Tuesday, June 25, 2013

ಬೆಂಗಳೂರಿನ ಆನೆ ಸಮಸ್ಯೆ

ಬೆಂಗಳೂರು ಅಥವಾ ದೊಡ್ಡ ನಗರಗಳಿಗೆ ಆನೆಗಳ ಹಿಂಡು ದಾಳಿ ಇಟ್ಟ ಪ್ರತಿ ಸಮಯದಲ್ಲೂ ಆನೆ- ಮಾನವ ಸಂಘರ್ಷದ ವಿಷಯ ಮುಖ್ಯವಾಹಿನಿಗೆ ಬಂದು ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ ಆಗುತ್ತದೆ. ಪ್ರತಿಯೊಬ್ಬರು ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಹಿಡಿಯುವತ್ತಲೇ ಗಮನ ಹರಿಸುತ್ತಾರೆ. ತಕ್ಷಣದ ಸವಾಲುಗಳಿಗೆ ಪರಿಹಾರ ಸಿಕ್ಕ ತಕ್ಷಣ ಈ ವಿಷಯ ಮಹತ್ವ ಕಳೆದುಕೊಳ್ಳುತ್ತದೆ.

ಆನೆಗಳು ಯಾಕೆ ಅಧಿಕ ಸಂಖ್ಯೆಯಲ್ಲಿ ನೈಸರ್ಗಿಕ ಆವಾಸಸ್ಥಾನವನ್ನು ಬಿಟ್ಟು ನಾಡಿನೊಳಗೆ ದಾಳಿ ಇಡುತ್ತಿದೆ ಎಂಬ ಪ್ರಾಥಮಿಕ ಪ್ರಶ್ನೆಗೆ ಸಮಗ್ರ ಪರಾಮರ್ಶೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದರೆ ತಳಸ್ಪರ್ಶಿಯಾದ ಪರಿಹಾರ ಸಿಗುವುದಿಲ್ಲ. ಈ ಪ್ರಶ್ನೆಯನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ಸ್ಥಳೀಯ ಹಾಗೂ ಭೂದೃಶ್ಯ (ಲ್ಯಾಂಡ್ ಸ್ಕೇಪ್) ಮಟ್ಟದ ಸಮಸ್ಯೆಗಳು ಹೊರಹೊಮ್ಮುತ್ತವೆ. ಈ ಸಮಸ್ಯೆಗಳಿಗೆ ಅಲ್ಪಾವಧಿ ಹಾಗೂ ದೀರ್ಘಾವಧಿ ಪರಿಹಾರಗಳು ಇವೆ.
ಕಾಳ್ಗಿಚ್ಚು, ಜಾನುವಾರು ಹಾಗೂ ಮತ್ತಿತರ ಪ್ರಾಣಿಗಳಿಂದ ಆಹಾರಕ್ಕಾಗಿ ಎದುರಾಗುವ ಸ್ಪರ್ಧೆ ಮಾತ್ರವಲ್ಲದೆ ಇತರ ತೊಂದರೆಗಳ ಕಾರಣದಿಂದ ಆನೆಗಳ ಆವಾಸಸ್ಥಾನ ಹಾಳಾಗುತ್ತಿದೆ. ಇದು ಸ್ಥಳೀಯ ಮಟ್ಟದ ಸಮಸ್ಯೆ. ಹಾಗೆಯೇ ಆನೆ ತಡೆಗೆ ಆನೆ ಕಂದಕ ಸೇರಿದಂತೆ ವಿದ್ಯುತ್ ತಂತಿ ಬೇಲಿಗಳ ಅಸಮರ್ಪಕ ನಿರ್ವಹಣೆಯೂ ಸಂಘರ್ಷಕ್ಕೆ ಮೂಲ ಕಾರಣವಾಗುತ್ತಿದೆ. ಹಾಳಾದಲ್ಲಿ ಮತ್ತೆ ಅಂತಹ ಬೇಲಿಗಳು ತಕ್ಷಣ ನಿರ್ಮಾಣವಾಗುವಂತೆ ನೋಡಿಕೊಳ್ಳಬೇಕು.

ಬಂಡಿಪುರ ಹುಲಿ ಅಭಯಾರಣ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಉತ್ತಮ ನಿರ್ವಹಣೆಯಿಂದಾಗಿ ಸಂಘರ್ಷಕ್ಕೆ ದೊಡ್ಡ ಪ್ರಮಾಣದಲ್ಲಿ ಕಡಿವಾಣ ಹಾಕಲು ಸಾಧ್ಯವಾಗಿದೆ. 2008-2011ರ ಅವಧಿಯಲ್ಲಿ ಬಂಡಿಪುರದಲ್ಲಿ ನಡೆದ ಸಂಘರ್ಷದ ಕಾರಣದಿಂದಾಗಿ 18,972 ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳಲ್ಲಿ ನಾಲ್ಕು ಜೀವಗಳಿಗೆ ಹಾನಿಯೂ ಆಗಿತ್ತು. ಆದರೆ, 2012ರ ಅವಧಿಯಲ್ಲಿ ಪ್ರಕರಣಗಳ ಸಂಖ್ಯೆ 500ಕ್ಕಿಂತಲೂ ಕಡಿವೆು ಆಗಿತ್ತು. ಮಾನವ ಮೃತಪಟ್ಟ ಯಾವುದೇ ಘಟನೆಗಳು ಸಂಭವಿಸಿಲ್ಲ.
ದೊಡ್ಡ ಪ್ರಾಣಿಗಳಾಗಿರುವ ಆನೆಗಳು ಬಹುದೂರದವರೆಗೆ ಓಡಾಡುವ ಸಾಮರ್ಥ್ಯ ಹೊಂದಿವೆ. ಅವುಗಳ ಸಂಚಾರಕ್ಕೆ ವಿಸ್ತಾರದ ಸ್ಥಳ ಅಗತ್ಯ ಇದೆ. ಆನೆಗಳ ಉಳಿವಿಗಾಗಿ ಹೆಚ್ಚಿನ ಕಾಡನ್ನು ಉಳಿಸಿಕೊಳ್ಳ ಕೊಳ್ಳುವುದು ಅವಶ್ಯಕ.

