಬಗ್ಗೆ ಆಸಕ್ತಿ ಹೆಚ್ಚಿದೆ. ಗಣಕಯಂತ್ರದ ಉದ್ಯಮದಲ್ಲಿನ ಆರ್ಥಿಕ ಸೌಲಭ್ಯಗಳಿಂದ ಹಾಗೂ ಹೊಸ ಆರ್ಥಿಕ ನೀತಿಯಿಂದ ಲಾಭ ಪಡೆದಿರುವ ಹಲವಾರು ಯುವಕ ಯುವತಿಯರು ವನ್ಯಜೀವಿ ಛಾಯಾಗ್ರಹಣದ ಹವ್ಯಾಸಕ್ಕೆ ಆಕರ್ಷಿತರಾಗಿದ್ದರೆ. ಆದರೂ ವನ್ಯಜೀವಿ ನೆಲೆಗಳಿಗಿರುವ ನೈಜ ಪರಿಸ್ಥಿತಿಯ ತಿಳುವಳಿಕೆ ಬಹಳಷ್ಟು ಕಡಿಮೆ ಹಾಗೂ, ನಿರ್ದಿಷ್ಟ ಸಮಸ್ಯೆಗಳ ಪರಿಹಾರಕ್ಕೆ ತೊಡಗುವವರು ಇನ್ನೂ ವಿರಳ.

ವನ್ಯಜೀವಿ ಸಂರಕ್ಷಣೆ ಹೆಚ್ಚಾಗಿ ಬೈಬಲ್‌ನಲ್ಲಿ ಬರುವ ಡೇವಿಡ್ ಮತ್ತು ಗೋಲಿಯತ್‌ರ ಯುದ್ಧ ಕಥೆಯಂತೆ. ವನ್ಯಜೀವಿ ಸಂರಕ್ಷಕರು ದೈತ್ಯ ಡೇವಿಡ್‌ನ ವಿರುದ್ಧವಿರುವ ಕವಣೆ ಮತ್ತು ಕಲ್ಲುಗಳನ್ನು ಹೊಂದಿರುವ ಪುಟ್ಟ ಗೋಲಿಯತ್‌ನಂತೆ. ಮರಗಳ್ಳರು, ಬೇಟೆಯವರು, ಕಾಡು ಒತ್ತುವರಿ ಮಾಡಿಕೊಳ್ಳುವವರಲ್ಲದೆ ಇತ್ತೀಚಿಗೆ ನಮ್ಮ ವನ್ಯಜೀವಿ ನೆಲೆಗಳ ಪ್ರತಿ ಅಡಿಯಲ್ಲೂ ಹೆದ್ದಾರಿ, ಕಾಲುವೆ, ಅಣೆಕಟ್ಟು, ರೆಸಾರ್ಟ್‌ಗಳನ್ನು ಮಾಡಲು ಹವಣಿಸುವ ಶಕ್ತಿಯುತವಾದ ಉದ್ಯಮಿಗಳ ವಿರುದ್ಧ ಹೋರಾಡಬೇಕು. ಅದಕ್ಕಿಂತ ಬಹು ಮುಖ್ಯವಾಗಿ ಹೊಸ ಆರ್ಥಿಕ ನೀತಿಯಿಂದ ಮಿತಿ ಮೀರಿದ ಭ್ರಷ್ಟಾಚಾರ, ಇವೆಲ್ಲವನ್ನು ಮೆಟ್ಟಿನಿಲ್ಲಬೇಕಾದ ಪರಿಸ್ಥಿತಿ, ವನ್ಯಜೀವಿ ಸಂರಕ್ಷಕರಿಗೆ.

