Wednesday, October 5, 2011

ವನ್ಯಜೀವಿಧಾಮವೆಂಬುದು ಪೆಡಂಭೂತವೇ?

ಪುಷ್ಪಗಿರಿ ವನ್ಯಜೀವಿಧಾಮದ ಶೋಲಾ ಮತ್ತು ಹುಲ್ಲುಗಾವಲುಗಳು- ©ಪಿ.ಎಂ.ಮುತ್ತಣ್ಣ

ವನ್ಯಜೀವಿಧಾಮ, ರಾಷ್ಟ್ರೀಯ ಉದ್ಯಾನವೆಂದರೆ ಜನರನ್ನು ಒಕ್ಕಲೆಬ್ಬಿಸುವ ಯೋಜನೆಗಳೆಂದೇ ತಿಳಿವು, ಅಭಿಪ್ರಾಯಗಳಿವೆ. ೭೦ರ ದಶಕದಲ್ಲಿ ರಾಷ್ಟ್ರೀಯ ಉದ್ಯಾನಗಳ ಸ್ಥಾಪನೆಗೆ ಕೆಲವು ಪ್ರದೇಶಗಳಲ್ಲಿ ಜನರನ್ನು ಒಕ್ಕಲೆಬ್ಬಿಸಿದ ರೀತಿ ಅಮಾನವೀಯ. ಪ್ರಕ್ರಿಯೆ ದೇಶದೆಲ್ಲೆಡೆ ವನ್ಯಜೀವಿಧಾಮ, ರಾಷ್ಟ್ರೀಯ ಉದ್ಯಾನಗಳೆಂದರೆ ಜನರು ಭೀತಿ ಪಡುವ ಪರಿಸ್ಥಿತಿ ತಂದೊಡ್ಡಿದೆ. ಆಗ ನಡೆದ ಕೃತ್ಯದಿಂದ ಜನರು ವನ್ಯಜೀವಿ ಸಂರಕ್ಷಣೆಯ ಬಗ್ಗೆ ಅನುಮಾನದಿಂದ ನೋಡುವುದು ಸರಿಯಷ್ಟೇ. ಆದರೆ ಕಾಲ, ಕಾನೂನು ಹಾಗೂ ಮುಖ್ಯವಾಗಿ ಸಾರ್ವಜನಿಕರು ಹಕ್ಕುಗಳಿಗೆ ಹೋರಾಡುವ ರೀತಿಗಳು ಬದಲಾಗಿವೆ.

ಈಗ ರಾಷ್ಟ್ರೀಯ ಉದ್ಯಾನ ಅಥವಾ ವನ್ಯಜೀವಿಧಾಮಗಳನ್ನು ಘೋಷಿಸಿದರೆ ಅಲ್ಲಿನ ಹಳ್ಳಿಗಳು, ಜನರ ಭೂಮಿ, ಬೆಟ್ಟ, ಹಕ್ಕಲು ಮುಂತಾದ ಪ್ರದೇಶಗಳ ಮೇಲೆ ಜನರ ಹಕ್ಕು ಮುಂದುವರಿಯುತ್ತದೆ. ಇದನ್ನು ಘೋಷಣೆಯ ಪತ್ರದಲ್ಲಿ ಅಧಿಕೃತವಾಗಿ ಕೂಡ ನಮೂದಿಸಲಾಗುತ್ತದೆ. ಹಾಗೆಯೇ ಪರಂಪರಾಗತವಾಗಿ ನೆಲೆಸಿರುವ ಸ್ಥಳೀಯರು ಮತ್ತು ಗಿರಿಜನರಿಗೆ ತಮ್ಮ ಸಾಂಪ್ರದಾಯಿಕ ಹಕ್ಕುಗಳು ಅನುಸೂಚಿತ ಬುಡಕಟ್ಟುಗಳ ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳ ಅಧಿನಿಯಮ ಕಾಯ್ದೆಯಡಿಯಲ್ಲಿ ಮುಂದುವರಿಯುತ್ತವೆ.

