Monday, May 28, 2012

ಒಂದು ಅನನುಕೂಲ ಸತ್ಯ


ಮಹಾರಾಷ್ಟ್ರದ ಚಂದ್ರಾಪುರದ ಕಾಡುಗಳಲ್ಲಿ ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಎರಡು ಹುಲಿಗಳು ದವಡೆಕತ್ತರಿಯಲ್ಲಿ(ಜಾಟ್ರಾಪ್) ಸಿಕ್ಕಿದ ಪ್ರಕರಣ ಅರಣ್ಯ ಇಲಾಖೆಯ ಗಸ್ತು ತಿರುಗುತ್ತಿದ್ದ ಸಿಬ್ಬಂದಿಗಳಿಂದ ತಿಳಿಯಿತು. ಇದರಲ್ಲಿ ಹುಲಿಯೊಂದು ಸ್ಥಳದಲ್ಲೇ ಮರಣ ಹೊಂದಿತ್ತು. ಇನ್ನೊಂದು ನಾಗಪುರದ ವನ್ಯಜೀವಿ ಪುನಶ್ಚೇತನಾ ಕೇಂದ್ರದಲ್ಲಿ ಎರಡೂ ಮೂತ್ರಪಿಂಡಗಳು ಹಾನಿಗೊಳಗಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದೆ. ನಾಗರಹೊಳೆಯ ಉತ್ತರದಲ್ಲಿರುವ ದೊಡ್ಡಹರವೆ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಹೋದ ತಿಂಗಳು ಸ್ಥಳೀಯ ವ್ಯಕ್ತಿಯೂಬ್ಬನು ಹುಲಿ ಬೇಟೆಯಾಡಿ ಪೋಲಿಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಇದೇ ತಿಂಗಳು ಹಿಮಾಚಲ ಪ್ರದೇಶದಲ್ಲಿ ೨೨ ವರ್ಷದ ಬಾಕ್ಸಿಂಗ್ ಕ್ರೀಡಾ ತರಬೇತುದಾರನೊಬ್ಬನಿಂದ ಮೂರು ಚಿರತೆ ಚರ್ಮಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಇದೇ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಹುಲಿ ಚರ್ಮ, ಮತ್ತೊಂದು ಚಿರತೆ ಚರ್ಮವನ್ನು ವಶಪಡಿಸಿಕೊಂಡರು. ಎರಡು ದಿನಗಳ ಹಿಂದೆಯಷ್ಟೇ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಂಕಾಕ್‌ಗೆ ತೆರಳುತ್ತಿದ್ದ ಪ್ರಯಾಣಿಕನೊಬ್ಬನಿಂದ ೪೮೩ ನಕ್ಷತ್ರ ಆಮೆಗಳನ್ನು ವಶಪಡಿಸಿಕೊಂಡರು. ವನ್ಯಜೀವಿಗಳ ಬೇಟೆ ಮತ್ತು ವ್ಯಾಪಾರದ ಪ್ರಕರಣಗಳ ಪಟ್ಟಿ ಉದ್ದವಾಗುತ್ತಲೇ ಇದೆ.

ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು ೨೭೦ಕ್ಕೂ ಹೆಚ್ಚು ವನ್ಯಜೀವಿ ಬೇಟೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಂದರೆ, ಸುಮಾರು ನಾಲ್ಕು ದಿನಗಳಿಗೊಮ್ಮೆ ಕರ್ನಾಟಕದಲ್ಲಿ ವನ್ಯಜೀವಿ ಬೇಟೆ ದಾಖಲಾಗುತ್ತಿದೆ. ದಾಖಲಾಗುವುದು ಇಷ್ಟಾದರೆ ಪತ್ತೆಯಾಗದವು ಇನ್ನೆಷ್ಟೋ? ಮಾಧ್ಯಮಗಳಲ್ಲಿ ಕೂಡ ವನ್ಯಜೀವಿ ಬೇಟೆಯ ಸುದ್ದಿಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಈ ಎರಡೂ ಸಂಕೇತಗಳು ವನ್ಯಜೀವಿಗಳ ಬೇಟೆ ಹೆಚ್ಚಾಗುತ್ತಿರುವುದನ್ನು ತೋರಿಸುತ್ತಿರಬಹುದು.