ವನ್ಯಜೀವಿ ಸಂರಕ್ಷಣೆಗೆ ಸಮಾಜದ ಎಲ್ಲರ ಬೆಂಬಲವೂ ಅಗತ್ಯ. ಇದು ಜೀವಿವಿಜ್ಞಾನದಷ್ಟೇ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಹಾಗೂ ರಾಜಕೀಯ ವಿಷಯ ಕೂಡ. ಇದರ ಕಾರ್ಯದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬಹುದು. ವಿದ್ಯಾರ್ಥಿಗಳು, ವ್ಯಾಪಾರಿಗಳು, ಸಾಹಿತಿಗಳು, ಮಾಧ್ಯಮದವರು, ಸರ್ಕಾರಿ ಕೆಲಸದಲ್ಲಿರುವವರು, ವೈದ್ಯರು, ರಾಜಕಾರಣಿಗಳು, ಹಳ್ಳಿಯಲ್ಲಿರುವವರು, ನಗರವಾಸಿಗಳು. ಇಂತಹದೇ ಶೈಕ್ಷಣಿಕ ಹಿನ್ನೆಲೆಯಿರುವವರೆಂದು ಬೇಕಿಲ್ಲ. ವನ್ಯಜೀವಿ ಸಂರಕ್ಷಣೆಗೆ ಬೇಕಿರುವುದು ವಿಧವಿಧವಾದ ಪ್ರತಿಭೆಯುಳ್ಳ ಜನ. ಆದರೆ ಬಹು ಮುಖ್ಯವಾದ ವಿಷಯವೆಂದರೆ ನಿಜವಾದ ವನ್ಯಜೀವಿ ಸಂರಕ್ಷಕರಿಗೆ ಕೆಲವು ಗುಣಗಳಿರಬೇಕಾಗುತ್ತದೆ. ವನ್ಯಜೀವಿ ಸಂರಕ್ಷಣೆಯ ತೊಂದರೆಗಳನ್ನು ಮೊದಲು ಆದ್ಯತೆ ಗೊಳಿಸುವ ಅರಿವಿರಬೇಕು. ಸಾಮಾಜಿಕ ಸ್ಥಿತಿ ಗತಿಗಳನ್ನು ಅರ್ಥೈಸಿಕೊಳ್ಳುವ ನಿಪುಣತೆ, ಹಳ್ಳಿಯವರಿಂದ ಪ್ರಾರಂಭಿಸಿ, ಸಾಮಾಜಿಕ ನಾಯಕರು, ಮಾಧ್ಯಮದವರು, ವ್ಯಾಪಾರಿ ಧುರೀಣರು, ಎಲ್ಲರೊಡನೆ ಕೂಡಿ ಕೆಲಸ ಮಾಡುವ ಕೌಶಲ, ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯರಿಂದ ಹಿಡಿದು ರಾಜ್ಯದ ಮುಖ್ಯಮಂತ್ರಿಗಳೊಡನೆಯೂ ಕೆಲಸ ನಿಭಾಯಿಸಬಲ್ಲ ನಿರ್ವಹಣಾ ಚಾತುರ್ಯ ಬೇಕು. ಅದೊಂದು ಕೇವಲ ನಗರವಾಸಿ, ಆರ್ಥಿಕವಾಗಿ ಮುನ್ನಡೆದವರ ವಿಲಾಸಿ ಹವ್ಯಾಸವಲ್ಲ. ಅದನ್ನು ನಿಭಾಯಿಸಲು ಸಾಮಾಜಿಕ ಸಾಧನಗಳು ಅವಶ್ಯವಾಗಿ ಬೇಕು.