ಹೌದು, ಕೆಲವರಿಗೆ ವನ್ಯಜೀವಿಧಾಮಗಳಿಂದ ತೊಡಕಾಗುತ್ತದೆ. ಬಿಗಿ ಕಾನೂನಿನಿಂದ ವನ್ಯಜೀವಿ ಬೇಟೆ, ಕಳ್ಳ ನಾಟಾ ಮತ್ತು ರೈತರ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಯೋಜಿಸಿರುವ ಉದ್ದಿಮೆದಾರರು, ಪರರಾಜ್ಯಗಳಿಂದ ಬಂದು ರಬ್ಬರ್ ತೋಟಗಳಿಗಾಗಿ ಕಾಡನ್ನು ಒತ್ತುವರಿ ಮಾಡುವವರಿಗೆ ಅಡತಡೆಯಾಗುತ್ತದೆ.

ಬೇಟೆಯಾಡುವುದು ಕೂಡ ನಮ್ಮ ಸಾಂಪ್ರದಾಯಿಕ ಹಕ್ಕು ಎಂದು ಪ್ರತಿಪಾದಿಸುವವರಿದ್ದಾರೆ. ಆದರೆ ಕೆಲವು ಸಾಂಪ್ರದಾಯಿಕ ರೀತಿ, ನೀತಿ ಕಾಲಕ್ಕೆ ತಕ್ಕ ಹಾಗೆ ಬದಲಾಗಬೇಕಾಗುತ್ತದೆ. ಸತಿ ಪದ್ಧತಿ, ಬಾಲ್ಯ ವಿವಾಹ ಇನ್ನಿತರ ಹಲವಾರು ವಿಚಾರಗಳು ನಮ್ಮ ಸಾಂಪ್ರದಾಯಿಕ ರೀತಿ ರಿವಾಜುಗಳೇ ಆಗಿದ್ದವು. ಆದರೆ ಅವುಗಳನ್ನು ನಾವು ಮುಂದುವರಿಸಿಕೊಂಡು ಹೋಗಬೇಕೇ?

ಹಾಗೆಯೇ ಸಮಾಜದ ಬೆಳವಣಿಗೆಗೆ ಅಭಿವೃದ್ಧಿ ಕೂಡ ಬಹು ಮುಖ್ಯ ಅಂಗ. ಆದರೆ, ಕೆಲವು ಪ್ರದೇಶಗಳಿಂದ ಕಾರ್ಖಾನೆ, ದೊಡ್ಡ ಯೋಜನೆಗಳನ್ನು ದೂರವಿಡುವುದೇ ಒಳಿತು. ಉದ್ದಿಮೆಗಳ ಹೆಸರಿನಲ್ಲಿ ನಮ್ಮಲ್ಲಿರುವ ಕಾಡು, ನದಿಗಳನ್ನು ಕಳೆದುಕೊಳ್ಳುವುದು ಸಮೀಪ ದೃಷ್ಟಿಯ ಅಭಿವೃದ್ಧಿಯಾಗುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಗೊಂದಲ

ಇಂದು ಭೂಮಿಯೆನ್ನುವುದು ಅತೀ ಬೆಲೆಯುಳ್ಳ ಪದಾರ್ಥವಾಗಿದೆ. ಖಾಸಗಿ ಉದ್ದಿಮೆದಾರರು ಬೃಹತ್ ಕಾರ್ಖಾನೆಗಳ ಸ್ಥಾಪನೆಗೆ ಸ್ವಾಧೀನ ಪಡಿಸಿಕೊಳ್ಳುತ್ತಿರುವುದು ರೈತರ ಕೃಷಿಭೂಮಿಯನ್ನೇ. ಶಿರಾಡಿ, ಸುಬ್ರಹ್ಮಣ್ಯ, ಚಾರ್ಮಾಡಿ ಪ್ರದೇಶಗಳಲ್ಲಿ ಇಲ್ಲಿಯವರೆಗೆ ಅಳವಡಿಸಿರುವ ಯೋಜನೆಗಳಿಗೆ ಹೆಚ್ಚಾಗಿ ಸರ್ಕಾರಿ, ಅದರಲ್ಲೂ ಅರಣ್ಯ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇನ್ನು ಮುಂದೆ ಬರುವ ಹಲವು ಯೋಜನೆಗಳನ್ನು ರೈತರ ಭೂಮಿಗಳಲ್ಲಿ ಅಳವಡಿಸುವ ವಿಚಾರದಲ್ಲಿ ಅನುಮಾನವೇ ಇಲ್ಲ. ಈಗಾಗಲೇ ಅನಿಲ ಕೊಳವೆಗಾಗಿ ಭೂಸ್ವಾಧೀನದ ವಿಚಾರ ಎಲ್ಲರಿಗೂ ತಿಳಿದಿರುವ ವಿಷಯವೇ.

ರೈತರ ಕೃಷಿಭೂಮಿಯನ್ನು ಸ್ವಾಧೀನ ಪಡಿಸುವುಕೊಳ್ಳುವುದಕ್ಕೆ ಹಲವಾರು ವಾಣಿಜ್ಯೋದ್ಯಮಿಗಳು ಹಾತೊರೆಯುತ್ತಿದ್ದಾರೆ. ಅಣ್ಣಾ ಹಜಾರೆಯವರಂತಹ ಪ್ರತಿಭಟನೆಗಳನ್ನು ನಡೆಸಿ ಸರ್ಕಾರದ ಗಮನ ಸೆಳೆಯುವುದು ಪ್ರತಿಬಾರಿಯು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಹಲವಾರು ಯೋಜನೆಗಳಿಗೆ ಭೂಸ್ವಾಧೀನದ ಪ್ರಕ್ರಿಯೆ ಪ್ರಾರಂಭವಾಗಬಹುದು. ಅರಣ್ಯ ಮತ್ತು ಕೃಷಿ ಭೂಮಿಯನ್ನು ಕಳೆದುಕೊಂಡರೆ ಆಗುವ ನೇರ ಮತ್ತು ಪರೋಕ್ಷ ಪರಿಣಾಮಗಳು ಹಲವಾರು.

ಗಾಳಿಯ ಹಾಗೆ ನೀರು ಸಹ ಮನುಷ್ಯ, ಪ್ರಾಣಿಗಳೆಲ್ಲರಿಗೂ ಅತೀ ಮುಖ್ಯವಾದ ಪದಾರ್ಥ. ದಕ್ಷಿಣ ಕನ್ನಡ ಜಿಲ್ಲೆಗೆ ನೀರು ತರುವ ನೇತ್ರಾವತಿ, ಕುಮಾರಧಾರ ಮತ್ತು ಅವುಗಳ ಉಪನದಿಗಳ ಅಡ್ಡವಾಗಿ ೪೪ ಕಿರು ಜಲವಿದ್ಯುತ್ (ಮಿನಿ-ಹೈಡಲ್) ಯೋಜನೆಗಳನ್ನು ಯೋಜಿಸಲಾಗಿದೆ. ಎಲ್ಲಾ ವಿದ್ಯುತ್ ಯೋಜನೆಗಳು ಕಾರ್ಯಗತಗೊಂಡರೆ ದಕ್ಷಿಣ ಕನ್ನಡ ಜಿಲ್ಲೆಗೆ ನದಿ, ತೊರೆಗಳಿಂದ ಒಂದು ಹನಿ ನೀರು ಸಿಗುವುದು ಅನುಮಾನ. ಅದರಲ್ಲೂ ಬೇಸಿಗೆಯಲ್ಲಿ ೪೪ ಅಣೆಕಟ್ಟುಗಳಿರುವ ನದಿಯಿಂದ ನೀರನ್ನು ಪ್ರತೀಕ್ಷಿಸುವುದು ಸಾಧ್ಯವೇ ಇಲ್ಲ. ಧರ್ಮಸ್ಥಳದಂತಹ ಧಾರ್ಮಿಕ ಸ್ಥಳಗಳ ಮೂಲಕ ಹರಿಯುವ ನೇತ್ರಾವತಿ ಇಂಗುವುದಂತೂ ನಿಜ.

ಈಗಾಗಲೇ ಹಾಸನ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ಕಿರು ಜಲವಿದ್ಯುತ್ ಯೋಜನೆಗಳಿಂದಾದ ಅರಣ್ಯ ನಾಶ ಹಾಗೂ ಅಣೆಕಟ್ಟು, ಸುರಂಗ, ಇನ್ನಿತರ ಕಾಮಗಾರಿಗಳ ಪರಿಣಾಮದಿಂದ ಆನೆಗಳು ಸ್ಥಳೀಯ ರೈತರ ಕೃಷಿಭೂಮಿಗೆ ಲಗ್ಗೆಯಿಡುವುದು ಅತೀ ಹೆಚ್ಚಾಗಿದೆ. ವನ್ಯಜೀವಿಧಾಮದ ಲಾಭಗಳನ್ನರಿತ ಕೃಷಿಕರು ತಮ್ಮ ಭೂಮಿಯನ್ನು ಸರ್ಕಾರವೇ ವನ್ಯಜೀವಿ ಸಂರಕ್ಷಣೆಗಾಗಿ ಸ್ವಾಧೀನಪಡಿಸಿಕೊಳ್ಳಬೇಕೆಂದು ಯಾಚಿಸಿದ್ದಾರೆ.

ಘಟ್ಟದಲ್ಲಿ ಹುಟ್ಟುವ ನೇತ್ರಾವತಿ ನದಿಯನ್ನು ಬಯಲು ಪ್ರದೇಶಕ್ಕೆ ತಿರುಗಿಸುವ ಪ್ರಯತ್ನವು ಹಲವು ವರ್ಷಗಳಿಂದ ಚರ್ಚೆಯಲ್ಲಿದೆ. ಯೋಜನೆ ಅನುಷ್ಠಾನಗೊಂಡರೆ ಕಾಲುವೆ ಮತ್ತು ಅಣೆಕಟ್ಟುಗಳಿಗಾಗಿ ಹಲವಾರು ರೈತರು ತಮ್ಮ ಜಮೀನನ್ನು ಬಿಟ್ಟುಕೊಡಬೇಕಾಗುತ್ತದೆ. ನೇತ್ರಾವತಿ ತಿರುವು ಯೋಜನೆ ಘಟ್ಟದ ಮೇಲೆ ಅನುಷ್ಠಾನಗೊಂಡರೂ ಅದರ ನೇರ ದುಷ್ಪರಿಣಾಮವಾಗುವುದು ಅದರ ಮೇಲೆ ಅವಲಂಬಿತವಾಗಿರುವ ಘಟ್ಟದ ಕೆಳಗಿನ ರೈತರು ಮತ್ತು ಕುಡಿಯುವ ನೀರಿಗಾಗಿ ನದಿ ನೀರನ್ನೇ ನಂಬಿರುವ ಜನಸಮಾನ್ಯರ ಮೇಲೆ.

ಭೂಸ್ವಾಧೀನ ಪ್ರಕ್ರಿಯೆಯನ್ನು ಕಾನೂನಿನಡಿಯಲ್ಲಿ ತಡೆಯಬೇಕೆಂದರೆ ಈಗಿರುವ ಕೆಲವು ರಕ್ಷಿತಾರಣ್ಯಗಳನ್ನು ವನ್ಯಜೀವಿಧಾಮದ ಭಾಗವಾಗಿ ಪರಿವರ್ತನೆಗೊಳಿಸುವುದು. ವನ್ಯಜೀವಿಧಾಮಗಳಲ್ಲಿ ಜನರ ದಿನನಿತ್ಯದ ಜೀವನಕ್ಕೆ ತೊಂದರೆಯಾಗದಿದ್ದರೂ ಅನಿಲ ಕೊಳವೆ, ದೊಡ್ಡ ಪ್ರಮಾಣದ ವಿದ್ಯುತ್ ಪ್ರಸರಣದ ತಂತಿಗಳು, ಗುಂಡ್ಯದಂತಹ ಬೃಹತ್ ಜಲವಿದ್ಯುತ್ ಯೋಜನೆ, ನೇತ್ರಾವತಿ ತಿರುವು ಯೋಜನೆ ಹೀಗೆ ಹಲವು ಯೋಜನೆಗಳಿಗೆ ಕಾನೂನಿನಡಿಯಲ್ಲಿ ಭೂಸ್ವಾಧೀನ ಪಡಿಸಿಕೊಳ್ಳುವುದು ಕಷ್ಟಸಾಧ್ಯ. ವನ್ಯಜೀವಿಧಾಮದ ವಿರುದ್ಧ ದನಿಯೆತ್ತಿರುವ ಹಲವು ವ್ಯಕ್ತಿಗಳು ಅನಿಲ ಕೊಳವೆ, ಕಿರುಜಲವಿದ್ಯುತ್ ಯೋಜನೆ, ಗುಂಡ್ಯ ಜಲವಿದ್ಯುತ್ ಯೋಜನೆಗಳಿಗಾಗಿ ರೈತರ ಜಮೀನು ಸ್ವಾಧೀನವಾಗುವ ಪರಿಸ್ಥಿತಿಯಿದ್ದರೂ ಅದರ ವಿರುದ್ಧ ದನಿಯೆತ್ತದಿರುವುದು ಆಶ್ಚರ್ಯ.

ಇಲ್ಲಿನ ಕೆಲವು ರಕ್ಷಿತಾರಣ್ಯಗಳು ವನ್ಯಜೀವಿಧಾಮವಾದರೆ ಮುಂಬರುವ ದಿನಗಳಲ್ಲಿ ಬೃಹತ್ ಉದ್ದಿಮೆಗಳಿಗೆ, ಖಾಸಗಿ ಜಲವಿದ್ಯುತ್ ಯೋಜನೆಗಳಿಗೆ ಅನುಮತಿ ನೀಡಲಾಗುವುದಿಲ್ಲವೆಂಬ ಅಳುಕು ಕೆಲವು ಅಧಿಕಾರಿಗಳಿಗಿರಬಹುದೇ?

ಹುಲಿ, ಆನೆಗಳನ್ನು ತಂದು ಬಿಡುವರೆ?

ಅರಣ್ಯ ಪ್ರದೇಶಗಳನ್ನು ವನ್ಯಜೀವಿಧಾಮಗಳನ್ನಾಗಿ ಮಾಡಿದರೆ ಅಲ್ಲಿ ಹುಲಿ, ಆನೆಗಳನ್ನು ಬೇರೆಡೆಯಿಂದ ತಂದು ಬಿಡಲಾಗುತ್ತದೆಯೆಂಬುದು ವಿಚಾರ ವಾಸ್ತವಕ್ಕೆ ಬಹು ದೂರ. ಊರಿಗೆ ವನ್ಯಜೀವಿಗಳು ಪ್ರವೇಶಿಸಿದರೆ ಅವುಗಳನ್ನು ಹಿಡಿದು ಕಾಡಿಗೆ ಬಿಡುವ ಸಂದರ್ಭಗಳಿರುವುದು ಹಲವು. ವನ್ಯಜೀವಿಧಾಮವೆಂದು ಘೋಷಣೆಯಾದೊಡನೆ, ಅಲ್ಲಿಗೆ ಇತರ ಪ್ರದೇಶಗಳಿಂದ ವನ್ಯಜೀವಿಗಳನ್ನು ತಂದು ಬಿಡುವ ಪದ್ಧತಿ ನಮ್ಮ ದೇಶದಲ್ಲಿಲ್ಲ, ಅದು ವೈಜ್ಞಾನಿಕವೂ ಅಲ್ಲ. ಮುಗ್ಧ ಜನರಿಗೆ ತಪ್ಪು ಮಾಹಿತಿ ನೀಡಿ ಅವರನ್ನು ಗೊಂದಲಗೊಳಿಸುವುದು ಸುಲಭದ ವಿಚಾರ ಮತ್ತು ಕೆಲವರಿಗೆ ಅದರಿಂದ ಲಾಭವಾಗುವುದು ಕೂಡ ಸತ್ಯ.

ಹಾಗೆಯೇ ನಿಮ್ಮ ಹಳ್ಳಿ ವನ್ಯಜೀವಿಧಾಮದೊಳಗೆ ಸೇರಿಸಲಾಗುತ್ತದೆಯೆಂದು ಹಾರುಸುದ್ದಿ ಹಬ್ಬಿಸಿ ಜನರಲ್ಲಿ ಕಸಿವಿಸಿ ಉಂಟಾಗುವುಂತೆ ಮಾಡುವುದು ಸೂಕ್ತವಲ್ಲ. ಕುಂಬಾರು, ಹರಿಹರಪಲ್ಲದಡ್ಕ, ಬಿಳಿನೆಲೆ, ಸಿರಿಬಾಗಿಲು, ನೆರಿಯ, ನಿಡ್ಲೆ, ಅರಿಸಿನಮಕ್ಕಿ, ಸುಬ್ರಹ್ಮಣ್ಯ, ಕಲ್ಮಕಾರು, ಶಿಶಿಲ ಹೀಗೆ ಹಲವಾರು ಊರಿಗಳಿಗೂ ಪ್ರಸ್ತಾಪಿಸಿದ ವನ್ಯಜೀವಿಧಾಮಕ್ಕೂ ಏನೂ ಸಂಬಂಧವಿಲ್ಲದಿದ್ದರೂ ಅಲ್ಲಿನ ಜನರನ್ನು ಸಂದಿಗ್ಧತೆಯಲ್ಲಿ ಸಿಲುಕುವಂತೆ ಸುದ್ದಿ ಹರಡಿಸಲಾಗಿದೆ. ಇದರಲ್ಲಿ ಕೆಲವು ಹಳ್ಳಿಗಳಂತೂ ಪ್ರಸ್ತಾಪಿಸಿರುವ ವನ್ಯಜೀವಿಧಾಮದಿಂದ ಹಲವು ಕಿಲೋಮಿಟರ್ ದೂರದಲ್ಲಿದೆ.

ಆದರೆ ಒಂದು ಮಾತಂತೂ ನಿಜ. ಪುಷ್ಪಗಿರಿ ವನ್ಯಜೀವಿಧಾಮಕ್ಕೆ ಕೆಲವು ರಕ್ಷಿತಾರಣ್ಯಗಳನ್ನು ಸೇರಿಸುವ ಪ್ರಸ್ತಾವನೆಗೆ ಸರ್ಕಾರವಿನ್ನೂ ಅನುಮೋದನೆ ನೀಡಿಲ್ಲ. ವನ್ಯಜೀವಿಧಾಮವಾದರೆ ಜನರಿಗಿರುವ ನೀರು, ಕೃಷಿಭೂಮಿಯ ಉಳಿವು ಹೀಗೆ ನೇರ ಮತ್ತು ಪರೋಕ್ಷ ಪ್ರಯೋಜನಗಳು ಹಲವು. ಒಳಿತುಗಳು ಈಗಿನ ಜನ ಹಾಗೂ ಅವರ ಮುಂದಿನ ಪೀಳಿಗೆಯವರಿಗೆ ಬೇಕು ಅಥವಾ ಬೇಡವೆನ್ನುವ ನಿರ್ಧಾರವನ್ನು ತೆಗೆದುಕೂಳ್ಳುವುದು ಅವರ ಅಧೀನದಲ್ಲಿದೆ. ಸರ್ಕಾರಕ್ಕೆ ಯಾರು ಏನೇ ಸಲಹೆ ಕೊಟ್ಟರೂ ಸಾರ್ವಜನಿಕರು ತಮ್ಮ ಪಾರಿಸರಿಕ ಭವಿಷ್ಯವನ್ನು ತಾವೇ ನಿರ್ಧರಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಜವಾಗಿ ವನ್ಯಜೀವಿಧಾಮದೊಳಗೆ ಬರುವ ಜನರು ವಿರೋಧಿಸಿದರೆ ಸರ್ಕಾರವು ಪ್ರದೇಶಗಳನ್ನು ಹೊರತುಪಡಿಸಿ ವನ್ಯಜೀವಿಧಾಮವನ್ನು ಘೋಷಿಸಬಹುದು. ಆದರೆ ಮುಂಬರುವ ದಿನಗಳಲ್ಲಿ ಜಲ, ನೆಲದ ರಕ್ಷಣೆಗೆ ಯಾವುದೇ ಕಟ್ಟು ನಿಟ್ಟಿನ ಕಾನೂನಿನ ರಕ್ಷಣೆ ಸಿಗುವುದು ಅನುಮಾನ.

ಈ ಲೇಖನದ ಪರಿಷ್ಕೃತ ಆವೃತ್ತಿ ದಿನಾಂಕ ೦೧-೧೦-೨೦೧೧ರಂದು ಉದಯವಾಣಿ ಪತ್ರಿಕೆಯಲ್ಲಿ ಪ್ರಕಟಿತವಾಗಿತ್ತು.

No comments:

Post a Comment