ಆದರೆ, ಅನಾದಿ ಕಾಲದಿಂದಲೂ ನಮ್ಮ ನಾಡಿನಲ್ಲಿ ಜನ ಅನೇಕ ಕಾರಣಗಳಿಗೆ ಬೇಟೆಯಾಡುವುದು ಪದ್ಧತಿ. ಆಹಾರಕ್ಕೆ, ಮೋಜಿಗೆ, ಧರ್ಮದ ಹೆಸರಿನಲ್ಲಿ, ವ್ಯಾವಹಾರಿಕ ದೃಷ್ಟಿಯಿಂದ, ಹೀಗೆ ಕಾರಣಗಳು ಹಲವಾರು. ಹಿಂದೆ ಜನ, ಜಾನುವಾರು ಮತ್ತು ಬೆಳೆ ಸಂರಕ್ಷಣೆಗಾಗಿ ಕೂಡ ಈಡುಗಾರರು ಬೇಟೆಯಾಡುತ್ತಿದ್ದರು. ಅದೊಂದು ಸಾಮಾಜಿಕ ಜವಾಬ್ದಾರಿಯೆಂದೇ ತಿಳಿದಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೊಕಿನ ಬಡ್ಡಡ್ಕ ಅಪ್ಪಯ್ಯ ಗೌಡರು ಈ ವಿಚಾರದಲ್ಲಿ ಪ್ರತಿಷ್ಠಿತರು. ಹಾಗೆಯೇ ಬೆಂಗಳೂರಿನ ಕೆನೆತ್ ಆಂಡರ್‌ಸನ್, ಕೊಡಗಿನ ನರಿಬೊಡಿ ಚಂಗಪ್ಪ ಹೀಗೆ ಹಲವರು ರಾಜ್ಯದ ಪ್ರಖ್ಯಾತ ಈಡುಗಾರರು. ಹಾಗಾದರೆ ಈಗ ಬೇಟೆ ಹೆಚ್ಚುತ್ತಿದೆ ಎನ್ನುವುದರಲ್ಲಿ ವಿಶೇಷವೇನು? ಕೆಲ ಜನ ಆಹಾರಕ್ಕಾಗಿ ಬೇಟೆಯಾಡುತ್ತಾರಲ್ಲವೆ?

ವ್ಯತ್ಯಾಸವೆಂದರೆ ಈಗ ನಮ್ಮ ಜನಸಾಂದ್ರತೆ ಅತೀ ಹೆಚ್ಚಾಗಿದೆ ಹಾಗೂ ಇದ್ದ ಅರಣ್ಯ ಪ್ರದೇಶ ಕುಗ್ಗುತ್ತಿದೆ. ಮಧ್ಯ ಆಫ್ರಿಕಾ ದೇಶಗಳು ಅಥವಾ ದಕ್ಷಿಣ ಅಮೇರಿಕಾದ ಕೆಲ ದೇಶಗಳಲ್ಲಿದ್ದ ಅತೀ ಕಡಿಮೆ ಜನಸಾಂದ್ರತೆಯಿರುವ ಕಾಡುವಾಸಿಗಳ ಹಾಗಿಲ್ಲ ನಮ್ಮ ಕಾಡು ಮತ್ತು ಅವುಗಳ ಸುತ್ತಮುತ್ತಲಿರುವ ಪ್ರದೇಶಗಳು. ಅಲ್ಲಿ ಪ್ರತೀ ಚದರ ಕಿಲೋಮಿಟರ್‌ನಲ್ಲಿ ಒಬ್ಬರಿಗಿಂತ ಕಡಿಮೆ ಜನವಾಸ್ತವ್ಯವಿದ್ದರೆ ನಮ್ಮ ದೇಶದಲ್ಲಿ ಕಾಡಿನ ಸುತ್ತಮುತ್ತಲೂ ಚದರ ಕಿಲೋಮಿಟರ್‌ನಲ್ಲಿ ೩೦೦ಕ್ಕೂ ಹೆಚ್ಚು ಜನರಿದ್ದಾರೆ. ಕಾಡಿನೊಳಗಾದರೂ ಜನ ಸಂಖ್ಯೆ ಕಡಿಮೆಯಿದೆಯೆ? ಅಲ್ಲೂ ಕೂಡ ವನ್ಯಜೀವಿಗಳು ಬೇಟೆಯನ್ನು ತಡೆದುಕೊಳ್ಳಲಾರದಷ್ಟು ಹೆಚ್ಚು ಜನಸಾಂದ್ರತೆಯಿದೆ. ಬೇಟೆಯ ಬಗ್ಗೆ ಅಧ್ಯಯಿಸಿರುವ ವನ್ಯಜೀವಿ ವಿಜ್ಞಾನಿಗಳ ಪ್ರಕಾರ, ಚದರ ಕಿಲೋಮಿಟರ್ ಪ್ರದೇಶದಲ್ಲಿ ಒಬ್ಬರಿಗಿಂತ ಹೆಚ್ಚು ಜನಸಾಂದ್ರತೆಯಿದ್ದಲ್ಲಿ ಅಲ್ಲಿ ಬೇಟೆ, ತಾಳಿಕೆಯ ಮಟ್ಟವನ್ನು ಮೀರಿ ಅಸರ್ಮರ್ಥಿತವಾಗುತ್ತದೆ. ಈ ಪ್ರದೇಶಗಳಲ್ಲಿ ವನ್ಯಜೀವಿಗಳು ನಶಿಸುವುದು ಖಡಾಖಂಡಿತ. ನಮ್ಮಲ್ಲೀಗ ಆಹಾರಕ್ಕಾಗಿ ಬೇಟೆಯಾಡುವ ಪರಿಸ್ಥಿತಿ ಬಹುಶ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಕೆಲ ಅರಣ್ಯವಾಸಿ ಸಮುದಾಯಗಳಿಗೆ ಬಿಟ್ಟರೆ ಇನ್ನ್ಯಾರಿಗೂ ಅದರ ಅವಶ್ಯಕತೆಯಿಲ್ಲ.

ಈಗಿನ ಬೇಟೆ ಎರಡು ಮುಖ್ಯ ಕಾರಣಗಳಿಗಾಗಿ ಆಗುತ್ತಿದೆ. ಕೆಲವರು ಮಾಂಸದ ರುಚಿಗಾಗಿ ಬೇಟೆಯಾಡುತ್ತಿದ್ದರೆ, ಇನ್ನಿತರರು ವನ್ಯಜೀವಿಗಳ ದೇಹದ ಭಾಗಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿರುವ ಬೇಡಿಕೆಯ ಪೂರೈಕೆಗೆ ವನ್ಯಜೀವಿಗಳನ್ನು ಕೊಲ್ಲುತ್ತಾರೆ. ದೇಶದ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುತ್ತಿದ್ದಂತೆ ಬೇಟೆಯಂತಹ ಸಮಾಜ ವಿರೋದಿ ಚಟುವಟಿಕೆಗಳು ಕಡಿಮೆಯಾಗಬೇಕಲ್ಲವೇ? ಆದರೆ ದುರಾದೃಷ್ಟವಶಾತ್ ಇದು ತಿರುಗುಮುರುಗಾಗಿದೆ. ವನ್ಯಜೀವಿಗಳ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದೆ. ಹಾಗೆಯೇ ದಕ್ಷಿಣ ಈಶಾನ್ಯ ದೇಶಗಳ ಆರ್ಥಿಕ ಮುನ್ನೆಡೆಯಿಂದಾಗಿ ನಮ್ಮದೇಶದ ವನ್ಯಜೀವಿಗಳ ಮೇಲೆ ಅತೀವ ಒತ್ತಡ ಬೀಳುತ್ತಿದೆ. ಫ್ರೀಟ್ರೇಡ್ನಿಂದಾಗಿ ದೇಶದಿಂದ ದೇಶಗಳಿಗೆ ಅಧಿಕೃತವಾಗಿ ಹಾಗೂ ಅನಧಿಕೃತವಾಗಿ ಸಾಮಾನು ಸರಂಜಾಮುಗಳನ್ನು ಸಾಗಿಸುವುದು ಅಷ್ಟೇನೂ ದೊಡ್ಡ ವಿಷಯವಾಗುಳಿದಿಲ್ಲ. ಈಗ ದಿನನಿತ್ಯದ ವಸ್ತುಗಳೊಡನೆ ವನ್ಯಜೀವಿಗಳ ವ್ಯಾಪಾರ ಸರಾಗವಾಗಿ ನಡೆಯುತ್ತಿದೆ.

ಕಳ್ಳದಂಧೆಗಾಗಿ ಹಿಂದೆ ಹೆಚ್ಚಾಗಿ ಬೇಟೆಯಾಗುತ್ತಿದ್ದದ್ದು ಹುಲಿ, ಚಿರತೆ, ನೀರುನಾಯಿಗಳ ಚರ್ಮ ಮತ್ತು ಅವುಗಳ ಮೂಳೆ, ಹಲ್ಲು, ಮೀಸೆ, ಉಗುರುಗಳಿಗಾಗಿ. ಆದರೆ ಇತ್ತೀಚಿನ ಬೆಳವಣಿಗೆಯಲ್ಲಿ ವಿನಾಶದ ಅಂಚಿನಲ್ಲಿರುವ ವನ್ಯಜೀವಿ ಪ್ರಭೇದಗಳೊಂದಿಗೆ ಕೆಲವು ಸಾಮಾನ್ಯವಾಗಿ ಕಂಡು ಬರುವ ಪ್ರಭೇದಗಳನ್ನು ಸಹಾ ವಾಣಿಜ್ಯೋದ್ದೇಶಕ್ಕಾಗಿ ಬೇಟೆಯಾಡುತ್ತಿರುವುದು ಅಘಾತಕಾರಿ. ಗೂಬೆ, ಎರಡು ತಲೆ ಹಾವು, ಮೃದುಚಿಪ್ಪಿನ ಆಮೆ, ಚಿಪ್ಪುಹಂದಿ, ಇನ್ನಿತರ ವನ್ಯಜೀವಿಗಳ ವ್ಯಾಪಕ ಮಾರಾಟ ದಂಧೆ ಪ್ರಾರಂಭವಾಗಿದೆ.

ವನ್ಯಜೀವಿಗಳ ದೇಹದ ಭಾಗಗಳಿಗೆ ಹೆಚ್ಚಾಗಿರುವ ಬೇಡಿಕೆ ಒಂದು ಕಾರಣವಾದರೆ, ಎರಡನೆಯದು ನಮ್ಮ ಅರಣ್ಯ ಸಂರಕ್ಷಣೆ, ಅತೀ ಕ್ಲಿಷ್ಟವಾದ ಮಾನವ-ವನ್ಯಜೀವಿ ಸಂಘರ್ಷಣೆಯನ್ನು ಕಡಿಮೆ ಮಾಡುವುದು, ಇಂತಹ ಜವಾಬ್ದಾರಿಯನ್ನು ಹೊತ್ತಿರುವ ಅರಣ್ಯ ಇಲಾಖೆಗೀಗ ರಕ್ಷಣೆಯೊಡನೆ ಇತರ ಹಲವಾರು ಕಾರ್ಯಕ್ರಮಗಳ ಜವಾಬ್ದಾರಿಯನ್ನು ಭುಜದ ಮೇಲೆ ಹೇರಲಾಗಿದೆ. ಮಹಾತ್ಮಾ ಗಾಂಧೀ ಗ್ರ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಹಲವು ಗ್ರಾಮೀಣ ಅಭಿವೃದ್ಧಿ ಯೋಜನೆಗಳು, ಪ್ರವಾಸೋದ್ಯಮ, ಕಾಡಿನಲ್ಲಿ ರಸ್ತೆ ನಿರ್ಮಿಸುವುದು, ಸೇತುವೆ ಕಟ್ಟುವುದು ಹೀಗೆ ಹಲವಾರು ಹೊಣೆಗಾರಿಕೆಗಳು. ಹೀಗಿದ್ದಾಗ ವನ್ಯಜೀವಿಗಳನ್ನು ಕಾಯುವ ಕೆಲಸಕ್ಕೆ ಸಮಯವೆಲ್ಲಿ?

ಈ ಎಲ್ಲಾ ಸಮಸ್ಯೆಗಳೊಡನೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದಲ್ಲಿ ಶೇಕಡ ಐವತ್ತಕ್ಕಿಂತ ಹೆಚ್ಚು ಸಿಬ್ಬಂದಿಗಳ ಕೊರತೆ. ಇರುವ ಸಿಬ್ಬಂದಿಗಳಿಗೆ ಸರಿಯಾದ ಸೌಲಭ್ಯ, ಸೌಕರ್ಯಗಳೇ ಇಲ್ಲ. ಕಾಡಿನ ದುರ್ಗಮ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವ ಈ ಅರಣ್ಯ ರಕ್ಷಕರು ಮತ್ತು ವೀಕ್ಷಕರ ಗತಿ ಯಾರಿಗೂ ತಿಳಿಯದ ವಿಷಯ. ಅದರಲ್ಲೂ ತಾತ್ಕಾಲಿಕ ನೌಕರರ ಪಾಡು ಬಲು ಕ್ಲಿಷ್ಟ. ಸಂಬಳ, ಮೇಲಧಿಕಾರಿಯ ಕೃಪೆಯ ಮೇಲಿರುತ್ತದೆ. ಹುಲಿ ಯೋಜನೆ ಪ್ರದೇಶದಲ್ಲಿ ಕೆಲಸ ಮಾಡುವವರಿಗೆ ಯೋಜನಾ ಭತ್ಯೆಯನ್ನು ಕೇಂದ್ರ ಸರ್ಕಾರ ಕೂಟ್ಟರೂ, ಹಲವು ಬಾರಿ ಕೆಳ ಮಟ್ಟದ ನೌಕರರಿಗೆ ತಲುಪುವುದೇ ಇಲ್ಲ. ರಾಜ್ಯದ ಪ್ರತಿಷ್ಠಿತ ರಾಷ್ಟ್ರೀಯ ಉದ್ಯಾನವೊಂದರಲ್ಲಿ ಈ ವರ್ಷ ಅಧಿಕಾರಿಯೊಬ್ಬರು ತಮ್ಮ ಭತ್ಯೆಯನ್ನು ಮಾತ್ರ ಕರ್ತವ್ಯ ಲೋಪವಾಗದಂತೆ ಶಿಸ್ತಿನಿಂದ ತೆಗೆದುಕೊಂಡು, ನೌಕರರ ಹುಲಿ ಯೋಜನಾ ಭತ್ಯೆಯನ್ನು ಹಂಚಲೇ ಇಲ್ಲ. ಹಣವೆಲ್ಲ ಸರ್ಕಾರಕ್ಕೆ ಹಿಂದಿರುಗಿದೆ. ಹೀಗಿರುವಾಗ ಕಾಡು ಕಾಯುವ ಸಿಬ್ಬಂದಿಗೆ ಬೇಟೆ ನಿಗ್ರಹಿಸಿರೆಂದು ಹೇಳಲು ಕಷ್ಟವಾಗುತ್ತದೆ.

ವನ್ಯಜೀವಿ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುವವರು ಕಾಡಿನಲ್ಲಿ ಗಸ್ತು ತಿರುಗುವ ಬೇಟೆನಿಗ್ರಹ ದಳಗಳು. ಪ್ರತೀ ದಿನವೂ ಕಾಡಿನ ಆಯಕಟ್ಟು ಪ್ರದೇಶಗಳಲ್ಲಿ ಗಸ್ತು ತಿರುಗುವುದು, ಬೇಟೆಯಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ಪತ್ತೆ ಹಚ್ಚುವುದು, ವನ್ಯಜೀವಿ ಸಂರಕ್ಷಣೆಗೆ ಅತ್ಯುತ್ತಮ ಫಲಿತಾಂಶಗಳನ್ನು ತಂದು ಕೂಟ್ಟ ಕಾರ್ಯ ವಿಧಾನ. ಹಿಂದೆ ಹಲವು ಅಭಯಾರಣ್ಯ, ರಾಷ್ಟ್ರೀಯ ಉದ್ಯಾನಗಳಲ್ಲಿ ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಾಡಿದ ಉತ್ತಮ ಕಾರ್ಯಗಳಿಂದ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿತ್ತು. ಆದರೆ ಇಂದು ಈ ಬೇಟೆ ನಿಗ್ರಹದ ವಿಧಾನದಲ್ಲಿ ನಂಬಿಕೆಯಿರುವ ಅಧಿಕಾರಿಗಳೇ ಕಡಿಮೆ. ಕಾಡಿನಲ್ಲಿ ನಡೆದಾಡುವ, ವನ್ಯಜೀವಿಗಳನ್ನು ನೋಡಿ ಸಂತೋಷ ಪಡುವ, ನಿಸರ್ಗದ ಬಗ್ಗೆ ಉತ್ಕಟ ಭಾವನೆಯಿರುವ ಅಧಿಕಾರಿಗಳು ಕೂಡ ನಶಿಸುವ ಹಂತದಲ್ಲಿದ್ದಾರೆ. ಕಾಡಿನಲ್ಲಿ ಗಸ್ತು ತಿರುಗದಿದ್ದರೆ ಉರುಳು, ದವಡೆ ಕತ್ತರಿಗಳನ್ನು ಪತ್ತೆ ಹಚ್ಚುವುದು ಅಸಾಧ್ಯ.

ಕಾಡಿಗೇ ಹೋಗದ ಪರಿಸ್ಥಿತಿ ಅಧಿಕಾರಿಗಳಲ್ಲಷ್ಟೇ ಅಲ್ಲ ಸರ್ಕಾರೇತರ ಸಂಸ್ಥೆಗಳು, ವನ್ಯಜೀವಿ ವಿಜ್ಞಾನಿಗಳಲ್ಲೂ ಕೂಡ ಪ್ರಚಲಿತ. ಹಲವಾರು ತಜ್ಞರುಗಳು ಸಭೆ, ಗೋಷ್ಠಿ, ಮೇಳಗಳಲ್ಲೇ ಸಮಯ ವ್ಯಯಿಸುತ್ತಾರೆ. ಆದರೆ ಸರ್ಕಾರಕ್ಕೆ ಪ್ರತಿದಿನವೂ ವನ್ಯಜೀವಿ ಸಂರಕ್ಷಣೆ ಹೇಗೆ ಮಾಡಬೇಕೆನ್ನುವ ಪಾಠ ಹೇಳುವುದಂತೂ ಮರೆಯುವುದಿಲ್ಲ.

೧೯ ಮತ್ತು ೨೦ನೇ ಶತಮಾನದಲ್ಲಿಐರೋಪ್ಯ ರಾಷ್ಟ್ರಗಳಲ್ಲಾದ ಅತಿಯಾದ ಬೇಟೆಯಿಂದ ಅಲ್ಲಿದ್ದ ಹಲವಾರು ವನ್ಯಜೀವಿಗಳು ನಶಿಸಿ ಹೋದವು. ಸ್ಕಾಟ್‌ಲ್ಯಾಂಡ್‌ನಿಂದ ತೋಳಗಳು, ಸ್ವಿಟ್ಜ್‌ರ್‌ಲ್ಯಾಂಡ್‌ನಿಂದ ಕರಡಿ ಮತ್ತು ಲಿಂಕ್ಸ್, ಪೋಲೆಂಡ್‌ನಿಂದ ಕಾಡೆಮ್ಮೆ, ನೆದರ್‌ಲ್ಯಾಂಡ್ಸ್‌ನಿಂದ ಹಂದಿ ಮೀನು (ಡಾಲ್ಫಿನ್), ಸ್ಪೇನ್‌ನಿಂದ ಬೊಕ್ಕ ತಲೆಯ ಕೆಂಬರಲು (ಐಬಿಸ್) ಹಕ್ಕಿ, ಹೀಗೆ ಹತ್ತಾರು ಉದಾಹರಣೆಗಳಿವೆ. ಆ ವನ್ಯಜೀವಿಗಳನ್ನು ಹಿಂದಕ್ಕೆ ತರಲು ಇಂದು ಅದೇ ದೇಶಗಳು ಮಿಲಿಯಾಂತರ ಡಾಲರ್ ಹಣ ವ್ಯಯ ಮಾಡಲು ತಯಾರಾಗಿವೆ. ಆ ದೇಶಗಳು ಮಾಡಿರುವ ತಪ್ಪುಗಳಿಂದ ಪಾಠ ಕಲಿಯುವುದು ಜಾಣತನ, ಆದರೆ ಅದೇ ತಪ್ಪನ್ನು ನಾವೂ ಮಾಡುವುದು ಮೂರ್ಖತನವಾಗುತ್ತದೆ.

ಹಿಂದೆ ೮೦ರ ದಶಕಗಳಲ್ಲಿ ಅರಣ್ಯ ಇಲಾಖೆಯ ಉತ್ತಮ ಕಾರ್ಯಗಳಿಂದ ವನ್ಯಜೀವಿಗಳು ೮೦ ಮತ್ತು ೯೦ರ ದಶಕಗಳಲ್ಲಿ ಸುಧಾರಿಸಿಕೊಂಡಿದ್ದವು. ಆದರೆ ಈಗ ವನ್ಯಜೀವಿ ಸಂರಕ್ಷಣಾ ಕಾರ್ಯವೇ ದಿಕ್ಕು ಬದಲಿಸುತ್ತಿದೆ. ತನ್ನ ಮುಖ್ಯ, ನೇರ ಗುರಿಯಿಂದ ಹಲವಾರು ದಿಕ್ಕುಗಳಿಗೆ ತಿರುಗಿದೆ. ಅದನ್ನು ತಕ್ಷಣವೇ ಸರಿಪಡಿಸದಿದ್ದರೆ ನಮ್ಮ ದೇಶದ ಬಹುಮೂಲ್ಯ ವನ್ಯಜೀವಿಗಳು ನಾಶವಾಗುವ ಪರಿಸ್ಥಿತಿ ಬರಬಹುದು. ಬೇಟೆಯನ್ನು ಕಡಿಮೆ ಮಾಡಲು ಅದು ಪ್ರತಿದಿನದ ಸಮಸ್ಯೆಯೆಂದು ಗುರುತಿಸುವುದು ಬಹು ಮುಖ್ಯ. ಬೇಟೆನಿಗ್ರಹ ಕಾಲ್ದಳಗಳು ಸರ್ಮರ್ಥವಾಗಿ ಕಾರ್ಯ ನಿರ್ವಹಿಸುವಂತಾಗಬೇಕು, ಅದನ್ನು ಗುರುತಿಸಿ ಕೆಳ ವರ್ಗದ ಸಿಬ್ಬಂದಿಗಳನ್ನು ಹುರಿದುಂಬಿಸಿ ಕೆಲಸ ಮಾಡುವ ಅಧಿಕಾರಿಗಳು ಬೇಕು. ಇಲ್ಲವಾದಲ್ಲಿ ಇರುವ ಹಲವಾರು ಒತ್ತಡಗಳ ಮಧ್ಯೆ ವನ್ಯಜೀವಿ ಸಂರಕ್ಷಣೆ ಹಲವಾರು ದಶಕಗಳ ಹಿಂದಿದ್ದ ಪರಿಸ್ಥಿತಿಗೆ ತಲುಪುವ ಸಾಧ್ಯತೆಯಿದೆ.




ಈ ಲೇಖನದ ಪರಿಷ್ಕೃತ ಆವೃತ್ತಿ ದಿನಾಂಕ ೨೪-೦೫-೨೦೧೨ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ

1 comment:

  1. ಇಂದು ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದು ನಿಜ.ನಮ್ಮ ಸರ್ಕಾರಗಳು ಅರಣ್ಯದ ಬಗ್ಗೆ ಕಾಳಜಿ ವಹಿಸಿ ಅರಣ್ಯ ಇಲಾಖೆಗೆ ಹೆಚ್ಚಿನ ಸಿಬ್ಬಂದಿಯನ್ನು ನೇಮಿಸುವ ಅವಶ್ಯಕತೆ ಇದೆ .ಹಾಗೆಯೇ ಅರಣ್ಯ ಇಲಾಖೆ ಹುದ್ದೆಗಳಿಗೆ ಸೇರಲು ನಡೆಸುವ ಪರೀಕ್ಷಾ ವಿಧಾನಗಳಲ್ಲೂ ತಿದ್ದುಪಡಿತರುವ ಅವಶ್ಯಕತೆ ಇದೆ.ಇಂದು ನೂರಾರು ಪರಿಸರ ಹಾಗು ವನ್ಯ ಜೀವಿ ಪ್ರಿಯರು ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.ಇಂತಹ ವನ್ಯ ಜೀವಿ ಸಂರಕ್ಷಣೆ ಕಾಯಕದಲ್ಲಿ ಆಸಕ್ತಿ ಇರುವವರಿಗೆ ಪ್ರೋತ್ಸಾಹ ನೀಡುವ ಕೆಲಸ ಆಗಬೇಕಿದೆ.ಆಗ ಮಾತ್ರ ಈ ವನ್ಯ ಜೀವಿ ಸಂರಕ್ಷಣೆ ಯಶಸ್ವಿಯಾಗುವುದು

    ಲೇಖನ ತುಂಬಾ ಚೆನ್ನಾಗಿದೆ.ಧನ್ಯವಾದಗಳು

    ReplyDelete