೭೦ರ ದಶಕದಲ್ಲಿ ರಾಜಕೀಯ ಬೆಂಬಲ ಪಡೆದ ಅರಣ್ಯ ಇಲಾಖೆ, ಸ್ವಯಂಸೇವಾ ಸಂಸ್ಥೆಗಳು, ವನ್ಯಜೀವಿ ಆಸಕ್ತರು ಹಾಗೂ ಬಹು ಮುಖ್ಯವಾಗಿ ನಮ್ಮ ರಕ್ಷಿತಾರಣ್ಯಗಳಲ್ಲಿ ಹಗಲು ಇರುಳೆನ್ನದೆ ದುಡಿಯುವ ಅರಣ್ಯ ವೀಕ್ಷಕರು, ರಕ್ಷಕರು ಮಾಡಿದ ಉತ್ತಮ ಕಾರ್ಯಗಳಿಂದ ಪ್ರಪಂಚದಲ್ಲಿಯೇ ಅತೀ ಹೆಚ್ಚು ಹುಲಿಗಳು ಮತ್ತು ಏಷ್ಯಾದ ಆನೆಗಳಿರುವ ನಾಡು ನಮ್ಮದಾಗಿದೆ. ಅದರೊಡನೆ ಇತರ ವನ್ಯಜೀವಿಗಳ ಸಂರಕ್ಷಣೆಗೆ ಸಾಕಷ್ಟು ಉತ್ತಮ ಫಲಿತಾಂಶಗಳು ಬಂದಿದೆ. ಸರಿಯಾದ ಸಮಯದಲ್ಲಿ ಸರಿಯಾದ ಕೆಲಸವನ್ನು ಮಾಡಿದರೆ ನಮ್ಮ ವನ್ಯಜೀವಿ ನೆಲೆಗಳನ್ನು ಉಳಿಸುವುದು ಸಾಧ್ಯವಿದೆಯೆಂದು ತೋರಿಸಿಕೊಟ್ಟಿದ್ದೇವೆ. ಮುಂದೆಯು ವಿಶ್ವದಲ್ಲೇ ವನ್ಯಜೀವಿಗಳ ಪ್ರಮುಖ ರಾಜ್ಯವೆಂಬ ಹೆಗ್ಗಳಿಕೆಯನ್ನು ನಾವು ಉಳಿಸಿಕೊಳ್ಳಬೇಕು. ಅದಕ್ಕೆ ಬೇಕಾಗಿರುವ ಎಲ್ಲಾ ತರಹದ ಮಾಹಿತಿ ಮತ್ತು ವೈಜ್ಞಾನಿಕ ಪರಿಣತಿ ನಮ್ಮಲ್ಲಿದೆ. ಇಲ್ಲಿಯವರೆಗೆ ಮಾಡಿರುವ ಸಾಧನೆಗಳನ್ನು ಮುಂದುವರೆಸಿ ಮುಂದಿನ ಪೀಳಿಗೆಯವರಿಗೆ ಸೇರಿರುವ ಹುಲಿ, ಆನೆಯಂತಹ ಮನೋಹರ ವನ್ಯಜೀವಿಗಳನ್ನು ಉಳಿಸುವುದು ನಮ್ಮ ಕರ್ತವ್ಯ. ಆದರೆ ಈ ಗುರಿಯನ್ನು ಸಾಧಿಸಲು ನಮ್ಮ ರಾಜಕೀಯ ನಾಯಕರು, ಅಧಿಕಾರಿಗಳು ವನ್ಯಜೀವಿ ಸಂರಕ್ಷಣೆಗೆ ಬೆಂಬಲವಾಗಿ ನಿಲ್ಲಬೇಕಾಗಿದೆ.

ನಮ್ಮ ರಾಜ್ಯದ ವನ್ಯಜೀವಿ ಪರಂಪರೆಯನ್ನು ಸಂರಕ್ಷಿಸಲು ನಮ್ಮ ಭಾಷೆ ಸಂಸ್ಕೃತಿಯಷ್ಟೇ ಪ್ರಾಮುಖ್ಯತೆಯನ್ನು ನಾವು ಕೂಡಬೇಕುಕಾಗಿದೆ ಹಾಗೂ ಇದಕ್ಕಾಗಿ ಆಸಕ್ತ ಕನ್ನಡಿಗರೆಲ್ಲರೂ ಒಂದೇ ವೇದಿಕೆಯಲ್ಲಿ ಕೆಲಸ ಮಾಡಬೇಕಾಗಿದೆ.

ಕರ್ನಾಟಕದಲ್ಲಿ ವನ್ಯಜೀವಿ ಸಂರಕ್ಷಣೆಗೆ ಕೆಲಸ ಮಾಡುತ್ತಿರುವ ಕೆಲವು ಸಂಸ್ಥೆಗಳು
ವೈಲ್ಡ್‌ಲೈಫ್ ಕನ್ಸರ್ವೇಶನ್ ಸೊಸೈಟಿ - www.wcsindia.org

ಸೆಂಟರ್ ಫಾರ್ ವೈಲ್ಡ್‌ಲೈಫ್ ಸ್ಟಡೀಸ್ - www.cwsindia.org

ನೇಚರ್ ಕನ್ಸರ್ವೇಶನ್ ಫ಼ೌಂಡೇಷನ್ - www.ncf-india.org

This is a chapter from the recently released book 'Punaraavalokana' edited by Hampa Nagarajaiah and G.N.Mohan. The book was brought out during the Vishwa Kannada Sammelana held at Belgaum by Government of Karnataka.

No comments:

Post a Comment