ಮಾನವ ಹಾಗೂ ಆನೆ ಸಂಘರ್ಷದ ವೈಜ್ಞಾನಿಕ  ದಾಖಲೀಕರಣದಿಂದಾಗಿ ಸಮಸ್ಯೆಯ ಅಪಾಯದ ಸ್ಥಳಗಳನ್ನು ಗುರುತಿಸಲು ಸಾಧ್ಯವಾಗಿದೆ. ನಮ್ಮ ವಿಶ್ಲೇಷಣೆಯ ಪ್ರಕಾರ, 2008-11ರ ಅವಧಿಯಲ್ಲಿ ರಾಜ್ಯದ ಭೌಗೋಳಿಕ ವಿಸ್ತೀರ್ಣದ ಶೇ 9.5ರಷ್ಟು ಪ್ರದೇಶದಲ್ಲಿ ಇರುವ 1,078 ಗ್ರಾಮಗಳು ಆನೆ ಸಂಘರ್ಷದಿಂದ ಹಾನಿಗೊಳಗಾಗಿವೆ

ಪ್ರಮುಖವಾಗಿ, ಆನೆಗಳ  ಆವಾಸಸ್ಥಾನಗಳ ಛಿದ್ರವಾಗುತ್ತಿರುವುದನ್ನು ತಡೆಯಲು ದೀರ್ಘಾವಧಿ ಯೋಜನೆಗಳನ್ನು ರೂಪಿಸಬೇಕು. ಹೆದ್ದಾರಿಗಳು, ಆಣೆಕಟ್ಟೆ, ಪೈಪ್‌ಲೈನ್‌ಗಳು ಹಾಗೂ ಕಿರು ಜಲವಿದ್ಯುತ್ ಯೋಜನೆಗಳನ್ನು ಅನುಷ್ಠಾನ ಮಾಡುವಾಗ ಜಾಗರೂಕತೆಯಿಂದ ಯೋಜನೆಗಳನ್ನು ರೂಪಿಸುವುದು ಅಭಿವೃದ್ಧಿ ಹಾಗೂ ಆನೆಗಳ ಸಂರಕ್ಷಣೆಯ ದೃಷ್ಟಿಯಿಂದ ಅಗತ್ಯವಾಗಿದೆ. ಕೆಲವು ಪ್ರದೇಶಗಳಲ್ಲಿ ಇಂತಹ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳದೆ ಇರುವುದೇ ಉತ್ತಮ. 
ಆನೆಗಳಿರುವ ಬನ್ನೇರುಘಟ್ಟ, ಕಾವೇರಿ ನದಿ ದಂಡೆ, ಮಹದೇಶ್ವರ ಬೆಟ್ಟ ಹಾಗೂ ಪಕ್ಕದ ತಮಿಳುನಾಡಿನ ತಳಿ,  ಹೊಸೂರು, ಬರಗೂರು ಹಾಗೂ ಇತರ ಮೀಸಲು ಅರಣ್ಯ ಪ್ರದೇಶಗಳಲ್ಲಿ ಎರಡೂ ಸರ್ಕಾರಗಳು ಕೂಡಿ ಕ್ರಿಯಾ ಯೋಜನೆಯನ್ನು ರೊಪಿಸಿ ಅನುಷ್ಟನಗೊಳಿಸಬೇಕು. ವನ್ಯಜೀವಿಗಳ ಸಂರಕ್ಷಣೆಗೆ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಆ ಪ್ರದೇಶಗಳನ್ನು ಸಂರಕ್ಷಣೆ ಮಾಡುವ ಕಾರ್ಯ ತುರ್ತಾಗಿ ಆಗಬೇಕಿದೆ. 


ಆನೆಗಳ ಪರಿಸರ ಅವಶ್ಯಕತೆಗಳನ್ನು ಅರಿತುಕೊಂಡು `ಸಮಗ್ರ ಕರ್ನಾಟಕ ಆನೆ ಸಂರಕ್ಷಣಾ ಯೋಜನೆ'ಯ ಅನುಷ್ಠಾನ ಹಾಗೂ ಅಭಿವೃದ್ಧಿಪಡಿಸಲು ಈಗ ಸೂಕ್ತ ಸಮಯ. ಇಲ್ಲದಿದ್ದರೆ ಆನೆ ಹಾಗೂ ಮಾನವ ಸಂಘರ್ಷ ಪ್ರಕರಣ ಗಂಭೀರ ಸ್ವರೂಪದಲ್ಲಿಭವಿಷ್ಯದಲ್ಲೂ ಮುಂದುವರಿಯುವುದು ಖಚಿತ.

1 comment: