Tuesday, November 22, 2011

ವನ್ಯಜೀವಿ ಸಂರಕ್ಷಣೆಯೆಂಬ ಸೂಕ್ಷ್ಮ ವಲಯ

ನಾಗರಹೊಳೆಯ ಕಾಡಿನ ಬದಿಯಲ್ಲೇ ಕಟ್ಟುತ್ತಿರುವ ಇಂತಹ ಪ್ರವಾಸೋದ್ಯಮ ಉದ್ದಿಮೆಗಳಿಂದ ವನ್ಯಜೀವಿಗಳಿಗಾಗುವ ತೊಂದರೆಗಳನ್ನು ಪರಿಸರ ಸೂಕ್ಷ್ಮವಲಯದ ಘೋಷಣೆಯಿಂದ ತಡೆಯಬಹುದು.

ಇಂದು ವನ್ಯಜೀವಿ ಸಂರಕ್ಷಣೆ ಹಿಂದಿಗಿಂತಲೂ ಬಹು ಕ್ಲಿಷ್ಟ ಮತ್ತು ಸಮಸ್ಯಾತ್ಮಕವಾದ ವಿಚಾರವಾಗಿದೆ. ಹಿಂದೆ ಎಂದರೆ ಕೆಲವೇ ಕೆಲವು ವರ್ಷಗಳ ಮುಂಚೆ ಕೂಡ ಇದು ಇಷ್ಟು ಕಠಿಣವಾಗಿರಲಿಲ್ಲ. ವನ್ಯಜೀವಿ ಸಂರಕ್ಷಣೆಯ ಯಾವುದೇ ಸಣ್ಣ ಪ್ರಸ್ತಾವನೆಗೆ ಕೂಡ ಇಂದು ಉಗ್ರ ವಿರೋಧ ವ್ಯಕ್ತವಾಗುತ್ತದೆ. ಇದಕ್ಕೆ ಹಲವಾರು ಕಾರಣಗಳಿವೆ. ವನ್ಯಜೀವಿಧಾಮ, ರಾಷ್ಟ್ರೀಯ ಉದ್ಯಾನಗಳಿಂದ ಕೆಲವರಿಗೆ ನಿಜವಾಗಿಯೂ ತೊಂದರೆಯಾಗಿರುವುದು ಬಹು ಯುಕ್ತವಾದ ತರ್ಕ. ಆದರೆ ಇಂದು ಹೊಸ ಪ್ರಸ್ತಾವನೆಗಳಿಗೆ ನೈಜವಾಗಿ ಬಾಧಿತರು ವಿರೋಧಿಸುವುದಕ್ಕಿಂತ, ವನ್ಯಜೀವಿಧಾಮಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಪಟ್ಟಭದ್ರ ಹಿತಾಸಕ್ತಿ ಹೊಂದಿರುವವರು ಹಾಗೂ ಅವರಿಂದ ಪ್ರಚೋದನೆಗೊಂಡವರು ತಡೆಯೊಡ್ಡುವುದು ಹೆಚ್ಚು. ಇದನ್ನು ರಾಜಕೀಯ ಉದ್ದೇಶಗಳಿಗೆ ಉಪಯೋಗ ಪಡಿಸಿಕೊಳ್ಳುವ ನೈಪುಣ್ಯವನ್ನು ಕೂಡ ಕೆಲವರು ಕಂಡುಕೊಂಡಿದ್ದಾರೆ. ಇವರನ್ನು ವಿರೋಧಿಸಲು ವನ್ಯಜೀವಿಗಳಿಗೇನು ಮತ ಹಾಕುವ ಹಕ್ಕಿಲ್ಲವಲ್ಲ. ಇನ್ನು ವನ್ಯಜೀವಿ ಸಂರಕ್ಷಣೆಯಲ್ಲಿ ತೊಡಗಿರುವವರು ಅಲ್ಪಸಂಖ್ಯಾತರು, ಅವರ ಬೇಡಿಕೆಗೆ ಸಕಾರತ್ಮಕ ಮನ್ನಣೆ ಸಿಗುವುದು ಬಹು ವಿರಳ.

ಪರಿಸರಸೂಕ್ಷ್ಮ ವಲಯಗಳು ಕೇಂದ್ರ ಸರ್ಕಾರದ ಪರಿಸರ ಸಂರಕ್ಷಣಾ ಕಾಯಿದೆ ೧೯೮೬ರ ಪ್ರಕಾರ ವನ್ಯಜೀವಿಧಾಮ ಮತ್ತುರಾಷ್ಟ್ರೀಯ ಉದ್ಯಾನಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ವನ್ಯಜೀವಿ ಸಂರಕ್ಷಣೆಗೆ ಪೂರಕವಾದ ಚಟುವಟಿಕೆಗಳನ್ನು ಅನುಷ್ಟಾನಗೊಳಿಸಲು ದೇಶದ ಉಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಅರಣ್ಯ ಇಲಾಖೆ ಪರಿಸರಸೂಕ್ಷ್ಮ ವಲಯಗಳನ್ನು (ಇಕೋ-ಸೆನ್ಸಿಟಿವ್‌ಜ಼ೊನ್) ಗುರುತಿಸುತ್ತಿದೆ. ಮೂಲ ಯೋಜನೆಯಡಿಯಲ್ಲಿ ಇದು ವನ್ಯಜೀವಿಧಾಮ ಮತ್ತು ರಾಷ್ಟ್ರೀಯ ಉದ್ಯಾನಗಳ ಹತ್ತು ಕಿಲೋಮಿಟರ್ ಸುತ್ತಳತೆಯಲ್ಲಿ ಅನುಷ್ಟಾನಗೊಳಿಸುವ ಯೋಜನೆಯಿತ್ತಾದರೂ ಅದು ಕಾರ್ಯಸಾಧುವಲ್ಲದ ಕಾರಣ ಸ್ಥಾನಿಕವಾಗಿ ಅನುಕೂಲವಾಗುವ ಹಾಗೆ ಗುರುತಿಸುವ ಹಾಗೆ ನಿಯಮಾವಳಿ ಮಾಡಲಾಗಿದೆ.

ಈ ಪರಿಸರಸೂಕ್ಷ್ಮ ವಲಯಗಳಿಂದ ಸ್ಥಳೀಯರ ದಿನನಿತ್ಯದ ಜೀವನಕ್ಕೆ ತೊಡಕಾಗುತ್ತದೆಂಬ ಭಾವನೆಯಿಂದ ಕೆಲವು ಸ್ಥಳಗಳಲ್ಲಿಇದಕ್ಕೆ ಪ್ರತಿಕೂಲ ಅಭಿಪ್ರಾಯ ಮೂಡಿದೆ. ಬಹುಶಃ ಮಾಹಿತಿಯ ಪೂರ್ಣ ಅರಿವಿಲ್ಲದಾಗ ಹೀಗಾಗುವುದು ಸಹಜ. ಪರಿಸರಸೂಕ್ಷ್ಮ ವಲಯಗಳಲ್ಲಿ ಜನರು ಯಾವುದೇ ಕೃಷಿಯನ್ನು ಮುಂದುವರಿಸಲು ಸಾಧ್ಯವಿಲ್ಲ, ಕೃಷಿಗೆ ಬೇಕಾದ ನೀರನ್ನು ಕೊಳವೆಗುಂಡಿಗಳ ಮೂಲಕ ಪಡೆಯಲಾಗುವುದಿಲ್ಲ, ಹಳ್ಳಿಯ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದಿಲ್ಲ, ಮನೆ, ತೋಟಗಳಿಗೆ ವಿದ್ಯುತ್‌ಶಕ್ತಿ ಆಳವಡಿಸಲಾಗುವುದಿಲ್ಲ, ಹೀಗೆ ಹಲವು ಪ್ರಮುಖ ಅಭಿಪ್ರಾಯಗಳ ವದಂತಿ ಹಬ್ಬಿದೆ.

ಇತ್ತೀಚೆಗೆ ಗದಗ ಜಿಲ್ಲೆಯಲ್ಲಿ ರೈತರು ತಮ್ಮ ಬೇಸಾಯದ ಭೂಮಿಯನ್ನು ಉಕ್ಕಿನ ಕಾರ್ಖಾನೆಗೆ ಸ್ವಾಧೀನವಾಗುವುದನ್ನು ತಡೆಯಲು ಹರಸಾಹಸ ಪಡಬೇಕಾಯಿತು. ಆದರೆ ಬಂಡೀಪುರ, ನಾಗರಹೊಳೆ, ಬಿಳಿಗಿರಿರಂಗನಬೆಟ್ಟದಂತಹ ಪ್ರದೇಶದ ಆಸುಪಾಸಿನಲ್ಲಿ ರೈತರ ಭೂಮಿಯನ್ನು ಮುಂದೆ ಸ್ವಾಧೀನ ಪಡಿಸಿಕೊಳ್ಳುವುದು ಸುಲಭವಾಗುವುದಿಲ್ಲ. ಇದಕ್ಕೆ ಮುಖ್ಯವಾದ ಕಾರಣ, ಪರಿಸರಸೂಕ್ಷ್ಮ ವಲಯದ ನಿಯಮ ರೈತರ ಪರವಾಗಿರುವುದು.

ವನ್ಯಜೀವಿಧಾಮದ ಆಸುಪಾಸಿನಲ್ಲಿರುವ ರೈತರು ತಮ್ಮ ಕೃಷಿ ಭೂಮಿಯನ್ನು ಇಂದು ಹಾಗೂ ಮುಂದಿನ ಪೀಳಿಗೆಯವರಿಗೆ ಉಳಿಸಿಕೊಳ್ಳಲು ಪರಿಸರ ಸೂಕ್ಷ್ಮವಲಯಗಳು ಬಹು ಉಪಯೋಗಿ. ಈ ವಲಯಗಳಲ್ಲಿರುವ ಭೂಮಿಯನ್ನು ಯಾವುದೇ ದೊಡ್ಡ ಕಾರ್ಖಾನೆಗಳಿಗಾಗಿ ರೈತರಿಂದ ಸರ್ಕಾರ ಅಥವಾ ಖಾಸಗಿಯವರು ಸ್ವಾಧೀನಪಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ದೇಶದ ಹಲವೆಡೆ ಸರ್ಕಾರ ಮತ್ತು ರೈತರ ನಡುವೆ ಭೂಸ್ವಾಧೀನದ ವಿಚಾರದಲ್ಲಿ ಆಗುವ ಸೆಣೆಸಾಟ, ಕಲಹಗಳಿಗೆ ಪರಿಸರಸೂಕ್ಷ್ಮ ವಲಯಗಳು ತಡೆಯುತ್ತವೆ. ಆದ್ದರಿಂದ ಪರಿಸರಸೂಕ್ಷ್ಮ ವಲಯಗಳನ್ನು ಸ್ಥಳೀಯರು ತಮ್ಮ ಅನುಕೂಲಕ್ಕೆ ಉಪಯೋಗಿ ಪರಿಕರವಾಗಿ ಬಳಸಬಹುದಾಗಿದೆ.

ಹಾಗೆಯೇ ಹಲವು ವನ್ಯಜೀವಿಧಾಮಗಳ ಪಕ್ಕದಲ್ಲಿ ನಡೆಯುತ್ತಿರುವ ಬೆಣಚುಕಲ್ಲು ಗಣಿಗಾರಿಕೆಗಾಗಿ ಉಪಯೋಗಿಸುವ ಸ್ಪೋಟಕಗಳಿಂದ ಹೆಚ್ಚುತ್ತಿರುವ ಮಾನವ-ವನ್ಯಜೀವಿ ಸಂಘರ್ಷವನ್ನು ನಿರ್ವಹಿಸಲು ಕೂಡ ಪರಿಸರ ಸೂಕ್ಷ್ಮ ವಲಯಗಳು ಉಪಯುಕ್ತ. ಆನೆಯಂತಹ ವನ್ಯಜೀವಿಗಳಿಗೆ ಸಿಡಿಮದ್ದಿನ ಸ್ಪೋಟಕಗಳಿಂದಾಗುವ ಗುರುತರ ತೊಂದರೆಗಳು ಆಫ್ರಿಕಾ ದೇಶಗಳಲ್ಲಿ ಅಧ್ಯಯನಗಳಿಂದ ಸಾಬೀತಾಗಿದೆ. ಸ್ಪೋಟಕಗಳಿಂದಾಗಿ ಆನೆ ಹಾಗೂ ಇತರ ವನ್ಯಜೀವಿಗಳಿಂದ ಬೆಳೆ, ಜೀವ ಹಾನಿ ಹಾಗೂ ಇತರ ತೊಂದರೆಗಳು ಹೆಚ್ಚುವ ಸಾಧ್ಯತೆಗಳಿವೆ. ಪರಿಸರಸೂಕ್ಷ್ಮ ವಲಯಗಳಲ್ಲಿ ವನ್ಯಜೀವಿಗಳು ಮತ್ತು ಮಾನವನಿಗೆ ಕಗ್ಗಂಟಾಗಿರುವ ಗಣಿಗಾರಿಕೆಯಂತಹ ಉದ್ಯಮಗಳಿಗೆ ಅವಕಾಶವಿರುವುದಿಲ್ಲ. ಇದು ರೈತರಿಗೆ ಬೆಳೆಹಾನಿಯನ್ನು ಕಡಿಮೆಗೊಳಿಸಲು ಉಪಯೋಗೀ ಸಾಧನವಾಗಬಹುದು.

ನಗರ ಪ್ರದೇಶಗಳಲ್ಲಿ ಸಣ್ಣಪುಟ್ಟ ಕಿರಾಣಿ ಅಂಗಡಿಗಳ ಭವಿಷ್ಯ ದೊಡ್ಡ ವಾಣಿಜ್ಯ ಉದ್ದಿಮೆಗಳಿಂದ ಅಪಾಯದಲ್ಲಿವೆ. ಭವಿಷ್ಯದಲ್ಲಿ ಕೃಷಿಗೆ ಸಹ ಇದೇ ತರಹದ ವಾಣಿಜ್ಯೋದಮಿಗಳು ಹೆಜ್ಜೆ ಇಟ್ಟರೆ ಚಿಕ್ಕ ಹಿಡುವಳಿದಾರರು ಜಮೀನನ್ನು ಅವರಿಗೆ ಬಿಟ್ಟುಕೊಡಬೇಕಾಗುತ್ತದೆ. ಆದ್ದರಿಂದ ಪರಿಸರ ಸೂಕ್ಷ್ಮವಲಯಗಳಲ್ಲಿ ಕೃಷಿ ಭೂಮಿಯನ್ನು ಬೃಹತ್‌ಗಾತ್ರದ ವಾಣಿಜ್ಯ ಕೃಷಿಗೆ ಭೂ ಪರಭಾರಿಕೆ ಮಾಡುವುದನ್ನು ಕೆಲವು ವಲಯಗಳಲ್ಲಿ ತಡೆಹಿಡಿಯಬೇಕೆಂದು ಯೋಜಿಸಲಾಗಿದೆ. ದಕ್ಷಿಣ ಅಮೇರಿಕಾದಲ್ಲಿ ಸೋಯಾ ಬೆಳೆಯಲು, ಇಂಡೊನೇಷ್ಯ, ಮಲೇಷ್ಯದಂತಹ ದಕ್ಷಿಣ ಈಶಾನ್ಯ ದೇಶಗಳಲ್ಲಿ, ತಾಳೆ ಎಣ್ಣೆಯಂತಹ ಏಕಫಸಲಿನ ಕೃಷಿ ಮಾಡಲು ಸ್ಥಳೀಯ ರೈತರು ದೊಡ್ಡ ಉದ್ದಿಮೆದಾರರಿಗೆ ಜಮೀನು ಕಳೆದುಕೊಂಡ ವಿಚಾರ, ವನ್ಯಜೀವಿ ಹಾಗೂ ಕೃಷಿಕರಿಗಿಬ್ಬರಿಗೂ ಇಂದು ಕಷ್ಟದ ಪರಿಸ್ಥಿತಿ ತಂದಿದೆ.

ಪರಿಸರಸೂಕ್ಷ್ಮ ವಲಯದ ಖಾಸಗಿ ಜಮೀನಿನಲ್ಲಿ ಸಹ ಮರ ಕಡಿಯಲಾಗುವುದಿಲ್ಲವೆಂಬ ಅನುಮಾನವಿದೆ. ಆದರೆ ದಿಟವೇನೆಂದರೆ ಕರ್ನಾಟಕ ಅರಣ್ಯ ಕಾಯಿದೆ ೧೯೬೩ ಮತ್ತು ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯಿದೆ ೧೯೭೬ರ ಪ್ರಕಾರ, ಖಾಸಗಿ ಜಮೀನಿನಲ್ಲಿ ನಾಟಾ ತೆಗೆಯಲು ಅವಕಾಶವಿದೆ. ಹಾಗೆಯೇ ಕೊಳವೆಬಾವಿ, ಮನೆ ಅಥವಾ ಕೃಷಿ ಭೂಮಿಗೆ ವಿದ್ಯುತ್ಶ್‌ಕ್ತಿ, ಹಳ್ಳಿಯ ರಸ್ತೆಯನ್ನು ಸರಿಪಡಿಸುವುದಕ್ಕೆ ಯಾವುದೇ ಕಾನೂನು ಅಡೆತಡೆಗಳಿರುವುದಿಲ್ಲ. ಆದರೆ ಪರಿಸರಸೂಕ್ಷ್ಮ ವಲಯದಲ್ಲಿ ದೊಡ್ಡ ಉದ್ದಿಮೆದಾರರು ಅಲ್ಲಿರುವ ಕೊಳವೆಬಾವಿಗಳಿಂದ ನೀರು ತೆಗೆದು ಸೀಸೆಯಲ್ಲಿ ತುಂಬಿ ಮಾರುವ ಘಟಕಗಳಿಗೆ (ಮಿನರಲ್ ವಾಟರ್ ಅಥವಾ ಸೋಡ ಪೇಯದಂತಹ ಘಟಕಗಳು) ನೀತಿ, ನಿಯಮಗಳ ತೊಡಕಾಗುತ್ತದೆ. ಇದು ಬಹುಶಃ ಉತ್ತಮವಾದ ಹೆಜ್ಜೆ, ಇಲ್ಲವಾದಲ್ಲಿ ಸ್ಥಳೀಯ ಕೃಷಿಕರ ಬಾವಿ, ಕೊಳವೆಬಾವಿಗಳೆಲ್ಲ ಕೆಲವೇ ಕೆಲವರ ಲಾಭಕ್ಕಾಗಿ ಬತ್ತಿ ಹೋಗುತ್ತವೆ. ಕೇರಳದಲ್ಲಿ ಇಂತಹ ಕೆಲವು ಬಹುರಾಷ್ಟ್ರೀಯ ಉದ್ಯಮಗಳ ವಿರುದ್ಧ ಹಲವಾರು ಗ್ರಾಮ ಪಂಚಾಯಿತಿಗಳು ಹೋರಾಡುತ್ತಿವೆ.

ಪರಿಸರಸೂಕ್ಷ್ಮ ವಲಯದಲ್ಲಿ ಸ್ಥಳೀಯರ ಯಾವುದೇ ಜೀವನೋಪಾಯದ ವಿಚಾರವಾಗಿ ಅಡ್ಡಿಯಾಗದು. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಕೂಡ ಸ್ಪಷ್ಟೀಕರಣ ನೀಡಿದೆ. ಕಾನೂನಿನ ತೊಡಕಾಗುವುದು ವನ್ಯಜೀವಿಗಳಿಗೆ ಹಾನಿಕರವಾದ ಹೊಸ ರೆಸಾರ್ಟ್ ಯೋಜನೆಗಳು, ವನ್ಯಜೀವಿಧಾಮಗಳ ಬದಿಯಲ್ಲಿಯೇ ಗಣಿಗಾರಿಕೆ, ಬೃಹತ್ ಕೈಗಾರಿಕೆಗಳು, ಕಾಡು ಮತ್ತು ಜನವಸತಿ ಪ್ರದೇಶಗಳ ಮುಳುಗಡೆಗೆ ಅವಕಾಶವಾಗುವ ನೀರಾವರಿ ಯೋಜನೆಗಳು, ಆನೆಯಂತಹ ದೊಡ್ಡ ಪ್ರಾಣಿಗಳ ವಲಸೆಗೆ ಅಡ್ಡಿಯಾಗುವಂತಹ ಯೋಜನೆಗಳಿಗೆ ಮಾತ್ರ.

ಬಹು ಮುಖ್ಯವಾಗಿ ಕರಡು ಪ್ರಕಟಣೆಗೆ ಸ್ಥಳೀಯರು ತಮ್ಮ ಅಭಿಪ್ರಾಯ, ಆಕ್ಷೇಪಣೆಗಳನ್ನು ನೇರವಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬಹುದಾಗಿದೆ. ಸರ್ಕಾರಕ್ಕೆ ಬಂದ ಎಲ್ಲಾ ಆಕ್ಷೇಪಣೆಗಳನ್ನು ಗಮನಕ್ಕೆ ತೆಗೆದುಕೂಂಡು ಸೂಕ್ತ ಪರಿಹಾರದ ನಂತರವೇ ಅಂತಿಮ ಅಧಿಸೂಚನೆ ಹೊರಡಿಸುವುದಕ್ಕೆ ಸಾಧ್ಯ. ಹಾಗಾಗಿ ಕರಡು ಪ್ರಕಟಣೆಗೆ ವಿರೋಧಿಸುವ ಬದಲು ಸ್ಥಳೀಯರೇ ತಮಗೆ ಬೇಕಾದ ಅಥವಾ ಬೇಡವಾದ ವಿಚಾರಗಳನ್ನು ಬರವಣಿಗೆಯಲ್ಲಿ ವ್ಯಕ್ತಪಡಿಸುವುದು ಅತೀ ಸೂಕ್ತವೆನಿಸುತ್ತದೆ.

ಇಲ್ಲವಾದಲ್ಲಿ ಕೆಲವೇ ಕೆಲವರ ವದಂತಿಗಳಿಗೆ ಜನರು ಬಲಿಪಶುವಾಗಬೇಕಾಗುತ್ತದೆ. ಉದಾಹರಣೆಗೆ ಬಂಡೀಪುರದ ಸುತ್ತಮುತ್ತಲಿನ ಪ್ರದೇಶದ ಜನರಿಗೆ ತಪ್ಪುದಾರಿಗೆಳೆಯುತ್ತಿರುವಲ್ಲಿ, ರೆಸಾರ್ಟ್ ನಿರ್ಮಾಣ ಮತ್ತು ವಿಹಾರಧಾಮಗಳಿಗೆ ಜಮೀನು ಕೊಡಿಸುವ ದಲ್ಲಾಳಿಯೊಬ್ಬರು ಪ್ರಮುಖ ಪಾತ್ರವಹಿಸಿರುವುದು ಗಮನಿಸಿದರೆ ಅವರು ವಿರೋಧಿಸುತ್ತಿರುವ ಕುಚೋದ್ಯ ಅರ್ಥವಾಗುತ್ತದೆ. ಅವರೊಡನೆ ಹುಲಿ ಚರ್ಮ ಮಾರಾಟ ಮಾಡಲು ಹೋಗಿ ಸಿಕ್ಕಿಬಿದ್ದು ನ್ಯಾಯಾಲಯ ಅಲೆಯುತ್ತಿರುವ ವ್ಯಕ್ತಿಯೊಬ್ಬರು ಕೂಡಾ ಸೇರಿರುವುದು ನೋಡಿದರೆ ಇವರ ಹೋರಾಟದ ಹಿಂದಿನ ಮರ್ಮ ಅರ್ಥವಾಗುತ್ತದೆ.

ನಾವೆಲ್ಲರೂ ವನ್ಯಜೀವಿ ಸಂರಕ್ಷಣೆಯನ್ನು ನೋಡುವ ದೃಷ್ಟಿಕೋನ ಬೇರೆಯಿರುತ್ತದೆ. ದೂರದ ಊರಿನಲ್ಲಿರುವ ನನ್ನಂತಹ ವನ್ಯಜೀವಿ ಸಂರಕ್ಷಕರಿಗೆ ಹುಲಿ, ಆನೆ, ಚಿರತೆ, ಕಾಟಿ, ಇನ್ನಿತರ ಪ್ರಾಣಿ, ಪಕ್ಷಿಗಳು ಉಳಿವನ್ನು ನಮ್ಮ ನಿರ್ದಿಷ್ಟ ಕೋನದಿಂದ ನೋಡುತ್ತೇವೆ. ವನ್ಯಜೀವಿ ಸಂರಕ್ಷಣೆಯಿಂದ ಬಾಧಿತರಾದವರು ಇದೇ ವಿಷಯವನ್ನು ಅವರದೇ ಮನೋಭಾವದಿಂದ ನೋಡುತ್ತಾರೆ. ಆದರೆ ವನ್ಯಜೀವಿ, ಕಾಡನ್ನು ಸಂರಕ್ಷಿಸಿ ಆಗುವ ಉಪಯೋಗಗಳು ಬಹುಶಃ ಪ್ರವಾಸೋದ್ಯಮದ ಮೂಲಕ ಸ್ಥಳೀಯರಿಗೊದಗುವ ಕೆಲವು ಕೆಲಸಗಳನ್ನು ಹೊರತುಪಡಿಸಿ ಇನ್ನ್ಯಾವುದೇ ಲಾಭವು ಕಾಣುವುದಿಲ್ಲ. ಆದರೆ ಅದರಿಂದಇರುವ ಪರೋಕ್ಷವಾದ ಪ್ರಯೋಜನಗಳು ಹಲವಾರು, ಅದಕ್ಕಾಗಿಯಾದರೂ ನಾವು ಪರಿಸರಸೂಕ್ಷ್ಮ ವಲಯಗಳನ್ನು ಬೆಂಬಲಿಸಬೇಕಾಗುತ್ತದೆ. ಇದರ ಸಾರ್ಥಕತೆ ನಮಗಲ್ಲದಿದ್ದರೂ ನಮ್ಮ ಮುಂದಿನ ಪೀಳಿಗೆಯವರಿಗಾದರೂ ಒಳಿತಾಗುತ್ತದೆ.

ಈ ಲೇಖನದ ಪರಿಷ್ಕೃತ ಆವೃತ್ತಿ ದಿನಾಂಕ ೨೨-೧೧-೨೦೧೧ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.
http://www.prajavani.net/web/include/story.php?news=2730&section=30&menuid=14

2 comments:

  1. This comment has been removed by the author.

    ReplyDelete
  2. ಇಲ್ಲಿರುವ ಎಲ್ಲದನ್ನು ಪ್ರಕಟಿಸಿದ್ದರೆ, ತುಂಬಾ ಜನರಿಗೆ ಏಕೋ ಸೆನ್ಸಿಟಿವ ಜೊನ್ ಬಗೆಗಿರುವ ತಪ್ಪು ಕಲ್ಪನೆಗಳೆಲ್ಲ ಮಾಯವಾಗುತ್ತಿದ್ದವು. ಧನ್ಯವಾದಗಳು.

    ReplyDelete